ಶುಕ್ರವಾರ, ನವೆಂಬರ್ 22, 2019
20 °C
ಉತ್ತರಪ್ರದೇಶ ವಿದ್ಯುತ್‌ ನಿಗಮದ ನೌಕರರ ₹ 2600 ಕೋಟಿ ಮೊತ್ತ ಡಿಎಚ್‌ಎಫ್‌ಎಲ್‌ನಲ್ಲಿ ಹೂಡಿಕೆ

ಇಪಿಎಫ್‌ ಹಗರಣ: ಉತ್ತರಪ್ರದೇಶ ವಿದ್ಯುತ್‌ ನಿಗಮದ ಮಾಜಿ ಎಂ.ಡಿ. ಬಂಧನ

Published:
Updated:

ಲಖನೌ: ಉದ್ಯೋಗಿಗಳ ಭವಿಷ್ಯ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ವಿದ್ಯುತ್‌ ನಿಗಮದ(ಯುಪಿಪಿಸಿಎಲ್‌) ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಪಿ. ಮಿಶ್ರಾ ಅವರನ್ನು ಮಂಗಳವಾರ ಬಂಧಿಸಲಾಗಿದೆ.

ನಿಗಮದ ನೌಕರರ ಭವಿಷ್ಯ ನಿಧಿ ಸುಮಾರು ₹2600 ಕೋಟಿ ಮೊತ್ತವನ್ನು ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌(ಡಿಎಚ್‌ಎಫ್‌ಎಲ್‌)ನಲ್ಲಿ ಹೂಡಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮಕೈಗೊಳ್ಳಲಾಗಿದೆ. ಡಿಎಚ್‌ಎಫ್‌ಎಲ್‌ ಸಹ ಈಗಾಗಲೇ ಹಗರಣದಲ್ಲಿ ಸಿಲುಕಿದೆ.

‘ಮಿಶ್ರಾ ಅವರನ್ನು ಬಂಧಿಸಲಾಗಿದೆ. ರಾಜ್ಯ ಪೊಲೀಸ್‌ ಇಲಾಖೆ ಆರ್ಥಿಕ ಅಪರಾಧಗಳ ವಿಭಾಗ ಈ ಪ್ರಕರಣದ ತನಿಖೆ ಕೈಗೊಂಡಿದೆ’ ಎಂದು ಉತ್ತರ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯ ವಿದ್ಯುತ್‌ ನೌಕರರ ಟ್ರಸ್ಟ್‌ ಮತ್ತು ಉತ್ತರ ಪ್ರದೇಶ ವಿದ್ಯುತ್‌ ನಿಗಮದ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಗುಪ್ತಾ ಹಾಗೂ ಯುಪಿಪಿಸಿಎಲ್‌ ನಿರ್ದೇಶಕ ಸುಧಾನ್ಶು ಅವರ ವಿರುದ್ಧ ಇಲ್ಲಿನ ಹಜರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಎಫ್‌ಐಆರ್‌ ದಾಖಲಿಸಲಾಗಿತ್ತು. ಅದೇ ದಿನ ಇಬ್ಬರನ್ನು ಬಂಧಿಸಲಾಗಿತ್ತು. ರಾಜ್ಯ ಸರ್ಕಾರ ಈಗಾಗಲೇ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಶಿಫಾರಸು ಮಾಡಿದೆ.

‘ಅರಬ್‌ ಪತಿ ಮಿಶ್ರಾ‘
ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರಿಗೆ ಅತ್ಯಂತ ಆಪ್ತರಾಗಿರುವ ಮಿಶ್ರಾ ಅವರನ್ನು ‘ಅರಬ್‌ ಪತಿ ಮಿಶ್ರಾ’ ಎಂದೇ ಕರೆಯಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2017ರ ಮಾರ್ಚ್‌ 24ರಂದು ಮಿಶ್ರಾ ಅವರನ್ನು ವಜಾಗೊಳಿಸಲಾಗಿತ್ತು.

‘ವಜಾಗೊಳಿಸುವುದು ಖಚಿತವಾಗುತ್ತಿದ್ದಂತೆ ಹಲವು ಮಹತ್ವದ ಕಡತಗಳನ್ನು ಮಿಶ್ರಾ ತೆಗೆದುಕೊಂಡು ಹೋಗಿದ್ದರು. ಯುಪಿಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ಹೊಂದಿದ್ದ ಮೊದಲ ಎಂಜಿನಿಯರ್‌ ಇವರಾಗಿದ್ದರು. ನಿವೃತ್ತಿಯಾದ ಬಳಿಕವೂ ಮೂರು ಬಾರಿ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು. ಈ ಹಿಂದಿನ ಸರ್ಕಾರದಲ್ಲಿ ಹಲವು ಹಗರಣಗಳಲ್ಲಿ ಅವರು ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷದಿಂದ ಮಿಶ್ರಾ ಟಿಕೆಟ್‌ ಕೇಳಿದ್ದರು’ ಎಂದು ಹೇಳಿದ್ದಾರೆ.

**

ಭ್ರಷ್ಟಾಚಾರದ ಮೇಲೆ ಯೋಗಿ ಆದಿತ್ಯನಾಥ್‌ ಅವರ ಶೂನ್ಯ ಸಹಿಷ್ಣುತೆಯ ಖಡ್ಗವು ದಾಳಿ ಮಾಡಿದೆ. ಹೀಗಾಗಿ, ಭ್ರಷ್ಟಾಚಾರದಲ್ಲಿ ತೊಡಗಿರುವವರು ಆಶ್ರಯಕ್ಕಾಗಿ ಓಡಾಡುತ್ತಿದ್ದಾರೆ.
-ಮುಖ್ಯಮಂತ್ರಿ ಕಚೇರಿ ಟ್ವೀಟ್‌

**

ಇಪಿಎಫ್‌ ಹಗರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೇ ಜವಾಬ್ದಾರರಾಗಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ವಿದ್ಯುತ್‌ ನಿಗಮದ ನೌಕರರ ಭವಿಷ್ಯ ನಿಧಿ ಹಣ ಡಿಎಚ್‌ಎಫ್‌ಎಲ್‌ಗೆ ವರ್ಗಾವಣೆಯಾಗಿಲ್ಲ.
-ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ಪ್ರತಿಕ್ರಿಯಿಸಿ (+)