ಮತಯಂತ್ರ ಜಟಾಪಟಿ ಮತ್ತೆ ಮುನ್ನೆಲೆಗೆ

7
ವಿದ್ಯುನ್ಮಾನ ಮತಯಂತ್ರಗಳಿಗೆ ಕನ್ನ ಹಾಕಿಯೇ ಅಧಿಕಾರಕ್ಕೆ ಬಂದ ಬಿಜೆಪಿ: ಸಂಚಲನ ಸೃಷ್ಟಿಸಿದ ಆರೋಪ

ಮತಯಂತ್ರ ಜಟಾಪಟಿ ಮತ್ತೆ ಮುನ್ನೆಲೆಗೆ

Published:
Updated:

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ತಿರುಚಲಾಗಿದೆ ಮತ್ತು ಕನ್ನ ಹಾಕಲಾಗಿದೆ ಎಂದು ಶುಜಾ ಅವರು ಆರೋಪ ಮಾಡಿರುವ ಕಾರ್ಯಕ್ರಮ ಕಾಂಗ್ರೆಸ್‌ ಪಕ್ಷದಿಂದ ಪ್ರಾಯೋಜಿತವಾದ ಷಡ್ಯಂತ್ರ. ಭಾರತದ ಪ್ರಜಾ ಪ್ರಭುತ್ವ ಮತ್ತು ಚುನಾವಣಾ ಆಯೋಗಕ್ಕೆ ಅವಮಾನ ಮಾಡುವುದು ಇದರ ಉದ್ದೇಶ ಎಂದು ಬಿಜೆಪಿ ಹರಿಹಾಯ್ದಿದೆ.

ಇವಿಎಂಗಳನ್ನು ತಿರುಚುವ ಮೂಲಕವೇ ಕೇಂದ್ರದಲ್ಲಿ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂತು ಎಂದು ಶುಜಾ ಸೋಮವಾರ ಆರೋಪಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಚಿತವಾಗಿರುವ ಸೋಲಿಗೆ ನೆಪ ಹುಡುಕಲು ಕಾಂಗ್ರೆಸ್‌ ಈಗಲೇ ಆರಂಭಿಸಿದೆ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. 

‘ಇವಿಎಂಗೆ ಕನ್ನ’ ಕಾರ್ಯಕ್ರಮವನ್ನು ಆಯೋಜಿಸಿದ್ದ ಇಂಡಿ ಯನ್‌ ಜರ್ನಲಿಸ್ಟ್ಸ್‌ ಅಸೋಸಿಯೇಷನ್‌ನ ಮುಖ್ಯಸ್ಥ ಅಶೀಷ್‌ ರೇ ಎಂಬ ವ್ಯಕ್ತಿ. ಇವರು ‘ಕಟ್ಟಾ ಕಾಂಗ್ರೆಸ್ಸಿಗ’. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಅವರು ಹಿಂದಿನಿಂದಲೂ ಭೋಪರಾಕ್‌ ಹಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಹೇಳಿದ್ದಾರೆ.

‘ಕಪಿಲ್‌ ಸಿಬಲ್‌ (ಕಾಂಗ್ರೆಸ್‌ ಮುಖಂಡ) ಅಲ್ಲಿ ಯಾಕೆ ಇದ್ದರು? ಕಾಂಗ್ರೆಸ್‌ ಪರವಾಗಿ ಕಾರ್ಯಕ್ರಮದ ಮೇಲೆ ನಿಗಾ ಇರಿಸುವುದಕ್ಕಾಗಿಯೇ ಸಿಬಲ್‌ ಹೋಗಿದ್ದರು’ ಎಂದು ಪ್ರಸಾದ್‌ ಆರೋಪಿಸಿದ್ದಾರೆ. 

ಇದನ್ನೂ ಓದಿ: 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿತ್ತು: ಅಮೆರಿಕದ ಸೈಬರ್ ತಜ್ಞ

ವೈಯಕ್ತಿಕ ನೆಲೆಯಲ್ಲಿ ತಾವು ಅಲ್ಲಿಗೆ ಹೋಗಿದ್ದೆವು ಎಂದು ಸಿಬಲ್‌ ಹೇಳಿರುವುದನ್ನು ಪ್ರಸಾದ್‌ ಅಲ್ಲಗಳೆದಿದ್ದಾರೆ. ಅವರು ಅಲ್ಲಿಗೆ ಹೋಗಿದ್ದರಿಂದ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳುವಷ್ಟು ಬುದ್ಧಿವಂತಿಕೆ ಸಿಬಲ್‌ಗೆ ಇದೆ. ಹಾಗಾಗಿಯೇ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಪ್ರಸಾದ್‌ ಹೇಳಿದ್ದಾರೆ. 

2014ರ ಮತಗಟ್ಟೆ ಅಕ್ರಮಗಳ ಬಗ್ಗೆ ಕೇಂದ್ರ ಸಚಿವ ರಾಗಿದ್ದ ಗೋಪಿನಾಥ ಮುಂಢೆ ಅವರಿಗೆ ಅರಿವಿತ್ತು. ಆ ಕಾರಣ ಕ್ಕಾಗಿ ಅವರ ಹತ್ಯೆ ಆಗಿದೆ ಎಂದು ಆರೋಪಿಸಿರುವುದು ಬಿಜೆಪಿಗೆ ಬೇಸರ ಉಂಟು ಮಾಡಿದೆ. ಇದು ಅಸಂಬದ್ಧ ಎಂದು ಪ್ರಸಾದ್‌ ಹೇಳಿದ್ದಾರೆ. 2014ರ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ವಾರಗಳಲ್ಲಿ ಮುಂಢೆ ಅವರು ದೆಹಲಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. 

ದೂರು ಕೊಟ್ಟ ಆಯೋಗ

2014ರ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳಿಗೆ ಕನ್ನ ಹಾಕಲಾಗಿದೆ ಎಂದು ಲಂಡನ್‌ನಲ್ಲಿ ಸೋಮವಾರ ಆಪಾದಿಸಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಚುನಾವಣಾ ಆಯೋಗವು ದೆಹಲಿ ಪೊಲೀಸರನ್ನು ಕೋರಿದೆ. 

ಇದನ್ನೂ ಓದಿ: ‘ಇವಿಎಂ ಹ್ಯಾಕಿಂಗ್‌ ಸಾಧ್ಯ’ ಇದೊಂದು ಅಸಂಬದ್ಧ ಹೇಳಿಕೆ

ಇಂತಹ ಹುರುಳಿಲ್ಲದ ಆರೋಪಗಳನ್ನು ಮಾಡುವ ಮೂಲಕ ಶುಜಾ ಎಂಬ ವ್ಯಕ್ತಿಯು ಭಾರತೀಯ ದಂಡ ಸಂಹಿತೆಯ 505 (1) ಸೆಕ್ಷನ್‌ ಉಲ್ಲಂಘಿಸಿದ್ದಾರೆ. ಅವರ ಹೇಳಿಕೆಯು ವದಂತಿಗಳನ್ನು ಹರಡಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ದೆಹಲಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಆಯೋಗ ಹೇಳಿದೆ. 

ಶುಜಾ ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಯೋಗ ಒತ್ತಾಯಿಸಿದೆ. 

ಜನತಂತ್ರಕ್ಕೆ ಗಂಡಾಂತರ: ಕಾಂಗ್ರೆಸ್‌

ಲಂಡನ್‌: ಅಮೆರಿಕದ ‘ಸೈಬರ್‌ ಪರಿಣತ’ ಶುಜಾ ಅವರು ಇವಿಎಂ ಕನ್ನ ಕುರಿತು ಮಾಡಿರುವ ಆರೋಪಗಳ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಒತ್ತಾಯಿಸಿದ್ದಾರೆ. ಅವರ ಆರೋಪಗಳು ನಿಜವಾಗಿದ್ದರೆ ಅದು ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಎಂದು ಅವರು ಹೇಳಿದ್ದಾರೆ. 

ಶುಜಾ ಅವರ ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದ ವಿಚಾರದಲ್ಲಿ ಉಂಟಾಗಿರುವ ವಿವಾದಕ್ಕೆ ಸಿಬಲ್‌ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಬಗ್ಗೆ ರವಿಶಂಕರ್ ಪ್ರಸಾದ್‌ ಅವರು ಮಾಡಿರುವ ಟೀಕೆ ಅವರ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಂಬಂಧಿಸಿದ ವಿಚಾರ. ಇವಿಎಂಗಳಿಗೆ ಕನ್ನ ಹಾಕುವುದು ಅಥವಾ ಅಕ್ರಮ ಎಸಗುವುದು ಸಾಧ್ಯವಿದೆಯೇ ಎಂಬುದಕ್ಕೆ ಸಂಬಂಧಿಸಿದ ವಿಚಾರ. ಹಾಗಾಗಿ ಪ್ರಸಾದ್‌ ಅವರ ಹೇಳಿಕೆ ಬಹಳ ಬಾಲಿಶ ಎಂದು ಸಿಬಲ್‌ ಹೇಳಿದ್ದಾರೆ. 

ಕಾರ್ಯಕ್ರಮದ ಸಂಘಟಕ ಅಶೀಷ್‌ ರೇ ಅವರು ವೈಯಕ್ತಿಕವಾಗಿ ಆಹ್ವಾನ ನೀಡಿದ ಕಾರಣಕ್ಕೆ ತಾವು ಅಲ್ಲಿಗೆ ಹೋಗಿದ್ದಾಗಿ ಸಿಬಲ್‌ ತಿಳಿಸಿದ್ದಾರೆ. 

ಶುಜಾ ಅವರು ಅಮೆರಿಕದಲ್ಲಿ ರಾಜಕೀಯ ಆಶ್ರಯ ಕೋರಿದ್ದಾರೆ. ಶುಜಾ ಅವರು ಮಾಡಿದ ಆರೋಪಗಳ ಬಗ್ಗೆ ಅಮೆರಿಕದ ಸರ್ಕಾರವು ಎರಡು ವರ್ಷ ತನಿಖೆ ನಡೆಸಿದೆ. ಭಾರತ ಕೂಡ ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಬಲ್‌ ಆಗ್ರಹಿಸಿದ್ದಾರೆ. 

ತಮ್ಮ ತಂಡದ ಕೆಲವು ಸದಸ್ಯರ ಹತ್ಯೆಯಾದ ಬಳಿಕ ಜೀವಭಯದಿಂದ ಭಾರತ ತೊರೆದದ್ದಾಗಿ ಶುಜಾ ಹೇಳಿಕೊಂಡಿದ್ದಾರೆ. ಸೋಮವಾರದ ಮಾಧ್ಯಮಗೋಷ್ಠಿಯಲ್ಲಿಯೂ ಅವರು ಸ್ಕೈಪ್‌ ಮೂಲಕ ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದರು. 

ಮತಪತ್ರ ಬಳಸಿ: ಚಂದ್ರಬಾಬು ನಾಯ್ಡು

ಅಮರಾವತಿ: ಇವಿಎಂಗಳಿಗೆ ಕನ್ನ ಹಾಕಬಹುದು ಎಂಬುದನ್ನು ಹ್ಯಾಕರ್‌ಗಳು ಸಾಬೀತು ಮಾಡಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಮತ‍ಪತ್ರಗಳನ್ನೇ ಬಳಸಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒತ್ತಾಯಿಸಿದ್ದಾರೆ. 

ಇವಿಎಂಗಳು ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಂತೆ ಭಾಸವಾಗುತ್ತಿದೆ. ಹಾಗಾಗಿ, ಇವಿಎಂ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುವಂತೆ ಪಕ್ಷದ ಕಾರ್ಯಕರ್ತರಿಗೆ ಹೇಳಿರುವುದಾಗಿ ನಾಯ್ಡು ತಿಳಿಸಿದ್ದಾರೆ. 

ಚುನಾವಣಾ ಆಯೋಗವು ಎಲ್ಲ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿ, ತಕ್ಷಣವೇ ಇವಿಎಂಗಳನ್ನು ಕೈಬಿಟ್ಟು ಮತಪತ್ರಗಳ ಬಳಕೆಗೆ ಮುಂದಾಗಬೇಕು ಎಂದು ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದ್ದಾರೆ. 

ನಮ್ಮಲ್ಲಷ್ಟೇ ಏಕೆ ಇವಿಎಂ ಬಳಕೆ: ಅಖಿಲೇಶ್‌

ಲಖನೌ: ಹೆಚ್ಚು ಮುಂದುವರಿದ ದೇಶಗಳು ಕೂಡ ಇವಿಎಂಗಳನ್ನು ಬಳಸುತ್ತಿಲ್ಲ. ಇವಿಎಂಗಳನ್ನು ತಿರುಚಬಹುದು ಎಂದು ‘ಸೈಬರ್‌ ಪರಿಣತ’ರು ಹೇಳುತ್ತಿದ್ದಾರೆ. ಹಾಗಿದ್ದರೂ ನಮ್ಮ ದೇಶದಲ್ಲಿ ಇವಿಎಂಗಳ ಬಳಕೆ ಯಾಕೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ ಪ್ರಶ್ನಿಸಿದ್ದಾರೆ. 

ಬಿಜೆಪಿ ಸರ್ಕಾರವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ವಿರೋಧ ಪಕ್ಷಗಳನ್ನು ದಮನ ಮಾಡಲು ಈ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆಪಾದಿಸಿದ್ದಾರೆ. 

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಮುಂದುವರಿದಿರುವ  ಜಪಾನ್‌ನಂತಹ ದೇಶವೇ ಯಾಕೆ ಇವಿಎಂ ಬಳಸುತ್ತಿಲ್ಲ? ಈ ಪ್ರಶ್ನೆಯನ್ನು ದೇಶದ 130 ಕೋಟಿ ಜನರ ಮುಂದೆ ಇಡಬೇಕು ಎಂದು ಅವರು ಹೇಳಿದ್ದಾರೆ.

‘ಮುಂಢೆ ಸಾವಿನ ತನಿಖೆಯಾಗಲಿ’

ಮುಂಬೈ: ತಮ್ಮ ಮಾವ ಗೋಪಿನಾಥ ಮುಂಢೆ ಅವರ ಸಾವಿನ ಬಗ್ಗೆ ಗುಪ್ತಚರ ಸಂಸ್ಥೆ ರಾ ಅಥವಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ಮುಖಂಡ ಧನಂಜಯ ಮುಂಢೆ ಆಗ್ರಹಿಸಿದ್ದಾರೆ. ‘ಇವಿಎಂಗೆ ಕನ್ನ ಹಾಕಿದ ಮಾಹಿತಿ ಅವರಿಗೆ ತಿಳಿದಿತ್ತು. ಹಾಗಾಗಿ ಹತ್ಯೆ ಆಗಿದೆ’ ಎಂದು ಶುಜಾ ಅವರ ಆರೋಪದ ಹಿನ್ನೆಲೆಯಲ್ಲಿ ಧನಂಜಯ ಈ ಒತ್ತಾಯ ಮಾಡಿದ್ದಾರೆ. 

ಗೋಪಿನಾಥ ಮುಂಢೆ ಅವರನ್ನು ಇಷ್ಟಪಡುವ ಎಲ್ಲರೂ ಅವರ ಸಾವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅವರ ಸಾವಿಗೆ ಅಪಘಾತ ಕಾರಣವೇ ಅಥವಾ ಅದರ ಹಿಂದೆ ಷಡ್ಯಂತ್ರ ಇದೆಯೇ ಎಂಬುದು ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ.

***

ಇಡೀ ನಾಟಕವೇ ಅರ್ಥವಾಗುತ್ತಿಲ್ಲ. ಆತ (ಶುಜಾ) ಯಾವ ಪುರಾವೆಯನ್ನೂ ನೀಡಿಲ್ಲ. ಮಾಧ್ಯಮದ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಪುರಾವೆಯೇ ಇಲ್ಲದೆ ದೊಡ್ಡ ಆರೋಪ ಮಾಡಲಾಗಿದೆ

ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

ಶುಜಾ ಹೇಳಿದ್ದು ವೈಜ್ಞಾನಿಕ ಕಾದಂಬರಿಯಂತೆ ಕಾಣಿಸುತ್ತಿದೆ. ಆದರೆ, ಅದನ್ನು ಪರಿಶೀಲಿಸಬೇಕು. ಆ ವ್ಯಕ್ತಿ ಅಮೆರಿಕದ ಆಶ್ರಯ ಕೋರಿದ್ದಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ

ಕಪಿಲ್‌ ಸಿಬಲ್‌, ಕಾಂಗ್ರೆಸ್‌ ಮುಖಂಡ

120 ದೇಶಗಳಲ್ಲಿ ಇವಿಎಂ ಬಳಕೆ ಇಲ್ಲ. ಜಗತ್ತಿನ 20 ದೇಶಗಳಲ್ಲಿ ಮಾತ್ರ ಇವಿಎಂ ಬಳಕೆ ಇದೆ. ಮತಯಂತ್ರಗಳ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ 

–ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶ ಮುಖ್ಯಮಂತ್ರಿ

ಇವಿಎಂಗಳ ಬಗ್ಗೆ ಗಂಭೀರ ಅನುಮಾನಗಳು ಎದ್ದಿವೆ. ಮುಂಬರುವ ಚುನಾವಣೆಯಲ್ಲಿ ಮತಪತ್ರ ಬಳಸುವುದು ಉತ್ತಮ. ಮತಪತ್ರಗಳನ್ನು ಮೂರು ಹಂತಗಳಲ್ಲಿ ಪರಿಶೀಲಿಸಬಹುದು, ಮತಯಂತ್ರದಲ್ಲಿ ಈ ಅವಕಾಶ ಇಲ್ಲ

–ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !