ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ- ಜನತಂತ್ರ ಹರಣ

ಮತ ಖರೀದಿಯ ಸುತ್ತ ಮುತ್ತ
Last Updated 30 ಮಾರ್ಚ್ 2019, 20:17 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಗಳು ಹಣ ಬಿತ್ತಿ ಹಣ ಬೆಳೆವ ದಂಧೆಯಾಗಿರುವುದು ಜನಜನಿತ. ವಿಷದಂತೆ ಏರತೊಡಗಿರುವ ಚುನಾವಣೆ ವೆಚ್ಚದಿಂದಾಗಿ ಹಣದ ಥೈಲಿಗಳ ಕುಳಗಳು ಸಂಸತ್ತು- ಶಾಸನಸಭೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಆರಿಸಿಬರುವ ವಿಕಟ ಸನ್ನಿವೇಶ ಸೃಷ್ಟಿ ಯಾಗಿದೆ. ಹಣದ ಅಬ್ಬರ ಜನಮತವನ್ನು ಅಪಹರಿಸತೊಡಗಿದೆ. ಸ್ವಾಭಾವಿಕವಾಗಿಯೇ ಸರ್ಕಾರಗಳ ನೀತಿ ನಿರ್ಧಾರಗಳನ್ನು ಕಾರ್ಪೊರೇಟ್‌ ಸಂಸ್ಥೆಗಳ ಪ್ರಭಾವ ಆವರಿಸಿ ಕವಿಯತೊಡಗಿದೆ.

ತೆರಿಗೆ ತಪ್ಪಿಸಿ ಸರ್ಕಾರದಿಂದ ಮುಚ್ಚಿಟ್ಟ ಹಣ ಚುನಾವಣೆಗಳಲ್ಲಿ ಹೊಳೆಯಾಗಿ ಹರಿಯುತ್ತದೆ. ಈ ಇಂಧನ ಇಲ್ಲದೆ ಪಕ್ಷಗಳು ಮತ್ತು ಉಮೇದುವಾರರ ‘ಪ್ರಚಾರ ಸಮರ’ಗಳಿಲ್ಲ. ವ್ಯಕ್ತಿಗಳು ಅಥವಾ ಗುಂಪುಗಳು ಈ ಹಣ ಹರಿಸುವುದು ಧರ್ಮಾರ್ಥಕ್ಕೇನೂ ಅಲ್ಲ. ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಲಾಭಗಳನ್ನು ಬಾಚುವುದಕ್ಕೆಂದೇ ಹೂಡುವ ಬಂಡವಾಳ ಇದು.

ದೇಣಿಗೆ ನೀಡಿ ಪ್ರತಿಫಲ ಬಯಸುತ್ತಿದ್ದ ವ್ಯಾಪಾರಸ್ಥರು-ಉದ್ಯಮಿಗಳಿಗೆ ಶಾಸನಸಭೆಗಳ ಬಾಗಿಲುಗಳು ತೆರೆದಿವೆ. ನಗದು ನೀಡುವವರಿಗೆ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತ ಸೆಳೆಯುವವರಿಗೆ ಟಿಕೆಟ್‌ಗಳು ಹಂಚಿಕೆಯಾಗುತ್ತಿವೆ.

ತೆರಿಗೆ ತಪ್ಪಿಸಿದ ಕಪ್ಪು ಹಣ ಮುಚ್ಚು ಮರೆಯ ದೇಣಿಗೆಗಳ ರೂಪ ಧರಿಸಿ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ತಿಜೋರಿಯನ್ನು ತುಂಬುತ್ತ ಬಂದಿದೆ. ವೋಟು ಖರೀದಿಗೆ ಅಭ್ಯರ್ಥಿ ಗಳು ಮತ್ತು ಪಕ್ಷಗಳು ಹಣವನ್ನು ನೀರಿನಂತೆ ಚೆಲ್ಲುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣೆಗಳ ನಂತರ ರಚನೆಯಾಗುವ ಯಾವುದೇ ಸರ್ಕಾರ ಅಥವಾ ಸರ್ಕಾರಗಳು ತೊಡಗುವ ಭ್ರಷ್ಟಾಚಾರದ ತಾಯಿ ಬೇರುಗಳು ಈ ಕಳಂಕಿತ ದೇಣಿಗೆಗಳೇ. ಖುದ್ದು ಚುನಾವಣಾ ಆಯೋಗವೇ ಈ ಮಾತು ಹೇಳಿದೆ. ಹೀಗೆ ವೋಟು ಖರೀದಿಗೆಂದು ದೊಡ್ಡ ಮೊತ್ತಗಳನ್ನು ತೆತ್ತವರಿಗೆ ಜನಪ್ರತಿನಿಧಿಗಳು ಒತ್ತೆಯಾಳುಗಳು. ತಮ್ಮ ಪ್ರತಿನಿಧಿಗಳೇ ಒತ್ತೆಯಾಳುಗಳಾದರೆ, ಜನರ ಗತಿಯೇನು?

ಅಭ್ಯರ್ಥಿಗಳು ಮಾಡುವ ಚುನಾ ವಣಾ ವೆಚ್ಚದ ಮೇಲೆ ಚುನಾವಣಾ ಆಯೋಗದ ನಿರ್ಬಂಧ ಉಂಟು. ಲೋಕಸಭಾ ಚುನಾವಣೆಯಲ್ಲಿ ₹ 70 ಲಕ್ಷಖರ್ಚು ಮಾಡ ಬಹುದು. ಆದರೆ ಉಮೇದುವಾರನ ಪರವಾಗಿ ಆತನ ಪಕ್ಷ ಎಷ್ಟು ಹಣ ಬೇಕಾದರೂ ಚೆಲ್ಲಬಹುದು. ವಿಚಿತ್ರ ಆದರೂ ಸತ್ಯ!

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಲೆತು ಮಾಡುವ ಒಟ್ಟು ವೆಚ್ಚಕ್ಕೂ ಆಕಾಶ ಭೂಮಿಯ ಅಂತರ. ಆಯೋಗ ನಿಗದಿಮಾಡಿದ ವೆಚ್ಚದ ಮಿತಿಯಲ್ಲೇ ಚುನಾವಣೆ ನಡೆಸಿ ಗೆದ್ದ ಅಭ್ಯರ್ಥಿ ಯಾರಾದರೂ ಇದ್ದರೆ ಆತ ಇಂದಿನ ದಿನಮಾನದಲ್ಲಿ ಪವಾಡಪುರುಷನೇ ಸರಿ. ಕಪ್ಪು ಹಣದ ನೆರವಿಲ್ಲದವರು ಅಥವಾ ಅಂತಹ ನೆರವು ಪಡೆಯಲು ಹಿಂಜರಿಯುವವರು ಚುನಾವಣೆ ರಾಜಕೀಯದಿಂದಲೇ ನಿವೃತ್ತಿ ಬಯಸಿರುವ ಪರಿಸ್ಥಿತಿ. ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ನೀಡಿರುವ ವಿಶೇಷಾ ಧಿಕಾರ ವಿರೋಧಿಸಿ 16 ವರ್ಷಗಳ ಕಾಲ ಉಪವಾಸ ಮಾಡಿ ವಿಶ್ವಪ್ರಸಿದ್ಧರಾದ ಮಣಿಪುರದ ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ ಅವರಿಗೆ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿದ್ದ ಮತಗಳು ಕೇವಲ 90!

ಧನಬಲದ ಪಾತ್ರವನ್ನು ಮಟ್ಟ ಹಾಕಬೇಕೆಂದಿದ್ದರೆ ಹುರಿಯಾಳುಗಳ ವೆಚ್ಚದ ಜೊತೆ ಜೊತೆಗೆ ರಾಜಕೀಯ ಪಕ್ಷಗಳ ವೆಚ್ಚಕ್ಕೆ ಮೂಗುದಾರ ತೊಡಿಸಬೇಕು. ಎರಡು ವರ್ಷಗಳ ಹಿಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ 75 ಹೆಲಿಕಾಪ್ಟರುಗಳು, 10 ಖಾಸಗಿ ವಿಮಾನಗಳು, ಪೇಟೆ ಪಟ್ಟಣಗಳಲ್ಲಿ ತಲಾ 400 ಮೋಟರ್ ಸೈಕಲ್‌ಗಳು, 403 ಕ್ಷೇತ್ರಗಳಲ್ಲಿ 403 ರಥಗಳನ್ನು ಪ್ರಬಲ ಪಕ್ಷವೊಂದು ಬಳಸಿತು. ರಾಜಕೀಯ ಪಕ್ಷಗಳ ನಡುವೆ ಸಮಾನ ಸ್ಪರ್ಧೆಯ ಕಣ ಏರ್ಪಡಲೇ ಇಲ್ಲ. ಇಂತಹ ಅಸಮಾನ ಸ್ಪರ್ಧೆಯಲ್ಲಿ ಮಾಧ್ಯಮ ಕೂಡ ಬಲಾಢ್ಯ ಪಕ್ಷದೊಂದಿಗೆ ನಿಂತಿತ್ತು ಎಂಬ ದೂರು ಕೇಳಿ ಬಂದಿತ್ತು. ಈ ಪರಿಸ್ಥಿತಿ ಇದೀಗ ಉಲ್ಬಣ ರೂಪ ಧರಿಸಿ ಕೆಕ್ಕರಿಸಿದೆ.

ದುಬಾರಿ ಚುನಾವಣೆ ವೆಚ್ಚ ಮತ್ತು ಭ್ರಷ್ಟಾಚಾರ ಕೈ ಕೈ ಹಿಡಿದು ಸಾಗುವ ಸಂಗಾತಿಗಳು. ಕಣದಲ್ಲಿರುವ ಎಲ್ಲ ಹುರಿಯಾಳುಗಳಿಗೂ ಧಾರಾಳ ಧನಬಲದ ಅನುಕೂಲ ಇರುವುದಿಲ್ಲ. ದೊಡ್ಡ ಪಕ್ಷಗಳ ಅಭ್ಯರ್ಥಿಗಳಿಗೆ ದೊಡ್ಡ ಮೊತ್ತಗಳು ದೊರೆಯುತ್ತವೆ. ದೊಡ್ಡ ಮೊತ್ತ- ಸಣ್ಣ ಮೊತ್ತಗಳ ತಾರತಮ್ಯವು ಸೋಲು ಗೆಲುವುಗಳನ್ನು ನಿರ್ಧರಿಸುತ್ತದೆ. ಚುನಾವಣಾ ಆಯೋಗವೇ ಆಡಿರುವ ಮಾತಿದು.

ರಾಜಕೀಯ ಪಕ್ಷಗಳು ತಮ್ಮ ಆಚಾರ ವ್ಯವಹಾರಗಳನ್ನು ಪಾರದರ್ಶಕವೂ ಪ್ರಾಮಾಣಿಕವೂ ಆಗಿಸುವ ತನಕ ಚುನಾವಣಾ ವೆಚ್ಚವನ್ನು ಭರಿಸುವ ಗೊಡವೆಗೆ ಸರ್ಕಾರ ಹೋಗಕೂಡದು ಎಂದು ಕಾಲ ಕಾಲಕ್ಕೆ ರಚಿಸಲಾದ ನಾನಾ ಸಮಿತಿಗಳು ಶಿಫಾರಸು ಮಾಡಿವೆ.

ಸೂರ್ಯನ ಬೆಳಕು ಅತ್ಯುತ್ತಮ ಸೋಂಕು ನಿರೋಧಕ ಎಂಬುದು ಸಾರ್ವಜನಿಕ ಬದುಕಿನಲ್ಲಿಪಾರದರ್ಶಕತೆಯ ಅಗತ್ಯ ಕುರಿತು ನ್ಯಾಯಮೂರ್ತಿ ಲೂಯಿ ಬ್ರಾಂಡೀಸ್ ಹೇಳಿದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT