ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ವರದಿ ಮಾಡಿದವರ ಮೇಲೆ ಕ್ರಿಮಿನಲ್ ಕೇಸ್ ಬೆದರಿಕೆ: ಎಡಿಟರ್ಸ್ ಗಿಲ್ಡ್ ಖಂಡನೆ

Last Updated 7 ಮಾರ್ಚ್ 2019, 8:22 IST
ಅಕ್ಷರ ಗಾತ್ರ

ನವದೆಹಲಿ: ‘ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ‘ದಿ ಹಿಂದೂ’ ಸೇರಿದಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನುರಕ್ಷಣಾ ಇಲಾಖೆಯಿಂದ ಕಳುವಾದ ದಾಖಲೆಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ’ ಎನ್ನುವ ಸರ್ಕಾರದ ನಿಲುವನ್ನು ಸಂಪಾದಕರ ಒಕ್ಕೂಟ (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ)ಗುರುವಾರ ಖಂಡಿಸಿದೆ.

ಈ ದಾಖಲೆಗಳನ್ನು ಬಳಸಿದ ವಕೀಲರು ಮತ್ತು ಪತ್ರಕರ್ತರ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಪತ್ರಕರ್ತರ ವಿರುದ್ಧ ಅಧಿಕೃತ ಗೌಪ್ಯತಾ ಕಾಯ್ದೆ (ಅಫಿಶಿಯಲ್ ಸೀಕ್ರೆಟ್ ಆ್ಯಕ್ಟ್) ಬಳಸುವ ಯಾವುದೇ ಪ್ರಯತ್ನವು, ಪತ್ರಕರ್ತನಿಗೆ ತನ್ನ ಸುದ್ದಿಮೂಲ (ಸೋರ್ಸ್‌) ಬಿಟ್ಟುಕೊಡುವಂತೆ ಹೇರುವ ಒತ್ತಡಕ್ಕೆ ಸಮಾನವಾಗುತ್ತದೆ. ಸರ್ಕಾರ ಇಂಥ ಕ್ರಮಕ್ಕೆ ಮುಂದಾದರೆ ಅದು ಮಾಧ್ಯಮದ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂದು ಒಕ್ಕೂಟವು ಎಚ್ಚರಿಸಿದೆ.

‘ಈ ದಾಖಲೆಗಳನ್ನು ಬಳಸಿದ ಯಾವುದೇ ಪತ್ರಕರ್ತ ಅಥವಾ ವಕೀಲರ ವಿರುದ್ಧ ಕ್ರಮ ಜರುಗಿಸುವುದಿಲ್ಲ’ ಎಂದುಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಭರವಸೆ ನೀಡಿದ್ದಾರೆ. ಆದರೂ ಸರ್ಕಾರದ ಇಂಥ ನಿಲುವುಗಳನ್ನುಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿಯೇ ಪರಿಭಾವಿಸಬೇಕಾಗುತ್ತದೆ. ರಫೇಲ್‌ ಬಗ್ಗೆ ವರದಿ ಮಾಡುವುದು ಅಥವಾ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯವನ್ನು ಸರ್ಕಾರದ ಇಂಥ ಕ್ರಮಗಳು ಹತ್ತಿಕ್ಕುತ್ತವೆ’ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಸರ್ಕಾರದ ಪರ ವಾದ ಮಂಡಿಸಿ, ‘ದಿ ಹಿಂದೂ ದಿನಪತ್ರಿಕೆ ಮತ್ತುಎಎನ್‌ಐ ಸುದ್ದಿಸಂಸ್ಥೆಗಳು ರಫೇಲ್‌ಗೆ ಸಂಬಂಧಿಸಿದಂತೆ ಪ್ರಕಟಿಸಿರುವ ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಬಾರದು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಆ ಎರಡೂ ಪ್ರಕಾಶನ ಸಂಸ್ಥೆಗಳು ಮತ್ತು ವಕೀಲರೊಬ್ಬರ ವಿರುದ್ಧ (ಪ್ರಶಾಂತ್ ಭೂಷಣ್ ಇರಬಹುದು) ಅಧಿಕೃತ ಗೌಪ್ಯ ಕಾಯ್ದೆಯ ಅನ್ವಯ ಸರ್ಕಾರವು ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT