ಶುಕ್ರವಾರ, ಡಿಸೆಂಬರ್ 6, 2019
25 °C
ಬೆಲೆ ಕುಸಿತದಿಂದ ರೋಸಿಹೋದ ಮಹಾರಾಷ್ಟ್ರದ ರೈತನ ಆಕ್ರೋಶ

ಈರುಳ್ಳಿ ಮಾರಿದ ದುಡ್ಡು ಪ್ರಧಾನಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ತಾವು ಬೆಳೆದಿದ್ದ ಪ್ರತಿ ಕೆ.ಜಿ. ಈರುಳ್ಳಿಗೆ ಕೇವಲ ₹1.40 ದೊರೆತದ್ದರಿಂದ ರೋಸಿಹೋದ ಮಹಾರಾಷ್ಟ್ರದ ರೈತರೊಬ್ಬರು, ಈರುಳ್ಳಿ ಮಾರಾಟದಿಂದ ಬಂದ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನಿ ಆರ್ಡರ್ ಮಾಡಿದ್ದಾರೆ.

ನಾಸಿಕ್ ಜಿಲ್ಲೆಯ ನಿಫಾಡ್‌ ತೆಹ್ಸಿಲ್ ನಿವಾಸಿ ಸಂಜಯ್ ಸಾಥಿ ತಮ್ಮ ಬೆಳೆಗೆ ದೊರೆತ ಇಡೀ ಆದಾಯವನ್ನು ಪ್ರಧಾನಿ ಮೋದಿಗೆ ರವಾನಿಸಿದ್ದಾರೆ.

‘ನನ್ನ ಜಮೀನಿನಲ್ಲಿ 750 ಕೆ.ಜಿ.ಯಷ್ಟು ಈರುಳ್ಳಿ ಇಳುವರಿ ದೊರೆತಿತ್ತು. ಅದನ್ನು ನಿಫಾಡ್‌ ಕೃಷಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದೆ. ಆರಂಭದಲ್ಲಿ ಪ್ರತಿ ಕೆ.ಜಿ.ಗೆ ₹ 1ರಷ್ಟು ಬೆಲೆ ಕೊಡುತ್ತೇವೆ ಎನ್ನುತ್ತಿದ್ದರು. ಹಾಗೂ–ಹೀಗೂ ಚೌಕಾಸಿ ನಡೆಸಿದ್ದಕ್ಕೆ ಪ್ರತಿ ಕೆ.ಜಿ.ಗೆ ₹ 1.40 ದೊರೆಯಿತು’ ಎಂದು ಸಂಜಯ್ ವಿವರಿಸಿದ್ದಾರೆ.

‘ಇಡೀ ಬೆಳೆಗೆ ನನಗೆ ದೊರೆತದ್ದು ₹ 1,064 ಮಾತ್ರ. ರೈತರ ಸಮಸ್ಯೆಗಳನ್ನು ಈ ಸರ್ಕಾರ ಆಲಿಸುತ್ತಲೇ ಇಲ್ಲ. ಭಾರಿ ಅಸಮಾಧಾನದಿಂದ ನಾನು ನನ್ನ ಆದಾಯವನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಿದ್ದೇನೆ. ಅದನ್ನು ಪ್ರಧಾನಿಗಳ ಪರಿಹಾರ ನಿಧಿಗೆ ಬಳಸಿಕೊಳ್ಳಲಿ. ನಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ. ಇದು ನನ್ನ ಪ್ರತಿಭಟನೆ’ ಎಂದು ಅವರು ಹೇಳಿದ್ದಾರೆ.

ಒಬಾಮ ಭೇಟಿ ಮಾಡಿದ್ದ ರೈತ

ಸಂಜಯ್ ನಾಸಿಕ್ ಜಿಲ್ಲೆಯಲ್ಲಿ ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದಾಗ, ಅವರನ್ನು ಸಂಜಯ್ ಭೇಟಿ ಮಾಡಿದ್ದರು.

ಒಬಾಮ ಅವರು ಭೇಟಿ ನೀಡಲಿದ್ದ ಮುಂಬೈನ ಸಂತ ಕ್ಸೇವಿಯರ್ ಕಾಲೇಜಿನಲ್ಲಿ ರೈತರ ಮಳಿಗೆಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಸಂಜಯ್ ಅವರ ಮಳಿಗೆಯೂ ಒಂದು. ಕೇಂದ್ರ ಕೃಷಿ ಸಚಿವಾಲಯ ಸಂಜಯ್ ಅವರನ್ನು ಆಯ್ಕೆ ಮಾಡಿತ್ತು.

‘ರೈತರ ಸಹಾಯವಾಣಿಗೆ ಕರೆ ಮಾಡಿ ಮಳೆ, ಗೊಬ್ಬರ, ಸೂಕ್ತ ಬೆಳೆಗಳ ಬಗ್ಗೆ ಸಲಹೆ ಪಡೆದುಕೊಳ್ಳುತ್ತಿದ್ದೆ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ತೆಗೆಯುತ್ತಿದ್ದೆ. ಕೃಷಿಯಲ್ಲಿ ನಾನು ಮಾಡುತ್ತಿದ್ದ ಪ್ರಯೋಗಗಳ ಬಗ್ಗೆ ರೇಡಿಯೊದಲ್ಲಿ ಕಾರ್ಯಕ್ರಮ ನೀಡುತ್ತಿದ್ದೆ. ಹೀಗಾಗಿ ಕೃಷಿ ಸಚಿವಾಲಯ ನನ್ನನ್ನು ಆಯ್ಕೆ ಮಾಡಿತ್ತು. ಒಬಾಮ ಅವರು ನನ್ನ ಮಳಿಗೆಗೆ ಬಂದಿದ್ದರು. ದುಭಾಷಿಯ ನೆರವಿನಿಂದ ಅವರ ಜತೆ ಒಂದೆರಡು ನಿಮಿಷ ಮಾತನಾಡಿದ್ದೆ’ ಎಂದು ಸಂಜಯ್ ಹೇಳಿದ್ದಾರೆ.

1 ಕೆ.ಜಿ. ಬದನೆಗೆ ಇಪ್ಪತ್ತೇ ಪೈಸೆ

ಕೃಷಿ ಮಾರುಕಟ್ಟೆಯಲ್ಲಿ 1 ಕೆ.ಜಿ. ಬದನೆಕಾಯಿಗೆ ಕೇವಲ 20 ಪೈಸೆ ದೊರೆತ ಕಾರಣ ರೋಸಿಹೋಗಿರುವ ಮತ್ತೊಬ್ಬ ರೈತರು, ತಮ್ಮ ಜಮೀನಿನಲ್ಲಿ ಇದ್ದ ಬದನೆಯ ಎಲ್ಲಾ ಗಿಡಗಳನ್ನು ಕಿತ್ತು ಎಸೆದಿದ್ದಾರೆ.

ಮಾಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಸಕೌರಿ ಗ್ರಾಮದ ರಾಜೇಂದ್ರ ಬಾವಕೆ ತಮ್ಮ ಹೊಲದಲ್ಲಿದ್ದ ಬದನೆಗಿಡಗಳನ್ನು ಭಾನುವಾರ ನಾಶ ಮಾಡಿದ್ದಾರೆ. 

‘ಬೇರೆ ಯಾವ ಬೆಳೆಯೂ ಕೈಹಿಡಿಯಲಿಲ್ಲ. ಬದನೆ ಉತ್ತಮ ಇಳುವರಿ ನೀಡಿತು. ಆದರೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲ. ನಾಸಿಕ್‌ನಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಮಾರಾಟ ಮಡಿದೆ. ಆದರೆ ಬದನೆ ಕೃಷಿಗೆಂದು ವಿನಿಯೋಗಿಸಿದ ಹಣದಲ್ಲಿ ಅರ್ಧದಷ್ಟೂ ಆದಾಯ ಬಂದಿಲ್ಲ. ಇನ್ನು ಶ್ರಮಕ್ಕೆ ಪ್ರತಿಫಲವೇ ಇಲ್ಲ. ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದೇನೆ. ಇನ್ನಷ್ಟು ನಷ್ಟವಾಗದಿರಲಿ ಎಂದು ಎಲ್ಲಾ ಗಿಡಗಳನ್ನು ಕಿತ್ತು ಹಾಕಿದ್ದೇನೆ’ ಎಂದು ರಾಜೇಂದ್ರ ವಿವರಿಸಿದ್ದಾರೆ.

‘ಗೊಬ್ಬರ, ಕೀಟನಾಶಕಗಳನ್ನು ಸಾಲ ಮಾಡಿ ತಂದಿದ್ದೆ. ಆ ಸಾಲವನ್ನು ತೀರಿಸುವುದು ಹೇಗೆ ಎಂಬುದು ತೋಚುತ್ತಿಲ್ಲ. ಮನೆಯಲ್ಲಿ ನಾಲ್ಕು ಹಸುಗಳನ್ನು ಸಾಕಿಕೊಂಡಿದ್ದೇವೆ. ಅವಕ್ಕೆ ಮೇವು ಹೊಂದಿಸಲೂ ದುಡ್ಡಿಲ್ಲ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು