ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1500 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಅಮಾನ್ಯ ನೋಟು ಬಳಸಿ ಆಸ್ತಿ ಖರೀದಿಸಿದ್ದ ಶಶಿಕಲಾ: ಐ.ಟಿ. ಕಾರ್ಯಾಚರಣೆ
Last Updated 5 ನವೆಂಬರ್ 2019, 19:28 IST
ಅಕ್ಷರ ಗಾತ್ರ

ಚೆನ್ನೈ: ಸದ್ಯ ಜೈಲಿನಲ್ಲಿರುವ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ಸೇರಿದ ₹1500 ಕೋಟಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ₹500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಆಸ್ತಿಗಳನ್ನು ಖರೀದಿಸಲಾಗಿತ್ತು ಎನ್ನಲಾಗಿದೆ. ಬೇನಾಮಿ ವಹಿವಾಟು ನಿಷೇಧ ಕಾಯ್ದೆ ಅಡಿಯಲ್ಲಿ ಜಪ್ತಿ ಮಾಡಿಕೊಳ್ಳಲಾದ ಈ ಆಸ್ತಿಗಳಲ್ಲಿ ಚೆನ್ನೈನಲ್ಲಿರುವ ಮಾಲ್‌ ಮತ್ತು ಪುದುಚೇರಿಯ ರೆಸಾರ್ಟ್‌ ಸೇರಿದೆ.

ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಜಪ್ತಿ ಮಾಡಿರುವ ಒಂಬತ್ತು ಆಸ್ತಿಗಳನ್ನು 2016ರ ನವೆಂಬರ್‌ 8 ಮತ್ತು ಡಿಸೆಂಬರ್‌ 31ರ ಅವಧಿಯಲ್ಲೇ ಖರೀದಿಸಲಾಗಿತ್ತು. ಇದೇ ಅವಧಿಯಲ್ಲೇ ಶಶಿಕಲಾ ಸ್ನೇಹಿತರಾಗಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಖರೀದಿಸಲಾದ ಬಹುತೇಕ ಆಸ್ತಿಗಳನ್ನು ಶಶಿಕಲಾ ತನ್ನ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಬದಲಾಗಿ, ಅವುಗಳ ಮಾಲೀಕರ ಹೆಸರಿನಲ್ಲೇ ಉಳಿಸಿಕೊಳ್ಳಲಾಗಿತ್ತು. ಆದರೆ, ಶಶಿಕಲಾ ಕುಟುಂಬಕ್ಕೆ ಸೇರಿದ ಜಾಗವನ್ನು ಮತ್ತುಜಯಲಲಿತಾ ಇದ್ದ ಪೋಯಸ್‌ ಗಾರ್ಡನ್‌ ನಿವಾಸದಲ್ಲಿ ಇವರು ಪಡೆದಿದ್ದ ಕೊಠಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2017ರಲ್ಲಿ ದಾಳಿ ನಡೆಸಿದಾಗ ಅಕ್ರಮಗಳಿಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಚೆನ್ನೈ, ಕೊಯಮತ್ತೂರು ಮತ್ತು ಪುದುಚೇರಿಯ 37 ಸ್ಥಳಗಳಲ್ಲಿಯೂ ಈ ಸಂದರ್ಭದಲ್ಲಿ ದಾಳಿ ನಡೆಸಲಾಗಿತ್ತು.

ಕಾರು ಚಾಲಕರು, ಸಹಾಯಕರು, ಮನೆಯಲ್ಲಿದ್ದ ಕೆಲಸಗಾರರು ಸೇರಿದಂತೆ ಹಲವು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿಯೂ ಬೇನಾಮಿ ಆಸ್ತಿಗಳನ್ನು ಖರೀದಿಸಿರುವುದು ತನಿಖೆ ವೇಳೆ ಪತ್ತೆಯಾಗಿತ್ತು.

ಅಮಾನ್ಯಗೊಳಿಸಿದ್ದ ₹1500 ಕೋಟಿ ಮೌಲ್ಯದ ನೋಟುಗಳನ್ನು ಬಳಸಿ ಶಶಿಕಲಾ ಈ ಆಸ್ತಿಗಳನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ. ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಆಪರೇಷನ್‌ ಕ್ಲೀನ್‌ ಮನಿ’ ಭಾಗವಾಗಿ ಆದಾಯ ತೆರಿಗೆ ಇಲಾಖೆ ಈ ಕ್ರಮಕೈಗೊಂಡಿದೆ. ಜೈಲಿನ ಅಧಿಕಾರಿಗಳ ಮೂಲಕ ಶಶಿಕಲಾ ಅವರಿಗೆ ಆಸ್ತಿ ಜಪ್ತಿ ಮಾಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT