ಇವಿಎಂ ಸವಾಲಿಗೆ ಮತದಾರನ ಸಡ್ಡು

ಬುಧವಾರ, ಏಪ್ರಿಲ್ 24, 2019
30 °C
ಕೈಕೊಟ್ಟ ಮತಯಂತ್ರ: ಮಧ್ಯರಾತ್ರಿವರೆಗೂ ನಡೆದ ಮತದಾನ

ಇವಿಎಂ ಸವಾಲಿಗೆ ಮತದಾರನ ಸಡ್ಡು

Published:
Updated:
Prajavani

ಹೈದರಾಬಾದ್‌: ಬೇಸಿಗೆಯ ಸುಡು ಬಿಸಿಲು ಮತ್ತು ಮತಯಂತ್ರ ತಂತ್ರಜ್ಞಾನದ ಮೊಂಡಾಟಗಳೆಲ್ಲವನ್ನೂ ಆಂಧ್ರ ಪ್ರದೇಶದ ಮತದಾರ ಹಿಮ್ಮೆಟ್ಟಿಸಿದ ಕತೆ ಇದು.

ಬಿಸಿಲು, ಧಗೆ ತೀವ್ರವಾಗಿದ್ದರೂ ಸಾವಿರಾರು ಜನರು ಸರದಿ ಸಾಲಿನಲ್ಲಿ ತಾಳ್ಮೆಯಿಂದ ಕಾದರು. 400ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಆದ ವಿಳಂಬದಿಂದಾಗಿ ಇವರು ಹೀಗೆ ಕಾಯಬೇಕಾಯಿತು. ಕೆಲವೆಡೆ ಆದ ಗೊಂದಲ, ಗದ್ದಲ
ದಿಂದಾಗಿ ಪೊಲೀಸರು ಲಾಠಿ ಪ್ರಹಾರನಡೆಸಬೇಕಾಯಿತು. ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತ ಚಲಾವಣೆ ಕೆಲವೆಡೆ ಶುಕ್ರವಾರ ಬೆಳಗ್ಗಿನ ಜಾವದ ವರೆಗೆ ನಡೆದಿದೆ.ಅಷ್ಟಾದರೂ ಚಲಾವಣೆ ಆಗಿರುವ ಮತ ಪ್ರಮಾಣ ಶೇ 76.69 ಮಾತ್ರ. 2014ರ ಚುನಾವಣೆಗೆ ಹೋಲಿಸಿದರೆ ಇದು ಕಡಿಮೆಯೇ. ಬೆವರು ಸುರಿಸುತ್ತಾ ಸಾಲಿನಲ್ಲಿ ನಿಂತವರಿಗೆ ಒಂದು ಲೋಟ ನೀರು ಕೊಡುವ ವ್ಯವಸ್ಥೆಯೂ ಇರಲಿಲ್ಲ.

ಇಂತಹ ಯಾವುದೇ ‌ತೊಡಕು ಎದುರಾದರೂ ತಮ್ಮನ್ನು ಮತದಾನ ಮಾಡದಂತೆ ತಡೆಯಲಾಗದು ಎಂಬ ಗಟ್ಟಿ ನಿಲುವು ಅವರಲ್ಲಿ ಎದ್ದು ಕಾಣುತ್ತಿತ್ತು.‘ಇಂತಹ ತೊಂದರೆಗಳೆಲ್ಲ ಬಹಳ ಸಣ್ಣ ವಿಚಾರ. ಇಡೀ ಚುನಾವಣೆಯಲ್ಲಿ ಬಳಕೆಯಾಗಿರುವ ಮತಯಂತ್ರಗಳಿಗೆ ಹೋಲಿಸಿದರೆ ಲೋಪ ಕಂಡು ಬಂದ ಯಂತ್ರಗಳ ಪ್ರಮಾಣ ಶೇ 5ಕ್ಕೂ ಕಡಿಮೆ.ಗುರುವಾರ ಸಂಜೆ 6 ಗಂಟೆಯ ಹೊತ್ತಿಗೆ ಸಾಲಿನಲ್ಲಿ ನಿಂತಿದ್ದವರಿಗೆ ಮಧ್ಯರಾತ್ರಿ ಬಳಿಕವೂ ಮತ ಚಲಾವಣೆಗೆ ಅವಕಾಶ ಕೊಟ್ಟಿದ್ದೇವೆ’ ಎಂದು
ಆಂಧ್ರ ಪ‍್ರದೇಶದ ಮುಖ್ಯ ಚುನಾವಣಾ ಧಿಕಾರಿ ಗೋಪಾಲಕೃಷ್ಣ ದ್ವಿವೇದಿ ಹೇಳಿದ್ದಾರೆ. 

ವಿಜಯವಾಡ, ಗನ್ನಾವರಂ, ಜಗ್ಗೈಪೇಟೆ, ತಿರುವರೂರು, ಮಂಗಲಗಿರಿ, ಕಾಕಿನಾಡ, ಮಚಲಿಪಟ್ಟಣ ಮತ್ತು ವಿಶಾಖಪಟ್ಟಣದ ಸುತ್ತಮುತ್ತಲಿನ ಕೆಲವು ಮತಗಟ್ಟೆಗಳಲ್ಲಿ ಮಧ್ಯರಾತ್ರಿವರೆಗೂ ಮತದಾರರು ಇದ್ದರು. ಆಂಧ್ರಪ್ರದೇಶ–ಒಡಿಶಾ ಗಡಿಯ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದು ಆಯೋಗಕ್ಕೆ ಬಹಳ ಸಮಾಧಾನ ಕೊಟ್ಟ ವಿಚಾರ. ಈ ಪ್ರದೇಶಗಳಲ್ಲಿ 2014ರಲ್ಲಿ ಶೇ 78ರಷ್ಟು ಮತದಾನ ಆಗಿತ್ತು. 

ಮತದಾನ ವ್ಯವಸ್ಥೆಯ ಬಗ್ಗೆ ಟಿಡಿಪಿ ಮುಖಂಡರು ಕೆಲವು ಆಕ್ಷೇಪಗಳನ್ನು ಎತ್ತಿದ್ದಾರೆ.‘ರಾಯಲ ಸೀಮಾದಲ್ಲಿ ತೊಂದರೆ ಆಗಬಹುದು ಎಂದು ಮತ್ತೆ ಮತ್ತೆ ದೂರು ನೀಡಿದ್ದರೂ ಸೂಕ್ತ ವ್ಯವಸ್ಥೆ ಮಾಡಿಲ್ಲ ಏಕೆ? ಆಂಧ್ರ ಪ್ರದೇಶಕ್ಕೆ ಅಗತ್ಯ ಇರುವಷ್ಟು ಸಶಸ್ತ್ರ ಯೋಧರನ್ನು ಏಕೆ ನಿಯೋಜಿಸಿಲ್ಲ? ಭಾರಿ ಬಿಸಿಲು ಇದ್ದರೂ ಮತಗಟ್ಟೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಲ್ಲ ಏಕೆ’ ಎಂದು ಟಿಡಿಪಿ ವಕ್ತಾರ ಜುಪುಡಿ ಪ್ರಭಾಕರ ರಾವ್‌ ಪ್ರಶ್ನಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !