ಪೊಲೀಸರು ನನ್ನನ್ನು ಭಯೋತ್ಪಾದಕನಂತೆ, ಅಪರಾಧಿಯಂತೆ ಕಂಡರು: ಆನಂದ್ ತೆಲ್ತುಂಬೆ

ನವದೆಹಲಿ: ಭೀಮ–ಕೊರಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ತಮ್ಮ ಮನೆ ಮೇಲೆ ಹಠಾತ್ ದಾಳಿ ನಡೆಸಿದಕ್ಕೆ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕ ಆನಂದ್ ತೆಲ್ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಮಂಗಳವಾರ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ತೆಲ್ತುಂಬೆ ಅವರು ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ.
ಆನಂದ್ ತೇಲ್ತುಂಬೆ ಫೇಸ್ಬುಕ್ ಬರಹದ ಸಾರ: ‘ವಿಮಾನ ಪ್ರಯಾಣ ಮಾಡಿ ಬಂದು ಮಲಗುವಾಗ ತಡರಾತ್ರಿಯಾಗಿದ್ದರಿಂದ ಬೆಳಿಗ್ಗೆ ಏಳುವಾಗ ತಡವಾಗಿತ್ತು. ಹಾಗಾಗಿ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಅಜಿತ್ ಪರುಲೆಕರ್ ಅವರ ಕರೆ ಬಂದಿದ್ದನ್ನು ನಾನು ಗಮನಿಸಿರಲಿಲ್ಲ. ಬಳಿಕ ಕರೆ ಮಾಡಿದಾಗ ನನಗೊಂದು ಆಘಾತ ಕಾದಿತ್ತು. ಪುಣೆ ಪೊಲೀಸರು ಕಾಲೇಜಿನ ಕ್ಯಾಂಪಸ್ಗೆ ಬಂದು ಹುಡುಕಾಟ ನಡೆಸಿರುವ ಬಗ್ಗೆ ಅಜಿತ್ ತಿಳಿಸಿದರು.
ಬಳಿಕ, ಮೊದಲೇ ನಿಗದಿಪಡಿಸಿದ್ದ ಸಭೆಯನ್ನು ಮುಗಿಸಿದೆ. ಅಷ್ಟರಲ್ಲಿ ಸಾಮಾಜಿಕ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಕೆಲವರನ್ನು ಬಂಧಿಸಿರುವುದರ ಬಗ್ಗೆ ಸುದ್ದಿವಾಹಿನಿಗಳಲ್ಲಿ ವರದಿ ಬಿತ್ತರವಾಗುತ್ತಿತ್ತು. ತಕ್ಷಣ ನನ್ನ ಪತ್ನಿಗೆ ಕರೆ ಮಾಡಿದೆ. ಆಗ ನನ್ನ ಮನೆಯಲ್ಲೂ ಶೋಧ ಕಾರ್ಯ ನಡೆದಿರುವ ಬಗ್ಗೆ ತಿಳಿಯಿತು. ಹೆದರಿದ ಪತ್ನಿಯು ಗೋವಾದಿಂದ ಹೊರಡುವ ಸಲುವಾಗಿ ಇಬ್ಬರಿಗೂ ವಿಮಾನದ ಟಿಕೆಟ್ ಕಾಯ್ದರಿಸಿದ್ದರು. ಆದರೆ ನಾನು ಆಕೆಗೆ ಟಿಕೆಟ್ ಅನ್ನು ರದ್ದುಗೊಳಿಸಿ ಅವರ ವಕೀಲ ಸ್ನೇಹಿತರನ್ನು ಭೇಟಿ ಮಾಡಿ ಪೊಲೀಸರು ನಡೆಸಿರುವ ದಾಳಿಯ ಬಗ್ಗೆ ತಿಳಿಸಲು ಹೇಳಿದೆ. ಆಗ ವಕೀಲರು, ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಲಹೆ ನೀಡಿದರು. ನನ್ನ ಟಿಕೆಟ್ ರದ್ದುಗೊಳಿಸಿ ಪತ್ನಿಯನ್ನು ಗೋವಾಕ್ಕೆ ಕಳುಹಿಸಿಕೊಟ್ಟೆ. ಅವರು ಸ್ನೇಹಿತ ವಕೀಲರ ಸಹಾಯದಿಂದ ದೂರು ದಾಖಲಿಸಿದರು.
ನಂತರ ನಿರ್ದೇಶಕರಿಗೆ ಕರೆ ಮಾಡಿ ನನ್ನ ಅನುಪಸ್ಥಿತಿಯಲ್ಲಿ ಬೀಗ ನೀಡಿರುವುದರ ಬಗ್ಗೆ ಪ್ರಶ್ನಿಸಿದೆ. ಆಗ ಅವರು ನಾನು ಕ್ಯಾಂಪಸ್ಗೆ ತಲುಪುವ ಮೊದಲೇ ಪೊಲೀಸರು ದಾಳಿ ನಡೆಸಿರುವ ಬಗ್ಗೆ ವಿವರಿಸಿದರು.
ಮತ್ತೊಬ್ಬ ಸಹೋದ್ಯೋಗಿ ಕೃಷ್ಣ ಲಡ್ಡಾ ಅವರ ಬಳಿ ವಿಚಾರಿಸಿದಾಗ, ಪೊಲೀಸರು ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಬೀಗ ತೆಗೆದು ಬಾಗಿಲು ತೆರೆದ ವಿಷಯ ಅರುಹಿದರು. ಒಬ್ಬ ವಿಡಿಯೋಗ್ರಾಫರ್, ಭದ್ರತಾ ಸಿಬ್ಬಂದಿಯ ಜತೆ ಮನೆಯೊಳಗೆ ನುಗ್ಗಿದ್ದ ಪೊಲೀಸರು 5 ನಿಮಿಷಗಳ ಕಾಲ ಹುಡುಕಾಟ ನಡೆಸಿದ ಬಗ್ಗೆ ಮತ್ತು ನಂತರ ಹೊರಗೆ ಬಂದು ಭದ್ರತಾ ಸಿಬ್ಬಂದಿಗೆ ಬೀಗ ಹಾಕುವಂತೆ ತಾಕೀತು ಮಾಡಿದ ಕುರಿತು ಮಾಹಿತಿ ನೀಡಿದರು.
ಎದುರು ಮನೆಯಲ್ಲಿ ವಾಸಿಸುತ್ತಿರುವ ಪ್ರಾಧ್ಯಾಪಕ ವಿಷ್ಣು ಅವರನ್ನು ವಿಚಾರಿಸಿದಾಗ, ಕೃಷ್ಣ ಅವರು ನೀಡಿರುವ ಮಾಹಿತಿಯನ್ನೇ ನೀಡಿದರು. ಜತೆಗೆ, ಮನೆಯಿಂದ ಕೆಲವು ವಸ್ತುಗಳನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದನ್ನು ನೋಡಿದ್ದಾಗಿ ಕಸಗುಡಿಸುವ ಮಹಿಳೆ ಹೇಳಿದ್ದಾಳೆ ಎಂದು ತಿಳಿಸಿದರು.
ಗೋವಾಕ್ಕೆ ತಲುಪಿದ ನನ್ನ ಪತ್ನಿ ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದಾಗ, ‘ಪೊಲೀಸರು ಎರಡು ವಾಹನಗಳಲ್ಲಿ ಕ್ಯಾಂಪಸ್ಗೆ ಬಂದರು. ಎಲ್ಲರ ಮೊಬೈಲ್ಫೋನ್ಗಳನ್ನು ವಶಕ್ಕೆ ತೆಗೆದುಕೊಂಡರು. ಸ್ಥಿರ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದರು. ನಮ್ಮನ್ನು ಬೆದರಿಸಿ ಬೀಗ ತೆಗೆದುಕೊಂಡು ಮನೆಯನ್ನೆಲ್ಲಾ ಹುಡುಕಾಟ ನಡೆಸಿದರು‘ ಎಂದು ಪೊಲೀಸರ ನಡವಳಿಕೆಯನ್ನು ವಿವರಿಸಿದರು.
ಇಲ್ಲಿ ಪೋಲಿಸರು ನಡೆದುಕೊಂಡ ರೀತಿಯನ್ನು ಗಮನಿಸಿದರೆ, ಅವರು ನನ್ನನ್ನು ಒಬ್ಬ ದೊಡ್ಡ ಅಪರಾಧಿ ರೀತಿ ಕಂಡಿರುವುದು ಸ್ಪಷ್ಟವಾಗುತ್ತದೆ. ಪೊಲೀಸರು ನನ್ನ ಬಳಿ ವಿಚಾರಿಸಿ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿತ್ತು. ಅಲ್ಲದಿದ್ದರೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಅಥವಾ ಕರೆ ಮಾಡಿ ನನ್ನನ್ನೇ ಪೊಲೀಸ್ ಠಾಣೆಗೆ ಬರುವಂತೆ ಹೇಳಬಹುದಾಗಿತ್ತು. ಆದರೆ ಇದ್ಯಾವುದನ್ನೂ ಮಾಡದ ಪೊಲೀಸರು ನನ್ನನ್ನು ದೊಡ್ಡ ಭಯೋತ್ಪಾದಕನಂತೆ ಮತ್ತು ಯಾವುದೋ ದೊಡ್ಡ ದುಷ್ಕೃತ್ಯ ಎಸಗಿದ ಅಪರಾಧಿಯಂತೆ ಕಂಡರು’ ಎಂದು ಪೊಲೀಸರ ವರ್ತನೆಯ ಬಗ್ಗೆ ತೆಲ್ತುಂಬೆ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ...
ಬಂಧನ ಪರ್ವ: ಪೊಲೀಸರ ವಶದಲ್ಲಿರುವವರ ಇತ್ಯೋಪರಿ
ಮೋದಿ ಹತ್ಯೆಗೆ ಸಂಚು: ಕವಿ ವರ ವರರಾವ್ ಬಂಧನ, ವ್ಯಾಪಕ ಟೀಕೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.