ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಸಿಟ್ಟು, ರಾಷ್ಟ್ರದಲ್ಲಿ ಒಗ್ಗಟ್ಟು: ಮಮತಾ

ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ವಿರೋಧ ಪಕ್ಷಗಳ ರ‍್ಯಾಲಿ
Last Updated 13 ಫೆಬ್ರುವರಿ 2019, 20:26 IST
ಅಕ್ಷರ ಗಾತ್ರ

ನವದೆಹಲಿ: ಡೆಮಾಕ್ರಸಿಯು ‘ನಮೋಕ್ರಸಿ’ ಆಗಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ವಾತಾವರಣ ಇದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅಧಿಕಾರದಿಂದ ಎನ್‌ಡಿಎಯನ್ನು ದೂರವಿಡುವ ಉದ್ದೇಶದಿಂದ ಎಲ್ಲ ವಿರೋಧ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಒಗ್ಗಟ್ಟಿನ ಹೋರಾಟ ನಡೆಸಲಿವೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ವಿರುದ್ಧ ಹೋರಾಟ ಇದ್ದೇ ಇದೆ, ಆದರೆ ರಾಷ್ಟ್ರ ಮಟ್ಟದಲ್ಲಿ ಒಗ್ಗಟ್ಟಾಗಿ ಬಿಜೆಪಿ ವಿರೋಧ ಸೆಣಸುವುದಾಗಿ ಮಮತಾ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷವು ಜಂತರ್‌ ಮಂತರ್‌ನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಹಾಗೂ ಸಿಬಿಐ ನಡುವಿನ ತಿಕ್ಕಾಟವನ್ನು ಪ್ರಸ್ತಾಪಿಸಿದ ಅವರು, ಇಷ್ಟೊಂದು ಕೆಳಮಟ್ಟಕ್ಕಿಳಿದ ಸರ್ಕಾರವನ್ನು ತಾವು ನೋಡಿಲ್ಲ ಎಂದರು.

ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರು ರ್‍ಯಾಲಿಯಲ್ಲಿ ಉಪಸ್ಥಿತರಿದ್ದರು.

ಪ್ರಧಾನಿ ಉತ್ತರದಾಯಿ: ಭಾರತ ಮತ್ತು ಫ್ರಾನ್ಸ್ ನಡುವೆ ಆಗಿರುವ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ನಿಜಾಂಶವನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಬೇಕು. ಏಕೆಂದರೆ ಅವರು ದೇಶಕ್ಕೆ ಉತ್ತರದಾಯಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಎಎಪಿ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶಮಾಡಲು ಮೋದಿ ಹೊರಟಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಶಾರದಾ ಚಿಟ್‌ಫಂಡ್ ಹಗರಣ ಸಂಬಂಧ 40 ಮಂದಿ ಸಿಬಿಐ ಅಧಿಕಾರಿಗಳನ್ನು ದೆಹಲಿಯಿಂದ ಕಳುಹಿಸಿದ್ದು ಪಶ್ಚಿಮ ಬಂಗಾಳದ ಚುನಾಯಿತ ಸರ್ಕಾರದ ಮೇಲಿನ ದಾಳಿ ಎಂದು ಕೇಜ್ರಿವಾಲ್ ವ್ಯಾಖ್ಯಾನಿಸಿದರು.

ಮೋದಿ ಮತ್ತೆ ಪ್ರಧಾನಿ: ಮುಲಾಯಂ ಆಶಯ

ನರೇಂದ್ರ ಮೋದಿ ಅವರು ಮುಂದಿನ ಬಾರಿಯೂ ಪ್ರಧಾನಿಯಾಗಲಿ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಹಾರೈಸಿದ್ದಾರೆ.

16ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಅವರ ಈ ಮಾತು ಕೇಳಿದ ವಿರೋಧ ಪಕ್ಷಗಳ ಸದಸ್ಯರಿಗೆ ಅಚ್ಚರಿಯಾಯಿತು. ಆಡಳಿತ ಪಕ್ಷದ ಸದಸ್ಯರು ಮುಲಾಯಂ ಅವರ ಮಾತನ್ನು ಮೇಜು ತಟ್ಟಿ ಸ್ವಾಗತಿಸಿದರು. ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದರು. ಮೋದಿ ಕೈಮುಗಿದು ನಮಿಸಿದರು.

‘ಎಲ್ಲರನ್ನೂ ಜೊತೆಗೆ ಕರೆದೊಯ್ದ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರಧಾನಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ’ ಎಂದ ಅವರು, ‘ಸದನದ ಎಲ್ಲ ಸದಸ್ಯರೂ ಮತ್ತೊಮ್ಮೆ ಆರಿಸಿ ಬರಲಿ’ ಎಂದು ಶುಭ ಕೋರಿದರು.

ಮುಲಾಯಂ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ, ‘ಮಾಡಬೇಕಾದ ಕೆಲಸಗಳು ಇನ್ನಷ್ಟು ಇವೆ. ಮುಲಾಯಂ ಅವರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಧನ್ಯವಾದ’ ಎಂದು ಹೇಳಿದರು.

ಚುನಾವಣೆಗೆ ಉತ್ಸಾಹದ ಹೆಜ್ಜೆ: ಸೋನಿಯಾ

ದರ್ಪ, ಸೊಕ್ಕು ಮತ್ತು ಬೆದರಿಕೆಗಳೇ ಮೋದಿ ಸರ್ಕಾರದ ಸಿದ್ಧಾಂತಗಳು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಸಾಮಾನ್ಯ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿರುವ ರಾಹುಲ್ ಗಾಂಧಿಯನ್ನು ಪ್ರಶಂಸಿಸಿದರು.

ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸೋನಿಯಾ, ದೇಶದೆಲ್ಲೆಡೆ ಭೀತಿ ಹಾಗೂ ಕಲಹದ ವಾತಾವರಣ ಇದೆ ಎಂದಿದ್ದಾರೆ.

‘ಮುಂಬರುವ ಲೋಕಸಭಾ ಚುನಾವಣೆಗಳಿಗೆ ಹೊಸ ಉತ್ಸಾಹದಿಂದ ಹೋಗುತ್ತಿದ್ದೇವೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳು ನಮಗೆ ಹೊಸ ಭರವಸೆ ನೀಡಿವೆ’ ಎಂದು ಸೋನಿಯಾ ಹೇಳಿದ್ದಾರೆ.

‘ನಮ್ಮ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಗಣತಂತ್ರದ ಅಡಿಪಾಯಗಳು ಮೋದಿ ಅವರ ನೀತಿಯಿಂದ ವ್ಯವಸ್ಥಿತ ದಾಳಿಗೊಳಗಾಗುತ್ತಿವೆ’ ಎಂದು ಆರೋಪಿಸಿದ್ದಾರೆ.

ಸಾಂಸ್ಥಿಕ ವ್ಯವಸ್ಥೆಗಳನ್ನು ಹಾಳುಗೆಡವಲಾಗಿದೆ. ರಾಜಕೀಯ ಪ್ರತಿಸ್ಪರ್ಧಿಗಳನ್ನು ವಿಚಾರಣೆ ಹೆಸರಲ್ಲಿ ಹಣಿಯಲಾಗುತ್ತಿದೆ. ವಾಕ್‌ ಸ್ವಾತಂತ್ರ್ಯದ ದನಿಯನ್ನೂ ಮೌನವಾಗಿಸಲಾಗುತ್ತಿದೆ ಎಂದು ಅವರು ದೂರಿದರು.

‘ಮೋದಿ ಆಡಳಿತದಲ್ಲಿ ಸ್ಥಾಯಿ ಸಮಿತಿಗಳು ತಮ್ಮ ರೂಪ ಕಳೆದುಕೊಂಡವು. ಹಣಕಾಸು ಮಸೂದೆಯು ಸದನಗಳಲ್ಲಿ ಕಾನೂನುಬದ್ಧವಾಗಿ ಪರಿಶೀಲನೆಗೊಳಪಡದೇ ಅಂಗೀಕಾರ ಗಿಟ್ಟಿಸಿತು’ ಎಂದು ಸೋನಿಯಾ ಆರೋಪಿಸಿದ್ದಾರೆ.

‘ಜನರನ್ನು ದಾರಿತಪ್ಪಿಸಿ, ಮೋಸ ಹಾಗೂ ಅಪ್ರಾಮಾಣಿಕತೆಯಿಂದ ಜನಾದೇಶ ಪಡೆಯಲಾಗಿದೆ. ತಡವಾಗಿಯಾದರೂ ಮುಖವಾಡ ಬಯಲಾಗುವುದು ಖಚಿತ’ ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಅವರು ಸಭೆಯಲ್ಲಿ ಇದ್ದರು.

ಮಗನಿಗೆ ಶಹಬ್ಬಾಸ್‌ಗಿರಿ: ಪಕ್ಷದ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ‘ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವರು ಪಕ್ಷಕ್ಕೆ ಹೊಸ ಹುರುಪು ತಂದಿದ್ದಾರೆ’ ಎಂದು ಹೊಗಳಿದರು.

‘ಅಜೇಯರು ಎಂದು ಮೊದಲು ತಮ್ಮನ್ನು ಬಿಂಬಿಸಿಕೊಂಡಿದ್ದ ಎದುರಾಳಿಗಳನ್ನು ರಾಹುಲ್ ದಿಟ್ಟತನದಿಂದ ಎದುರಿಸಿದ್ದಾರೆ. ಲಕ್ಷಾಂತರ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಅವರಲ್ಲಿ ಸ್ಫೂರ್ತಿ ತುಂಬಿದ್ದಾರೆ’ ಎಂದು ಸೋನಿಯಾ ಶ್ಲಾಘಿಸಿದರು.

‘ರಾಹುಲ್ ಪಕ್ಷಕ್ಕಾಗಿ ದಣಿವರಿಯದೇ ದುಡಿದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳನ್ನೂ ತಲುಪುವ ಯತ್ನವನ್ನು ಅವರು ಮಾಡಿದ್ದಾರೆ. ಕ್ಷಿಪ್ರ ಆರ್ಥಿಕ ಪ್ರಗತಿ, ಸಂಪೂರ್ಣ ಸಾಮಾಜಿಕ ನ್ಯಾಯ, ರೈತರ ಅಭ್ಯುದಯ, ಯುವಜನರು, ಕಾರ್ಮಿಕರು, ಮಹಿಳೆಯರ ಏಳಿಗೆ ಕುರಿತಂತೆಇತರ ಪಕ್ಷಗಳ ಜತೆ ನಮ್ಮ ದೃಷ್ಟಿಕೋನವನ್ನು ಅವರು ಹಂಚಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಬೆಂಬಲಿಸಿದವರಿಗೆ ರಾಹುಲ್ ಧನ್ಯವಾದ:‘ಸಂಸತ್ ಅವಧಿಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಸಂಸತ್ತಿನಲ್ಲಿ ಇಷ್ಟುದಿನ ನನ್ನ ಜೊತೆ ಬೆಂಬಲವಾಗಿ ನಿಂತ ಪಕ್ಷದ ಸದಸ್ಯರಿಗೆ ನಾನು ಅಭಾರಿ. ಅವರ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಗೆ ಧನ್ಯವಾದ’ ಎಂದು ರಾಹುಲ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಪ್ರಿಯಾಂಕಾ ಸ್ಪರ್ಧೆ ಇಲ್ಲ?: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇಲ್ಲ. ಅವರು ಪಕ್ಷದ ಸಂಘಟನೆ ಹಾಗೂ ಪ್ರಚಾರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಪೂರ್ವ ಭಾಗದ ಕಾರ್ಯಕರ್ತರ ಜೊತೆ ಸರಣಿ ಸಭೆಗಳಲ್ಲಿ ಪಾಲ್ಗೊಂಡಿರುವ ಅವರು ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಫೂಲ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವರ ಮೇಲೆ ಕಾರ್ಯಕರ್ತರು ಒತ್ತಡ ಹಾಕಿದರು. ಹಿಂದೆ ನೆಹರೂ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಸೋನಿಯಾ ಅವರು ಪ್ರತಿನಿಧಿಸುತ್ತಿರುವ ರಾಯ್‌ಬರೇಲಿ ಅಥವಾ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿಯಿಂದ ಅವರು ಕಣಕ್ಕಿಳಿಯುವ ಉಹಾಪೋಹಗಳು ಇವೆ. ಬುಧವಾರ ಪತ್ರಕರ್ತರ ಜೊತೆ ಅನೌಪಚಾರಿಕವಾಗಿ ಮಾತನಾಡಿದ ಪ್ರಿಯಾಂಕಾ, ಮೋದಿ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.

***

ಗಬ್ಬರ್‌ ಸಿಂಗ್‌ ಬಗ್ಗೆ ಎಲ್ಲರೂ ಚಿಂತಿತರಾಗಿದ್ದಾರೆ. ಅವರು ಇಬ್ಬರಿದ್ದಾರೆ. ಮೋದಿ ಮತ್ತು ಅಮಿತ್ ಶಾ

–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಕಳೆದ ಐದು ವರ್ಷಗಳು ಭಾರತದ ಆರ್ಥಿಕ ಹಾಗೂ ಸಾಮಾಜಿಕ ಸಂದಿಗ್ಧತೆಯ ದಿನಗಳು

-ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT