ಖಾಸಗಿ ನೌಕರರಿಗೆ ಸಿಹಿ ಸುದ್ದಿ: ಇನ್ನು ಮುಂದೆ ಸಿಗಲಿದೆ ಹೆಚ್ಚು ಪಿಎಫ್‌ ಪಿಂಚಣಿ

ಶನಿವಾರ, ಏಪ್ರಿಲ್ 20, 2019
24 °C
ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಖಾಸಗಿ ನೌಕರರಿಗೆ ಸಿಹಿ ಸುದ್ದಿ: ಇನ್ನು ಮುಂದೆ ಸಿಗಲಿದೆ ಹೆಚ್ಚು ಪಿಎಫ್‌ ಪಿಂಚಣಿ

Published:
Updated:

ನವದೆಹಲಿ: ಖಾಸಗಿ ಉದ್ಯೋಗಿಗಳ ಕೊಡುಗೆಯನ್ನು ತಿಂಗಳಿಗೆ ಗರಿಷ್ಠ ₹15,000ದ ಮಿತಿಯಲ್ಲಿ ಲೆಕ್ಕಹಾಕುವ ಬದಲು ಪೂರ್ತಿ ವೇತನದ ಆಧಾರದಲ್ಲಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಇದರಿಂದ ಖಾಸಗಿ ಉದ್ಯೋಗಿಗಳ ಪಿಂಚಣಿ ಮೊತ್ತ ಹೆಚ್ಚಾಗಲಿದೆ.

ಪೂರ್ತಿ ವೇತನದ ಆಧಾರದಲ್ಲಿ ಪಿಂಚಣಿ ನೀಡುವಂತೆ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ತಿರಸ್ಕರಿಸಿದೆ.

ಸಂಘಟಿತ ವಲಯದ ಉದ್ಯೋಗಿಗಳಿಗಾಗಿ 1995ರಲ್ಲಿ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿತ್ತು. ತುಟ್ಟಿ ಭತ್ಯೆ ಸೇರಿದಂತೆ ₹15,000 ಹಾಗೂ ಇದಕ್ಕಿಂತ ಕಡಿಮೆ ತಿಂಗಳ ವೇತನ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಯೂ ಯೋಜನೆಯಲ್ಲಿ ಸೇರ್ಪಡೆಯಾಗುವಂತೆ ನಿಯಮ ರೂಪಿಸಲಾಗಿತ್ತು.

ಇದರ ಪ್ರಕಾರ, ಉದ್ಯೋಗಿಯ ವೇತನದಲ್ಲಿ ₹6,500ರ ಶೇ 8.33ರಷ್ಟನ್ನು ಉದ್ಯೋಗದಾತ ಇಪಿಎಫ್‌ಗೆ ನೀಡಬೇಕಾಗಿತ್ತು. ನಂತರ ನಿಯಮ ತಿದ್ದುಪಡಿ ಮಾಡಿದ ಸರ್ಕಾರ, ಉದ್ಯೋಗಿ ಮತ್ತು ಉದ್ಯೋಗದಾತರಿಬ್ಬರ ಆಕ್ಷೇಪವಿಲ್ಲದಿದ್ದರೆ ವೇತನದ ಯಾವುದೇ ಪ್ರಮಾಣವನ್ನೂ ಪಿಂಚಣಿಗೆ ಕೊಡುಗೆಯಾಗಿ ನೀಡಲು ಅವಕಾಶ ಕಲ್ಪಿಸಿತು.

2014ರಲ್ಲಿ ಇಪಿಎಫ್‌ಒ ಕಾಯ್ದೆಗೆ ಮತ್ತೆ ತಿದ್ದುಪಡಿ ಮಾಡಿದ ಸರ್ಕಾರ ಇಪಿಎಫ್‌ ಕೊಡುಗೆಯನ್ನು ಉದ್ಯೋಗಿಯ ವೇತನದಲ್ಲಿ ಗರಿಷ್ಠ 15,000ದ ಶೇ 8.33ರಷ್ಟು ನಿಗದಿಪಡಿಸಿತ್ತು. ಜತೆಗೆ, ಪೂರ್ತಿ ವೇತನದ ಮೇಲಿನ ಪಿಂಚಣಿಯನ್ನು ಕೊನೆಯ ಐದು ವರ್ಷಗಳ ಸೇವೆಯ ಆಧಾರದಲ್ಲಿ ಲೆಕ್ಕಹಾಕಲು ನಿಯಮ ರೂಪಿಸಿತ್ತು. ಇದರಿಂದಾಗಿ ಉದ್ಯೋಗಿಗಳ ಪಿಂಚಣಿಯ ಮೊತ್ತ ಕಡಿಮೆಯಾಗುವಂತಾಯಿತು.

2014ರ ತಿದ್ದುಪಡಿಯನ್ನು ತಳ್ಳಿಹಾಕಿದ್ದ ಕರ್ನಾಟಕ ಹೈಕೋರ್ಟ್‌ ಹಳೆಯ ಪಿಂಚಣಿ ಲೆಕ್ಕಾಚಾರವನ್ನೇ ಮರುಸ್ಥಾಪಿಸುವಂತೆ ಆದೇಶಿಸಿತ್ತು. ಇದನ್ನೇ ಅನುಸರಿಸಿದ್ದ ಸುಪ್ರೀಂ ಕೋರ್ಟ್, ಪೂರ್ತಿ ವೇತನದ ಆಧಾರದಲ್ಲಿ ಪಿಂಚಣಿಗೆ ಕೊಡುಗೆ ನೀಡುವುದಕ್ಕೆ ಸಂಬಂಧಿಸಿದ ಉದ್ಯೋಗಿಗಳ ಮನವಿಯನ್ನು ಪುರಸ್ಕರಿಸುವಂತೆ ಇಪಿಎಫ್‌ಒಗೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ, ಟ್ರಸ್ಟ್‌ಗಳು ಪಿಂಚಣಿ ನಿರ್ವಹಿಸುವ ಕೆಲವು ಕಂಪನಿಗಳ ಉದ್ಯೋಗಿಗಳ ಕೊಡುಗೆಯನ್ನು ಸ್ವೀಕರಿಸಲು ಇಪಿಎಫ್‌ಒ ನಿರಾಕರಿಸಿತ್ತು. ಈ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಇಪಿಎಫ್‌ಒಗೆ ಕೇರಳ, ರಾಜಸ್ಥಾನ, ಆಂಧ್ರ ಪ್ರದೇಶ, ಮದ್ರಾಸ್ ಮತ್ತಿತರ ಹೈಕೋರ್ಟ್‌ಗಳು ಸೂಚಿಸಿದ್ದವು. ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಇತ್ಯರ್ಥಗೊಳಿಸಿದೆ.

ಬರಹ ಇಷ್ಟವಾಯಿತೆ?

 • 27

  Happy
 • 2

  Amused
 • 2

  Sad
 • 2

  Frustrated
 • 0

  Angry

Comments:

0 comments

Write the first review for this !