ಫೆಬ್ರುವರಿ ನಂತರ ವಿಮಾನ ಏರಲು ಮುಖಚಹರೆಯಷ್ಟೇ ಸಾಕು

7
ಗುರುತಿನ ಚೀಟಿ, ಟಿಕೆಟ್ ತೋರಿಸುವ ಪದ್ಧತಿ ಪರ್ಯಾಯ

ಫೆಬ್ರುವರಿ ನಂತರ ವಿಮಾನ ಏರಲು ಮುಖಚಹರೆಯಷ್ಟೇ ಸಾಕು

Published:
Updated:

ನವದೆಹಲಿ: ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ, ವಿಮಾನ ಏರುವವರೆಗೆ ಹಲವು ಬಾರಿ ಟಿಕೆಟ್ ಮತ್ತು ಗುರುತಿನ ಚೀಟಿ ತೋರಿಸುವುದು ಕಿರಿಕಿರಿಯೇ ಸರಿ. ಈ ಕಿರಿಕಿರಿಗೆ ಅಂತ್ಯ ಹಾಡಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ.

ಫೆಬ್ರುವರಿಯ ನಂತರ ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ಪ್ರಯಾಣ ಆರಂಭಿಸುವವರು ತಮ್ಮ ಗುರುತಿನ ಚೀಟಿ ತೋರಿಸಬೇಕಿಲ್ಲ. ಬದಲಿಗೆ ತಮ್ಮ ಮುಖವನ್ನು ಸ್ಕ್ಯಾನ್ ಮಾಡಿದರೆ ಸಾಕು.

ಹೌದು ಪ್ರಯಾಣಿಕರ ಮುಖ ಚಹರೆಯನ್ನು ದೃಢಪಡಿಸಿಕೊಂಡು (ಫೇಶಿಯಲ್ ರೆಕಗ್ನೇಷನ್) ವಿಮಾನ ನಿಲ್ದಾಣಕ್ಕೆ ಪ್ರವೇಶ ನೀಡುವ ‘ಡಿಜಿ ಯಾತ್ರಾ’ ವ್ಯವಸ್ಥೆ ಆರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸಿದೆ. ಇಷ್ಟು ಮಾತ್ರವಲ್ಲ. ಚೆಕ್‌–ಇನ್–ಕೌಂಟರ್ ಮತ್ತು ಲಗೇಜ್ ಡ್ರಾಪ್‌ ವೇಳೆಯೂ ಪ್ರಯಾಣಿಕರು ತಮ್ಮ ಚಹರೆಯ ಗುರುತನ್ನು ದೃಢಪಡಿಸಿದರೆ ಸಾಕು. 

ಈ ಸವಲತ್ತನ್ನು ಪಡೆಯಲು ಪ್ರಯಾಣಿಕರು ಡಿಜಿ ಯಾತ್ರಾ ಜಾಲತಾಣದಲ್ಲಿ ತಮ್ಮ ಚಾಲನಾ ಪರವಾನಗಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ವಿವರಗಳನ್ನು ನಮೂದಿಸಿ ನೋಂದಾಯಿಸಿಕೊಳ್ಳಬೇಕು. ಆನಂತರ ವಿಮಾನ ನಿಲ್ದಾಣದಲ್ಲಿರುವ ಕಿಯೋಸ್ಕ್‌ನಲ್ಲಿ ತಮ್ಮ ಚಹರೆಯನ್ನು ದಾಖಲಿಸಿಬೇಕು. ಆಗ ಅವರಿಗೆ ಡಿಜಿ ಯಾತ್ರಾ ಗುರುತಿನ ಚೀಟಿ ಸಿಗಲಿದೆ. ನಂತರ ಅವರು ವಿಮಾನ ಏರಲು ತಮ್ಮ ಮುಖಚಹರೆಯನ್ನು ದೃಢಪಡಿಸಿದರೆ ಸಾಕು.

‘ಇದು ಐಚ್ಛಿಕ ವ್ಯವಸ್ಥೆ. ಡಿಜಿ ಯಾತ್ರಾಗೆ ನೋಂದಣಿ ಆಗಬೇಕಾದ್ದದ್ದು ಕಡ್ಡಾಯವಲ್ಲ. ಆದರೆ ಡಿಜಿ ಯಾತ್ರಾ ಬಳಕೆಗೆ ಬಂದರೆ ವಿಮಾನ ನಿಲ್ದಾಣದಲ್ಲಿ ಚೆಕ್‌–ಇನ್ ಪ್ರಕ್ರಿಯೆಗೆ ವೇಗ ಸಿಗಲಿದೆ’ ಎಂದು ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !