ಏಕಕಾಲಕ್ಕೆ ಚುನಾವಣೆ ಅಸಾಧ್ಯ: ಆಯೋಗ ಸ್ಪಷ್ಟನೆ

7
‘ಒಂದು ದೇಶ–ಒಂದು ಚುನಾವಣೆ’ಗೆ ಸೂಕ್ತ ಕಾನೂನು ರಚನೆ ಪ್ರಸ್ತಾವ ಮುಂದಿಟ್ಟ ಮುಖ್ಯ ಆಯುಕ್ತ ರಾವತ್‌

ಏಕಕಾಲಕ್ಕೆ ಚುನಾವಣೆ ಅಸಾಧ್ಯ: ಆಯೋಗ ಸ್ಪಷ್ಟನೆ

Published:
Updated:
Deccan Herald

ನವದೆಹಲಿ: ಸೂಕ್ತ ಕಾನೂನು ರಚನೆಯಾಗದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸ್ಪಷ್ಟಪಡಿಸಿದೆ.

2019ರಲ್ಲಿ ಲೋಕಸಭಾ ಚುನಾವಣೆ ಮತ್ತು 11 ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸೋಮವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಅದರ ಮರುದಿನವೇ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರ ಈ ಸ್ಪಷ್ಟನೆ ಹೊರಬಿದ್ದಿದೆ. ಆಯೋಗದ ಈ ನಿಲುವಿನಿಂದಾಗಿ, ಏಕಕಾಲಕ್ಕೆ ಚುನಾವಣೆ ಪ್ರತಿಪಾದಿಸುತ್ತಿದ್ದ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.

ಆಯೋಗ ಹೇಳಿದ್ದೇನು: ಒಟ್ಟಿಗೆ ಚುನಾವಣೆ ನಡೆಸಲು ಕೆಲವು ರಾಜ್ಯಗಳ ವಿಧಾನಸಭೆಯ ಅವಧಿಯನ್ನು ಮೊಟಕು ಗೊಳಿಸಬೇಕಾಗುತ್ತದೆ ಮತ್ತು ಇನ್ನೂ ಕೆಲವು ರಾಜ್ಯಗಳ ವಿಧಾನಸಭೆಯ ಅವಧಿಯನ್ನು ವಿಸ್ತರಿಸಬೇಕಾಗುತ್ತದೆ ಎಂದು ರಾವತ್ ಹೇಳಿದ್ದಾರೆ.

‘ಒಂದು ದೇಶ–ಒಂದು ಚುನಾವಣೆ’ಯ ಬಗ್ಗೆ ಚುನಾವಣಾ ಆಯೋಗವು 2015ರಲ್ಲೇ ಸರ್ಕಾರಕ್ಕೆ ವಸ್ತುಸ್ಥಿತಿ ವರದಿ ಮತ್ತು ಸಲಹೆ ನೀಡಿದೆ.ಏಕಕಾಲದಲ್ಲಿ ಚುನಾವಣೆಗೆ ಹೆಚ್ಚಿನ ಸಂಪನ್ಮೂಲ, ಸಿಬ್ಬಂದಿ ಮತ್ತು ಸಿದ್ಧತೆಯ ಅಗತ್ಯವಿದೆ. ಈಗ ಇರುವುದಕ್ಕಿಂತಲೂ ಎರಡುಪಟ್ಟು ಮತಯಂತ್ರ (ಇವಿಎಂ) ಮತ್ತು ವಿವಿಪ್ಯಾಟ್‌ ಯಂತ್ರಗಳು ಬೇಕಾಗುತ್ತವೆ. ಅವುಗಳ ಸಾಗಾಟಕ್ಕೂ ವ್ಯವಸ್ಥೆ ಆಗಬೇಕಾಗುತ್ತದೆ ಎಂದು ರಾವತ್‌ ಹೇಳಿದ್ದಾರೆ.

ಒಟ್ಟೊಟ್ಟಿಗೆ ಚುನಾವಣೆ ನಡೆಸುವುದರಿಂದ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ರಾಜಕೀಯ ಕಾರಣಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ ಎಂದು ಅಮಿತ್ ಷಾ ಆರೋಪಿಸಿದ್ದಾರೆ.

**

ಲೋಕಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ: ಕಾಂಗ್ರೆಸ್‌ ಸವಾಲು

‘ಧೈರ್ಯವಿದ್ದರೆ ಲೋಕಸಭೆಯನ್ನು ಈಗಲೇ ವಿಸರ್ಜಿಸಿ, ಚುನಾವಣೆ ಎದುರಿಸಿ’ ಎಂದು ಕಾಂಗ್ರೆಸ್ ಮಂಗಳವಾರ ಬಿಜೆಪಿಗೆ ಸವಾಲು ಎಸೆದಿದೆ. 

‘ಡಿಸೆಂಬರ್‌ನಲ್ಲಿ ನಡೆಯಬೇಕಿರುವ ನಾಲ್ಕು ರಾಜ್ಯಗಳ ಚುನಾವಣೆಯನ್ನು ಮುಂದಿನ ಲೋಕಸಭೆ ಚುನಾವಣೆವರೆಗೆ ಮುಂದೂಡಲು ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದು ಕಾಂಗ್ರೆಸ್‌ ವಾದಿಸಿದೆ.

ಲೋಕಸಭೆ ಚುನಾವಣೆ ಜತೆ ಈ ರಾಜ್ಯಗಳ ಚುನಾವಣೆಯನ್ನೂ ನಡೆಸಬೇಕೆಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳುತ್ತಿದ್ದಾರೆ. ಅವರ ಬಯಕೆ ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯನ್ನು ವಿಸರ್ಜಿಸಿ, ಒಟ್ಟಿಗೆ ಚುನಾವನೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ‘ಒಂದು ದೇಶ, ಒಂದು ಚುನಾವಣೆ’ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದರೆ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಬೇಕಿತ್ತು. ವಿಧಾನಸಭೆಗಳ ಅವಧಿಯನ್ನು ಮುಂದೂಡುವ ಮತ್ತು ಮೊಟಕುಗೊಳಿಸುವ ಸಂಬಂಧ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಸರ್ಕಾರ ಅದ್ಯಾವುದನ್ನೂ ಮಾಡಿಲ್ಲ’ ಎಂದು ಟೀಕಿಸಿದ್ದಾರೆ.

**

ಈಗಿರುವ ಯಂತ್ರಗಳು ಸಾಲದು

2019ರ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು ಈಗಾಗಲೇ ಭರದ ಸಿದ್ಧತೆ ನಡೆಸಿದೆ.

ಹೊಸ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ಮತದಾನ ದೃಢೀಕರಣ ರಸೀದಿ ಯಂತ್ರಗಳನ್ನು (ವಿವಿಪಿಎಟಿ) ಆಯೋಗವು ಖರೀದಿಸಿವೆ. ಅವು ಇನ್ನಷ್ಟೇ ಆಯೋಗವನ್ನು ತಲುಪಬೇಕಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವುದಾದರೆ ಮತ್ತಷ್ಟು ಯಂತ್ರಗಳು ಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

13.95 ಲಕ್ಷ ಮತಯಂತ್ರ, ಸೆಪ್ಟೆಂಬರ್ 30ರ ಒಳಗೆ ಮತ್ತು 16.15 ಲಕ್ಷ ವಿವಿಪ್ಯಾಟ್‌ ನವೆಂಬರ್ ಅಂತ್ಯದ ವೇಳೆಗೆ ಪೂರೈಕೆಯಾಗಲಿವೆ.

**

ಬಿಜೆಪಿ ಪ್ರತಿಪಾದಿಸುವ ‘ಒಂದು ದೇಶ, ಒಂದು ಚುನಾವಣೆ’ ಒಂದು ಒಳ್ಳೆಯ ಯೋಚನೆ. ಆದರೆ, ಸದ್ಯದ ಸ್ಥಿತಿಯಲ್ಲಿ ಅದನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ.

–ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

**

ಸಾಂವಿಧಾನಿಕ ತಿದ್ದುಪಡಿಯ ಮೂಲಕವೇ ವಿಧಾನಸಭೆಗಳ ಅವಧಿ ಮಾರ್ಪಾಡು ಮಾಡಲು ಸಾಧ್ಯ. ಸೂಕ್ತ ಕಾನೂನು ರಚನೆಯಾಗದೆ ಏಕಕಾಲಕ್ಕೆ ಚುನಾವಣೆ ಸಾಧ್ಯವಿಲ್ಲ.

–ಒ.ಪಿ. ರಾವತ್, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ

**

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಮತ್ತು ಮಿಜೊರಾಂನ ಚುನಾವಣೆ ಮುಂದೂಡಿದರೆ, ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ.

–ವಿವೇಕ್ ಠಂಖಾ, ಕಾಂಗ್ರೆಸ್‌ನ ಕಾನೂನು ಘಟಕದ ಮುಖ್ಯಸ್ಥ

**

ಅವಧಿಗೂ ಮುನ್ನ ಲೋಕಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಅದನ್ನು ಸ್ವಾಗತಿಸುತ್ತದೆ. ಅಲ್ಲದೆ, ಬಿಜೆಪಿಯನ್ನು ಎದುರಿಸಲು ಪಕ್ಷ ಸಿದ್ಧವಾಗಿದೆ.

–ಅಶೋಕ್‌ ಗೆಹ್ಲೋಟ್‌, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !