ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟ್‌ ವಾದ್ರಾಗೆ ಇ.ಡಿ. ನೋಟಿಸ್‌

ಹಣ ಅಕ್ರಮ ವರ್ಗಾವಣೆ ಆರೋಪ‍
Last Updated 30 ನವೆಂಬರ್ 2018, 19:01 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ರಾಬರ್ಟ್‌ ವಾದ್ರಾ ಅವರಿಗೆ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್‌ ನೀಡಿದೆ.

ಬೀಕಾನೆರ್‌ನಲ್ಲಿ ಜಮೀನು ಕಬಳಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಆರೋಪದ ಪ್ರಕರಣ ಇದು.

ತನಿಖಾಧಿಕಾರಿಯ ಮುಂದೆ ಮುಂದಿನ ವಾರ ಹಾಜರಾಗುವಂತೆ ವಾದ್ರಾ ಅವರಿಗೆ ನೋಟಿಸ್‌ ನೀಡಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಹೇಳಿಕೆ ದಾಖಲಿಸುವುದಕ್ಕಾಗಿ ಅವರನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಪ್ರಕರಣದಲ್ಲಿ ಅವರಿಗೆ ನೀಡಲಾಗುತ್ತಿರುವ ಎರಡನೇ ನೋಟಿಸ್‌ ಇದು.

ಸ್ಥಳೀಯ ತಹಶೀಲ್ದಾರ್‌ ದೂರು ದಾಖಲಿಸಿದ ಬಳಿಕ 2016ರ ಅಗಸ್ಟ್‌ನಲ್ಲಿ ರಾಜಸ್ಥಾನ ಪೊಲೀಸರು 18 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಸೇನೆಯ ಗುಂಡು ಹಾರಾಟ ತರಬೇತಿ ಪ್ರದೇಶವನ್ನು ವಿಸ್ತರಿಸಲು ಮೀಸಲು ಇರಿಸಲಾಗಿದ್ದ ಸ್ಥಳವನ್ನು ‘ನಕಲಿ ಮತ್ತು ತಿದ್ದಿದ ದಾಖಲೆ’ಗಳನ್ನು ಬಳಸಿ ಖಾಸಗಿ ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂಬ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂಬ ಅನುಮಾನ ಇ.ಡಿಗೆ ಇದೆ. ಹಾಗಾಗಿ ತನಿಖೆ ನಡೆಸಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ಅವರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ತನಿಖಾಧಿಕಾರಿಯ ಮುಂದೆ ಅವರು ಹಾಜರಾಗಿಲ್ಲ. ಎರಡನೇ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ವಾದ್ರಾ ಅವರು ಹೆಸರು ಸೇರಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಅಧಿಕಾರಿಗಳು ಮತ್ತು ಇತರರ ₹1.18 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ.

ಸ್ಕೈಲೈಟ್‌ ಹಾಸ್ಪಿಟಾಲಿಟಿ ಪ್ರೈವೇಟ್‌ಲಿ. ಕಂಪನಿಯ ಕಾರ್ಯನಿರ್ವಹಣೆ ಬಗ್ಗೆ ವಾದ್ರಾ ಅವರಿಗೆ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ. ಈ ಸಂಸ್ಥೆಯ ಜತೆಗೆ ವಾದ್ರಾ ಅವರಿಗೆ ನಂಟು ಇದೆ ಎಂದು ಹೇಳಲಾಗಿದೆ.

ಈ ಸಂಸ್ಥೆಯ ಹೆಸರಿಗೆ ಬೀಕಾನೆರ್‌ನ 34 ಗ್ರಾಮಗಳಿಗೆ ಸೇರಿದ ಜಮೀನನ್ನು ವರ್ಗಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT