ಮಂಗಳವಾರ, ನವೆಂಬರ್ 12, 2019
28 °C
ಬಿಜೆಪಿ ಮುಖಂಡನ ವಿರುದ್ಧ ತಾಯಿ ಆರೋಪ

ಇಸ್ಲಾಂ ವಿರುದ್ಧ ಹೇಳಿಕೆಯೇ ತಿವಾರಿ ಹತ್ಯೆಗೆ ಕಾರಣ: ಐವರ ಬಂಧನ

Published:
Updated:

ಲಖನೌ: ಹಿಂದೂ ಮಹಾಸಭಾ ಮುಖಂಡ ಕಮಲೇಶ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‌ನ ಮೂವರು ಹಾಗೂ ಬಿಂಜೋರ್‌ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ಧರ್ಮಗುರುಗಳನ್ನು ಬಂಧಿಸಲಾಗಿದೆ. ಪ್ರವಾದಿ ಮೊಹಮದ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕಾರಣಕ್ಕಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಈ ಕೊಲೆಗೆ ಬಿಜೆಪಿ ಮುಖಂಡ ಶಿವಕುಮಾರ್ ಗುಪ್ತಾ ಕಾರಣವಾಗಿದ್ದು, ಅವರನ್ನು ತಕ್ಷಣ ಬಂಧಿಸಬೇಕು ಎಂದು ತಿವಾರಿ ಕುಟುಂಬ ಆಗ್ರಹಿಸಿದೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಉತ್ತರಪ್ರದೇಶ ಪೊಲೀಸ್ ಮಹಾನಿರ್ದೇಶಕ ಒ.ಪಿ ಸಿಂಗ್, ಸೂರತ್‌ನಲ್ಲಿ ಮೌಲಾನಾ ಶೇಕ್‌ ಸಲೀಂ, ಫೈಜಾನ್‌ ಹಾಗೂ ರಷೀದ್‌ ಎಂಬುವವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಶೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಫೈಜಾನ್‌ ಅವರು, ಸೂರತ್‌ನ ಅಂಗಡಿಯಲ್ಲಿ ಸ್ವೀಟ್ ಖರೀದಿಸಿ ಅದನ್ನು ಕೊಡುವ ನೆಪದಲ್ಲಿ ಹತ್ಯೆ ಮಾಡುವ ಸಂಚು ರೂಪಿಸಿದ್ದ ಎಂದು ಸಿಂಗ್‌ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ತಿವಾರಿ ನೀಡಿದ ಹೇಳಿಕೆಗಳೇ ಹತ್ಯೆಗೆ ಕಾರಣವಾಗಿದ್ದು, ಉಗ್ರರು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

ಆದರೆ, ಮಗನ ಸಾವಿಗೆ ಸಿತಾಪುರ ಜಿಲ್ಲೆಯ ಬಿಜೆಪಿ ನಾಯಕ ಕಾರಣ. ಆತನನ್ನು ಗಲ್ಲಿಗೇರಿಸಿ ಎಂದು ತಿವಾರಿಯ ತಾಯಿ ಹೇಳಿದ್ದು ಪ್ರಕರಣ ಹೊಸ ತಿರುವು ಪಡೆಡಿದೆ.

ಮೂಲಗಳ ಪ್ರಕಾರ ಮೆಹಮೂದಾಬಾದ್‌ನಲ್ಲಿರುವ ದೇವಸ್ಥಾನದ ಒಡೆತನದ ಸಂಬಂಧ ತಿವಾರಿ ಹಾಗೂ ಗುಪ್ತಾ ನಡುವೆ ಸಂಘರ್ಷ ಇತ್ತು. ಅದೀಗ ಕೊರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ಪ್ರತಿಕ್ರಿಯಿಸಿ (+)