ಸೋಮವಾರ, ನವೆಂಬರ್ 18, 2019
25 °C
ಮತಗಟ್ಟೆ ಸಮೀಕ್ಷೆ

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ: ಬಿಜೆಪಿಗೆ ಜಯ – ಸಮೀಕ್ಷೆ ಭವಿಷ್ಯ

Published:
Updated:

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ತುಂಬಾ ಸುಲಭವಾಗಿ ಅಧಿಕಾರ ಉಳಿಸಿಕೊಳ್ಳಲಿದೆ. ಮಾತ್ರವಲ್ಲ ಎರಡೂ ರಾಜ್ಯಗಳಲ್ಲಿ ಮೂರನೇ ಎರಡರಷ್ಟು ಬಹುಮತವೂ ಸಿಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ವಿರೋಧ ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಲಿವೆ ಎಂದೂ ಸಮೀಕ್ಷೆಗಳು ಅಂದಾಜಿಸಿವೆ. ಗುರುವಾರ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ: ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿ ಮೇಲುಗೈ

2019ರಲ್ಲಿ ನಡೆದ ಲೋಕಸಭೆ ಚುನಾವಣೆಯ ಬಳಿಕದ ಮೊದಲ ಮಹತ್ವದ ಚುನಾವಣೆ ಇದಾಗಿತ್ತು. ಲೋಕಸಭೆಯಲ್ಲಿ ಮತಹಾಕಿದ ಮಾದ ರಿಯಲ್ಲಿಯೇ ಎರಡೂ ರಾಜ್ಯಗಳ ಮತದಾರರು ಮತ ಹಾಕಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. 

ವಿವಿಧ ಸುದ್ದಿವಾಹಿನಿಗಳು ಮತ್ತು ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆಯ ಫಲಿತಾಂಶವು ಸೋಮವಾರ ಸಂಜೆ ಆರು ಗಂಟೆಗೆ ಮತದಾನ ಪೂರ್ಣಗೊಂಡ ಕೂಡಲೇ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಎರಡೂ ರಾಜ್ಯಗಳಲ್ಲಿಯೂ ಮೂರನೇ ಎರಡರಷ್ಟು ಬಹುಮತ ದೊರೆಯಲಿದೆ ಎಂಬುದು ಎಲ್ಲ ಸಮೀಕ್ಷೆಗಳ ಸಾರಾಂಶ.

ಹಾಗಾಗಿಯೇ, ಸಮೀಕ್ಷೆಗಳ ಸರಾಸರಿಯಲ್ಲಿಯೂ ಎನ್‌ಡಿಎಗೆ ಮೂರನೇ ಎರಡಷ್ಟು ಬಹುಮತ ಇದೆ. 

ಮಹಾರಾಷ್ಟ್ರದಲ್ಲಿ ಶಿವ ಸೇನಾದ ಜತೆಗೆ ಮೈತ್ರಿ ಇದ್ದರೂ ಏಕಾಂಗಿಯಾಗಿಯೇ ಸರಳ ಬಹುಮತ ಗಳಿಸಬೇಕು ಎಂಬ ಇರಾದೆ ಬಿಜೆಪಿಗೆ ಇತ್ತು. ಆದರೆ, ಅದು ಸಾಧ್ಯವಾಗಬಹುದು ಎಂದು ಯಾವುದೇ ಸಮೀಕ್ಷೆ ಹೇಳಿಲ್ಲ. ಇಂಡಿಯಾ–ಟುಡೇ–ಆ್ಯಕ್ಸಿಸ್‌ ಸಮೀಕ್ಷೆ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿ 142 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಸರಳ ಬಹುಮತಕ್ಕೆ 145 ಕ್ಷೇತ್ರಗಳನ್ನು ಗೆಲ್ಲಬೇಕು. 

ಹರಿಯಾಣದಲ್ಲಿ ಬಿಜೆಪಿಯ ನೆಲೆ ಭಾರಿ ಗಟ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ವಿಧಾನಸಭೆಯ 90 ಕ್ಷೇತ್ರಗಳ ಪೈಕಿ 72ರಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಎಬಿಸಿ–ಸಿ ವೋಟರ್‌ ಸಮೀಕ್ಷೆ ಹೇಳಿದೆ.

ಪ್ರತಿಕ್ರಿಯಿಸಿ (+)