ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Man Vs Wild: ಬಂಡಿಪುರದಲ್ಲಿ ಚಿತ್ರೀಕರಣ‌ಕ್ಕೆ ಪರಿಸರಪ್ರಿಯರ ವಿರೋಧ

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಜನಿಕಾಂತ್‌, ಬೇರ್‌ ಗ್ರಿಲ್ಸ್‌
Last Updated 29 ಜನವರಿ 2020, 2:09 IST
ಅಕ್ಷರ ಗಾತ್ರ

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಡಿಸ್ಕವರಿ ಚಾನೆಲ್‌ನ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಅವರು ನಟ ರಜನಿಕಾಂತ್‌ ಅವರನ್ನು ಬಳಸಿಕೊಂಡು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ತಮ್ಮ ಕಾರ್ಯಕ್ರಮದ ಚಿತ್ರೀಕರಣವನ್ನು ಮಂಗಳವಾರ ನಡೆಸಿದರು. ಪರಿಸರಪ್ರಿಯರಿಂದ ಈ ಚಿತ್ರೀಕರಣಕ್ಕೆ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

‘ಕಾರ್ಯಕ್ರಮದಲ್ಲಿ ಪರಿಸರ, ಕಾಡಿನ ಸಂರಕ್ಷಣೆ ಬಗ್ಗೆ ಯಾವುದೇ ಸಂದೇಶಗಳಿರುವುದಿಲ್ಲ. ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುವುದು ಹೇಗೆ, ಅವುಗಳನ್ನು ಕತ್ತರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ’ ಎಂದು ಪರಿಸರಪ್ರಿಯರು ದೂರಿದ್ದಾರೆ.

‘ಮ್ಯಾನ್ ವರ್ಸಸ್ ವೈಲ್ಡ್ ಎಂಬುದು ಅರಿವು ಮೂಡಿಸುವಂಥದ್ದಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರದ ದೃಷ್ಟಿಯಿಂದ ರೂಪಿಸಲಾಗುತ್ತಿರುವ ಕಾರ್ಯಕ್ರಮ. ಸಮಾಜದ ಪ್ರಸಿದ್ಧರನ್ನು ಬಳಸಿಕೊಂಡು ತಮ್ಮ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದೇ ಇದರ ಉದ್ದೇಶ. ಈ ಸಂಸ್ಥೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಬೇಕು’ ಎಂದು ವನ್ಯಜೀವಿ ವಿಜ್ಞಾನಿ ಕೃಪಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕದ ಅರಣ್ಯಗಳಲ್ಲಿ 2013, 2017 ಮತ್ತು 2019ರಲ್ಲಿ ಭಾರಿ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಕಾಡು ನಾಶವಾಗಿತ್ತು. ಬೇಸಿಗೆ ಆರಂಭದ ಈ ಸಂದರ್ಭದಲ್ಲಿ ಕಾಳ್ಗಿಚ್ಚು ಸೃಷ್ಟಿಯಾಗದಂತೆ ತಡೆಯುವ ಕೆಲಸಗಳನ್ನು ಅರಣ್ಯಾಧಿಕಾರಿಗಳು ಮಾಡಬೇಕು. ಆದರೆ, ಅಧಿಕಾರಿಗಳು ಚಿತ್ರೀಕರಣದ ಹಿಂದೆ ಬಿದ್ದಿದ್ದಾರೆ ಎಂದು ಪರಿಸರಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯು ಅನುಮತಿ ನೀಡಿದೆ. 16 ಷರತ್ತುಗಳನ್ನು ಒಡ್ಡಿರುವ ಇಲಾಖೆಯು, ಸೋಮವಾರದಿಂದ (ಜ.27) ಬುಧವಾರ (ಜ.29) ಮಧ್ಯಾಹ್ನದವರೆಗೆ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಸೆಕ್ಷನ್‌ 28/ 1(ಬಿ) ಅಡಿಯಲ್ಲಿ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.

ರಜನಿಕಾಂತ್‌ ಅವರು ಸೋಮವಾರವೇ ಬಂಡೀಪುರದಲ್ಲಿರುವ ಸೆರಾಯ್‌ ರೆಸಾರ್ಟ್‌ಗೆ ಬಂದು ತಂಗಿದ್ದರು. ಬೇರ್‌ ಗ್ರಿಲ್ಸ್‌ ಮಂಗಳವಾರ ಬೆಳಿಗ್ಗೆ 10.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಗುಂಡ್ಲುಪೇಟೆಗೆ ಬಂದಿಳಿದಿದ್ದರು. ಮಂಗಳವಾರ ಚಿತ್ರೀಕರಣ ಮುಗಿಸಿದ ನಂತರ ರಜನಿಕಾಂತ್‌ ಚೆನ್ನೈಗೆ ಮರಳಿದ್ದಾರೆ.

ಬುಧವಾರದ ಬದಲು ಗುರುವಾರ ಚಿತ್ರೀಕರಣ ಮುಂದುವರಿಯಲಿದ್ದು, ಹಿಂದಿ ನಟ ಅಕ್ಷಯ್‌ ಕುಮಾರ್‌ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಡೀಪುರದ ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ, ಮೂಲೆಹೊಳೆ ಸೇರಿದಂತೆ ನಾಲ್ಕು ವಲಯಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ‘ಚಿತ್ರೀಕರಣ ನಡೆಸುತ್ತಿರುವ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿಗೂ ಮೊಬೈಲ್‌ ಕೊಂಡೊಯ್ಯದಂತೆ ಸೂಚನೆ ನೀಡಿದ್ದಾರೆ’ ಎಂದು ಹುಲಿಯೋಜನೆ ನಿರ್ದೇಶಕ ಬಾಲಚಂದ್ರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಕೆಲವು ತಿಂಗಳ ಹಿಂದೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT