ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಆಯೋಗಕ್ಕೆ ₹ 8 ಕೋಟಿ ವೆಚ್ಚ

7
ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ; ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ

ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಆಯೋಗಕ್ಕೆ ₹ 8 ಕೋಟಿ ವೆಚ್ಚ

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆಗೆ ಎಂಟು ತಿಂಗಳು ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯೋಗ ರಾಜ್ಯದ ಮೂರು ಲೋಕಸಭೆ ಸ್ಥಾನಗಳಿಗೆ ಉಪ ಚುನಾವಣೆ ಘೋಷಿಸಿ, ಆಂಧ್ರದ ಐದು ಕ್ಷೇತ್ರಗಳನ್ನು ಕಡೆಗಣಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಆದರೆ, ರಾಜ್ಯದ ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಸಲೇಬೇಕಾದ ಅಗತ್ಯವನ್ನು ಆಯೋಗ ಪ್ರತಿಪಾದಿಸಿದೆ. ಆದರೆ, ಚುನಾವಣಾ ಪ್ರಕ್ರಿಯೆಗೆ ತಗಲುವ ವೆಚ್ಚ, ಶ್ರಮ ಮತ್ತಿತರ ಕಾರಣಗಳನ್ನು ಪರಿಗಣಿಸಿದರೆ ಅಗತ್ಯ ಇತ್ತೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಈಗ ಬಹು ಚರ್ಚೆಯ ವಿಷಯ.

ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್‌ ನಾಯಕರು, ಚುನಾವಣಾ ಆಯೋಗದ ನಡೆಗೆ ಅಚ್ಚರಿ ಮತ್ತು ವಿರೋಧ ವ್ಯಕ್ತಪಡಿಸಿದ್ದರು. ಚುನಾಯಿತ ಜನಪ್ರತಿನಿಧಿಗೆ ಕೇವಲ ನಾಲ್ಕೂವರೆ ತಿಂಗಳ ಅವಧಿ ಮಾತ್ರ ಸಿಗುತ್ತದೆ. ಹೀಗಾಗಿ ಅಗತ್ಯ ಇರಲಿಲ್ಲ’ ಎನ್ನುವುದು ಈ ನಾಯಕರ ವಾದ. ಬಿಜೆಪಿ ನಾಯಕರು ಒಲ್ಲದ ಮನಸ್ಸಿನಿಂದ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಪ್ರತಿ ಕ್ಷೇತ್ರಕ್ಕೆ ಆಯೋಗಕ್ಕೆ ₹ 8 ಕೋಟಿ ವೆಚ್ಚ: ಲೋಕಸಭಾ ಕ್ಷೇತ್ರ ಒಂದರಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ₹ 8 ಕೋಟಿ ವೆಚ್ಚ ಆಗಲಿದೆ.

ಲೋಕಸಭಾ ಚುನಾವಣೆಗೆ ಆರೇಳು ತಿಂಗಳುಗಳಷ್ಟೇ ಉಳಿದಿವೆ. ಮಂಡ್ಯ, ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೆ ತಲಾ ₹6.7 ಕೋಟಿ ವೆಚ್ಚ ಮಾಡಲಾಗಿತ್ತು. ಆಗ ಚುನಾವಣೆಗೆ ಒಟ್ಟು ₹3,427 ಕೋಟಿ ವೆಚ್ಚವಾಗಿತ್ತು. ಬೆಲೆ ಏರಿಕೆ ಕಾರಣದಿಂದ ಯಂತ್ರಗಳು ಹಾಗೂ ಮೌಲಸೌಕರ್ಯ ಭರಿಸಲು ಹೆಚ್ಚುವರಿ ₹1.3 ಕೋಟಿ ವೆಚ್ಚ ಮಾಡಬೇಕಿದೆ. ಇದರಲ್ಲಿ ಅಭ್ಯರ್ಥಿಗಳ ಚುನಾವಣಾ ಖರ್ಚು ಸೇರಿಲ್ಲ.

ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳ ಉಪಚುನಾವಣೆಗೆ ಒಟ್ಟು ₹6 ಕೋಟಿ ವೆಚ್ಚ ಆಗಬಹುದು. 2013ರ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೆ ₹ 65 ಲಕ್ಷ ವೆಚ್ಚ ಆಗಿತ್ತು.

ಲೋಕಸಭೆಗೆ ಉಪಚುನಾವಣೆ ಪ್ರಶ್ನಿಸಿ ಪಿಐಎಲ್

‘ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ರದ್ದುಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.

ತುಮಕೂರು ಜಿಲ್ಲೆಯ ಉರಡಿಗೆರೆ ಹೋಬಳಿ ಕದರನಹಳ್ಳಿ ತಾಂಡಾದ ವಕೀಲ ಎಲ್.ಎಸ್. ರಮೇಶ್ ನಾಯಕ್ ಸಲ್ಲಿಸಿರುವ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

‘ಕೇಂದ್ರ ಚುನಾವಣಾ ಆಯೋಗ ಅ.6ರಂದು ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ಇದನ್ನು ರದ್ದುಪಡಿಸಬೇಕು. ಒಂದು ವೇಳೆ ಈ ಅರ್ಜಿ ವಿಚಾರಣೆಗೆ ಪರಿಗಣಿಸಲ್ಪಡುವ ಮೊದಲೇ ಗೆಜೆಟ್ ಅಧಿಸೂಚನೆ ಪ್ರಕಟಗೊಂಡರೆ, ಚುನಾವಣೆ ನಡೆಸದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು’ ಎಂಬುದು ಅರ್ಜಿದಾರರ ಕೋರಿಕೆ.

‘ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಕಲಂ 151 ‘ಎ’ ಪ್ರಕಾರ ಯಾವುದೇ ಶಾಸನ ಸಭೆ ಚುನಾಯಿತ ಪ್ರತಿನಿಧಿಯ ಸದಸ್ಯತ್ವದ ಅವಧಿ 1 ವರ್ಷದ ಒಳಗಿದ್ದರೆ, ಅಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಡ್ಡಾಯವಲ್ಲ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

***

ಈ ಚುನಾವಣೆ ಅನಗತ್ಯ. ಆದರೆ, ಆಯೋಗ ಏಕೆ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಯುತ್ತಿಲ್ಲ. ಅನಿವಾರ್ಯವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಿದೆ

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಆಯೋಗ ಜ್ಞಾನ ಇಲ್ಲದೆ ಉಪಚುನಾವಣೆ ನಡೆಸುತ್ತಿದೆ. ಇದೊಂದು ಹುಚ್ಚಾಟ. ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಬಗ್ಗೆ ನಾವು ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ

–ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ಉಪಚುನಾವಣೆ ಗೆದ್ದವರು ಪಾರ್ಲಿಮೆಂಟ್ ಕಂಬ ನೋಡಿಕೊಂಡು ಬರಬೇಕಷ್ಟೇ. ಚುನಾವಣೆ ಬೇಡ ಎಂದು ರಾಷ್ಟ್ರಪತಿ ಮತ್ತು ಆಯೋಗಕ್ಕೆ ಪತ್ರ ಬರೆದಿದ್ದೇನೆ

–ಕಿಮ್ಮನೆ ರತ್ನಾಕರ, ಕಾಂಗ್ರೆಸ್‌ ಮುಖಂಡ

***

ಉಪ ಚುನಾವಣೆ: ಚುನಾವಣಾ ಆಯೋಗದ ಸ್ಪಷ್ಟನೆ

ನವದೆಹಲಿ: ರಾಜ್ಯದ ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿ, ಆಂಧ್ರದ ಕ್ಷೇತ್ರಗಳನ್ನು ಕೈಬಿಟ್ಟಿರುವುದಕ್ಕೆ ಕಾರಣ ನೀಡಿ ಚುನಾವಣಾ ಆಯೋಗ ಮಂಗಳವಾರ ಸ್ಪಷ್ಟೀಕರಣ ನೀಡಿದೆ.

ಲೋಕಸಭೆಯ ಅಥವಾ ವಿಧಾನಸಭೆ ಅವಧಿ ಪೂರ್ಣಗೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಇದ್ದಾಗ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಸಬೇಕು ಎಂಬ ನಿಯಮ ಇದೆ. 16ನೇ ಲೋಕಸಭೆ ಅವಧಿ 2019ರ ಜೂನ್‌ 3ಕ್ಕೆ ಕೊನೆಗೊಳ್ಳಲಿದ್ದು, ಕರ್ನಾಟಕದ ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಕ್ಷೇತ್ರದ ಸದಸ್ಯರ ರಾಜೀನಾಮೆಯು ಕಳೆದ ಮೇ 18 ಮತ್ತು ಮೇ 21ರಂದು ಅಂಗೀಕೃತಗೊಂಡಿವೆ. ಆ ದಿನಾಂಕದಿಂದ ಒಂದು ವರ್ಷಕ್ಕೂ ಅಧಿಕ ಅವಧಿಗೆ ಹಾಲಿ ಲೋಕಸಭೆ ಅಸ್ತಿತ್ವದಲ್ಲಿ ಇರುವುದರಿಂದ, ಈ ಮೂರೂ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಆದರೆ, ಆಂಧ್ರದ ವೈಎಸ್‌ಆರ್‌ ಕಾಂಗ್ರೆಸ್‌ನ ಐವರು ಸದಸ್ಯರ ರಾಜೀನಾಮೆಯು ಕಳೆದ ಜೂನ್‌ 18ರಂದು ಅಂಗೀಕೃತಗೊಂಡಿದ್ದು, ಅಲ್ಲಿಂದ ಲೋಕಸಭೆಯ ಅವಧಿಯು ಒಂದು ವರ್ಷಕ್ಕೂ ಕಡಿಮೆ ಇರುವುದರಿಂದ ಐದು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವ ಅನಿವಾರ್ಯತೆ ಇಲ್ಲ ಎಂಬುದು ಆಯೋಗದ ಸ್ಪಷ್ಟನೆಯಾಗಿದೆ.

1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 151 ‘ಎ’ ಪ್ರಕಾರ ಒಂದು ವರ್ಷಕ್ಕಿಂತ ಅಧಿಕ ಅವಧಿ ಬಾಕಿ ಇರುವ ಲೋಕಸಭೆ ಮತ್ತು ವಿಧಾನಸಭೆಯ ಸ್ಥಾನವನ್ನು ಖಾಲಿಯಾದ 6 ತಿಂಗಳೊಳಗೆ ಭರ್ತಿ ಮಾಡುವುದು ಕಡ್ಡಾಯ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !