ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ‘ಸೋತ’ರೂ ಬಿಜೆಪಿಗೆ ಭೀತಿ ಮೂಡಿಸಿದ್ದ ಮಹಾಮೈತ್ರಿ

12ಕ್ಕೂ ಅಧಿಕ ಕ್ಷೇತ್ರಗಳಲ್ಲಿ ತಗ್ಗಿದ ಗೆಲುವಿನ ಅಂತರ
Last Updated 26 ಮೇ 2019, 19:42 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ 62ರಲ್ಲಿ ಗೆದ್ದಿರುವ ಬಿಜೆಪಿ ವಿಜಯದ ಉತ್ಸಾಹದಲ್ಲಿದೆ. ಆದರೆ, ‘ಮಹಾಮೈತ್ರಿ’ ತನ್ನ ವೈಫಲ್ಯದ ನಡುವೆಯೂ 13 ಸೀಟು ಕಸಿದುಕೊಂಡಿದೆ ಮತ್ತು ಇತರೆ 24 ಕ್ಷೇತ್ರಗಳಲ್ಲಿ ಸೋಲಿನ ಭೀತಿ ಮೂಡಿಸಿತ್ತು ಎಂಬುದು ಫಲಿತಾಂಶದ ವಿಶ್ಲೇಷಣೆಯಿಂದ ತಿಳಿಯುತ್ತದೆ.

ಕೇಂದ್ರ ಸಚಿವ ಮನೋಜ್‌ ಸಿನ್ಹಾ ಅವರು ಗಾಜಿಪುರ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಅಫ್ಜಲ್‌ ಅನ್ಸಾರಿ ವಿರುದ್ಧ ಪರಾಭವಗೊಂಡರೆ, ಇತರೆ ಇಬ್ಬರು ಸಚಿವರಾದ ಸತ್ಯಪಾಲ್ ಸಿಂಗ್‌ ಮತ್ತು ಮೇನಕಾ ಗಾಂಧಿ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂಗ್ ಅವರು ಭಾಗ್‌ಪತ್‌ ಕ್ಷೇತ್ರದಿಂದ ಕೇವಲ 23 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರೆ, ಮೇನಕಾ ಗಾಂಧಿ ಅವರು ಸುಲ್ತಾನ್‌ಪುರ ಕ್ಷೇತ್ರದಲ್ಲಿ 14 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. 2014ರಲ್ಲಿ ಬಿಜೆಪಿ ಈ ಎರಡೂ ಕ್ಷೇತ್ರಗಳಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿತ್ತು.

ಎಸ್‌ಪಿ–ಬಿಎಸ್‌ಪಿ ಮಹಾಮೈತ್ರಿಯ ಅಭ್ಯರ್ಥಿಗಳು ಅನೇಕ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದು, ಗೆಲುವಿನ ಅಂತರ ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೀರಠ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 5 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. 2014ರಲ್ಲಿ ಇಲ್ಲಿ ಬಿಜೆಪಿ ಗೆಲುವಿನ ಅಂತರ 2.32 ಲಕ್ಷ ಮತಗಳು.

ಅಂತೆಯೇ, ಬಿಜೆಪಿ ಅಭ್ಯರ್ಥಿ ಸಂಜೀವ್‌ ಬಲಿಯಾನ್‌ ಅವರು ಮುಜಫ್ಫರ್‌ನಗರ ಕ್ಷೇತ್ರದಲ್ಲಿ 6 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದು, ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಇವರು 2014ರಲ್ಲಿ ನಾಲ್ಕು ಲಕ್ಷ ಮತಗಳಿಂದ ಜಯಗಳಿಸಿದ್ದರು.

ಅಲ್ಲದೆ, ಪ್ರತಾಪ್‌ಗಡ, ಎತ್ವಾ, ಬಾಂದಾ, ಕೌಸಾಂಬಿ, ಬಸ್ತಿ, ಸಂತ ಕಬೀರ ನಗರ, ಬಲಿಯಾ, ಬಡೋಹಿ, ರಾಬರ್ಟ್ಸ್‌ಗಂಜ್‌ ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳಿಂದ ಬಿಜೆಪಿ ಅಭ್ಯರ್ಥಿಗಳು ತೀವ್ರ ಸ್ಪರ್ಧೆಯನ್ನು ಎದುರಿಸಿದ್ದರು.

ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್‌ ಪಾಂಡೆ ಅವರೂ ಚಂದೌಲಿ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಿಸಿದ್ದರು. ಅಂತಿಮವಾಗಿ ಕೇವಲ 14 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಇಲ್ಲಿ ಬಿಜೆಪಿ 2014ರಲ್ಲಿ 1.57 ಲಕ್ಷ ಮತಗಳ ಅಂತರದಿಂದ ಜಯಗಳಿಸಿತ್ತು.

ರಾಜ್ಯದಲ್ಲಿ ತೀವ್ರ ಹಣಾಹಣಿ ಕಂಡ ಇನ್ನೊಂದು ಕ್ಷೇತ್ರ ಮಚಲೀಶಹರ್. ಇಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ.ಸರೋಜ್‌ ಅವರು ಬಿಎಸ್‌ಪಿ ಅಭ್ಯರ್ಥಿ ಟಿ.ರಾಮ್‌ ವಿರುದ್ಧ ಕೇವಲ 181 ಮತಗಳ ಅಂತರದಿಂದ ಗೆದ್ದಿದ್ದಾರೆ.

ಚುನಾವಣಾ ಪೂರ್ವದಲ್ಲಿ ನಾವು ವ್ಯವಸ್ಥಿತವಾಗಿ ಕಾರ್ಯತಂತ್ರ ರೂಪಿಸಿದ್ದರೆ ನಾವು 40 ಕ್ಷೇತ್ರಗಳಲ್ಲಿ ಜಯಗಳಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಸ್‌ಪಿ ಮತ್ತು ಬಿಎಸ್‌ಪಿ ನಾಯಕರು.

ಆದರೆ, ಲೋಕಸಭೆ ಚುನಾವಣೆ ಮತದಾನದ ಅಂಕಿ ಅಂಶಗಳು ಉಭಯ ಪಕ್ಷಗಳು 2022ರ ವಿಧಾನಸಭೆ ಚುನಾವಣೆಯಲ್ಲಿಯೂ ಮೈತ್ರಿ ಹೊಂದುವುದು ಅಗತ್ಯ ಎಂಬುದನ್ನು ದೃಢಪಡಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT