ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ವಾಹನ ಸಮೀಪ ಕಾರು ಸ್ಫೋಟ

ಯಾವುದೇ ಪ್ರಾಣ ಹಾನಿ ಇಲ್ಲ l ಆತಂಕದ ವಾತಾವರಣ ಸೃಷ್ಟಿ
Last Updated 31 ಮಾರ್ಚ್ 2019, 1:16 IST
ಅಕ್ಷರ ಗಾತ್ರ

ಬನಿಹಾಲ್‌/ಜಮ್ಮು: ಸಿಆರ್‌ಪಿಎಫ್‌ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನವೊಂದರ ಸಮೀಪ ಕಾರೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಶನಿವಾರ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೇಥಾರ್ ಗ್ರಾಮದ ಬಳಿ ಈ ಸ್ಫೋಟ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರುವರಿ 14ರಂದು ಪುಲ್ವಾಮಾ ಸಮೀಪ ವಾಹನವೊಂದರಲ್ಲಿ ಬಂದಿದ್ದ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಹೀಗಾಗಿ ಶನಿವಾರ ಸಂಭವಿಸಿದ ಸ್ಫೋಟ ಸಹ ಪುಲ್ವಾಮಾ ಘಟನೆಯನ್ನು ನೆನಪಿಸಿ, ಆತಂಕಕ್ಕೆ ಕಾರಣವಾಗಿತ್ತು.

‘ಜಮ್ಮು ಪ್ರದೇಶದ ಬನಿಹಾಲ್‌ ಪಟ್ಟಣದಿಂದ 7 ಕಿ.ಮೀ ದೂರದಲ್ಲಿರುವ ತೇಥಾರ್ ಗ್ರಾಮದ ಬಳಿಯ ಜವಾಹರ್ ಟನೆಲ್‌ ಸಮೀಪ ಕಾರೊಂದರಲ್ಲಿದ್ದ ಸಿಲಿಂಡರ್‌ ಸ್ಫೋಟಗೊಂಡಿದೆ. ಸಿಆರ್‌ಪಿಎಫ್‌ ಯೋಧರನ್ನು ಕರೆದೊಯ್ಯುತ್ತಿದ್ದ ಒಟ್ಟು 10 ವಾಹನಗಳ ಪೈಕಿ ಒಂದಕ್ಕೆ ಸ್ವಲ್ಪ ಧಕ್ಕೆಯಾಗಿದೆ. ಕಾರು ಸಂಪೂರ್ಣ ಸುಟ್ಟುಹೋಗಿದೆ’ ಎಂದು ಬನಿಹಾಲ್‌ನ ಪೊಲೀಸ್‌ ಅಧಿಕಾರಿ ಸಾಜದ್‌ ಸರ್ವಾರ್‌ ತಿಳಿಸಿದ್ದಾರೆ.

‘ಕಾರಿನಲ್ಲಿದ್ದ ಮತ್ತೊಂದು ಸಿಲಿಂಡರ್‌ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ದೊರೆತಿದ್ದು, ಯಾವುದೇ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲ. ಕಾರಿಗೆ ಬೆಂಕಿಹೊತ್ತಿದ್ದ ತಕ್ಷಣ ಕಾರು ಚಾಲಕ ಪರಾರಿಯಾಗಿರಬಹುದು’ ಎಂದು ಅವರು ಹೇಳಿದ್ದಾರೆ.

‘ಸದ್ಯ ಏನೂ ಹೇಳಲಾಗದು’

‘ಬನಿಹಾಲ್‌ನಲ್ಲಿ ನಡೆದ ಘಟನೆ ಉಗ್ರರ ಕೃತ್ಯವೇ ಅಥವಾ ಅಲ್ಲವೇ ಎಂಬುದು ಗೊತ್ತಾಗಿಲ್ಲ. ಈ ಕ್ಷಣಕ್ಕೆ ಏನೂ ಹೇಳಲಾಗುವುದಿಲ್ಲ’ ಎಂಧು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಜಮ್ಮುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಕಾರಿನಲ್ಲಿ ಬೆಂಕಿ ಏಕೆ ಹೊತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ. ಕಾರು ಚಾಲಕನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT