ಬುಧವಾರ, ನವೆಂಬರ್ 13, 2019
17 °C
ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಪ್ರತಿಪಾದನೆ

‘ಪ್ರಫುಲ್‌ ಪಟೇಲ್‌ ವಿರುದ್ಧ ಇ.ಡಿ ಬಳಿ ಸ್ಪಷ್ಟ ದಾಖಲೆ’

Published:
Updated:

ಮುಂಬೈ: ‘ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌ ಮತ್ತು ಪಾತಕಿ ಇಕ್ಬಾಲ್‌ ಮಿರ್ಚಿ ಅವರ ಪತ್ನಿಯ ಹಸ್ತಾಕ್ಷರವನ್ನು ಒಳಗೊಂಡಿದ್ದ ದಾಖಲೆಗಳು ಲಭ್ಯವಾದ ನಂತರವೇ ಜಾರಿ ನಿರ್ದೇಶನಾಲಯ ಪಟೇಲ್‌ ವಿರುದ್ಧ ತನಿಖೆಯನ್ನು ಚುರುಕುಗೊಳಿಸಿದೆ’ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಮಿರ್ಚಿ ಹೊಂದಿರುವ ಕಾನೂನುಬಾಹಿರ ಆಸ್ತಿ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಪಟೇಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಅಕ್ಟೋಬರ್‌ 18ರಂದು ವಿಚಾರಣೆಗೆ ಹಾಜರಾಗಲು ಆದೇಶಿಸಿತ್ತು.

‘ಇ.ಡಿ ಬಳಿ ಮಿರ್ಚಿ ಪತ್ನಿ ಹಜ್ರಾ ಇಕ್ಬಾಲ್ ಮೆಮೊನ್‌ ಮತ್ತು ಪಟೇಲ್‌ ಅವರ ಸಹಿ ಇರುವ ದಾಖಲೆಗಳಿವೆ. ಎನ್‌ಸಿಪಿ ಬೆನ್ನಿಗೆ ದೊಡ್ಡ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಇತಿಹಾಸವೇ ಇದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಇಕ್ಬಾಲ್ ಮಿರ್ಚಿ ಕೆಲ ವರ್ಷಗಳ ಹಿಂದೆ ಲಂಡನ್‌ನಲ್ಲಿ ಮೃತಪಟ್ಟಿದ್ದರು. ಪಟೇಲ್‌ ಅವರು ಪತ್ನಿ ಜತೆಗೂಡಿ ಸ್ಥಾಪಿಸಿರುವ ರಿಯಲ್ ಎಸ್ಟೇಟ್‌ ಕಂಪನಿ ಮತ್ತು ಮಿರ್ಚಿ ಪತ್ನಿ ನಡುವೆ ಆಗಿರುವ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ ಈಗ ತನಿಖೆ ನಡೆಸುತ್ತಿದೆ.

ಮಿರ್ಚಿ ಅಥವಾ ಆತನ ಪತ್ನಿ ಜೊತೆಗೆ ವ್ಯಾವಹಾರಿಕ ಸಂಪರ್ಕ ಇತ್ತು ಎಂದು ಪಟೇಲ್‌ ಮಂಗಳವಾರವಷ್ಟೇ ತಿರಸ್ಕರಿಸಿದ್ದರು. ‘ಆಧಾರವಿಲ್ಲದೆ ಯಾವುದೇ ತನಿಖೆ ಆಗುವುದಿಲ್ಲ. ತನಿಖಾ ಸಂಸ್ಥೆ ಬಳಿ ದಾಖಲೆಗಳು ಇರಲೇಬೇಕು’ ಎಂದು ಗೋಯಲ್‌ ಪ್ರತಿಪಾದಿಸಿದರು.

ಕಾಂಗ್ರೆಸ್ ಮತ್ತು ಎನ್‌ಸಿಪಿಯ ಕೆಲವೇ ನಾಯಕರನ್ನು ಗುರಿಯಾಗಿಸಿ ತನಿಖೆ ನಡೆಯುತ್ತಿರುವುದರ ಕುರಿತು ಗಮನಸೆಳೆದಾಗ, ‘ಕಾಂಗ್ರೆಸ್‌ ಅಥವಾ ಎನ್‌ಸಿಪಿಯಿಂದ ಬಿಜೆಪಿ ಸೇರಿರುವ ಯಾವುದೇ ನಾಯಕರ ವಿರುದ್ಧ ಕ್ರಿಮಿನಲ್‌ ಆರೋಪಗಳಿಲ್ಲ. ನಾವು ಕೂಲಂಕಷವಾಗಿ ಪರಿಶೀಲಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)