ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಪ್ಸಿ ಕಂಪನಿ ವಿರುದ್ಧ ಸಿಡಿದೆದ್ದ ರೈತರು

ಗುಜರಾತ್‌ನಲ್ಲಿ ಆಲೂಗಡ್ಡೆ ಬೆಳೆಗಾರರಿಗೆ ಕಿರುಕುಳ ಆರೋಪ: ಪರಿಹಾರ ನೀಡಲು ಒತ್ತಾಯ
Last Updated 3 ಮೇ 2019, 20:25 IST
ಅಕ್ಷರ ಗಾತ್ರ

ಅಹಮದಾಬಾದ್‌/ನವದೆಹಲಿ: ಗುಜರಾತ್‌ನಲ್ಲಿನ ಆಲೂಗಡ್ಡೆ ಬೆಳೆಗಾರರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯದಿದ್ದರೆ ‘ಪೆಪ್ಸಿಕೊ ಇಂಡಿಯಾ’ ಕಂಪನಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ತನ್ನ ’ಲೇಸ್’ ಆಲೂಗಡ್ಡೆ ಚಿಪ್ಸ್‌ಗಾಗಿ ಬೆಳೆಯುವ ವಿಶಿಷ್ಟ ತಳಿಯ ಆಲೂಗಡ್ಡೆಯನ್ನು ರೈತರು ತಮ್ಮ ಲಾಭಕ್ಕಾಗಿ ಬೆಳೆದಿದ್ದಾರೆ ಎಂದು ಆರೋಪಿಸಿ, ಪೆಪ್ಸಿಕೊ ಕಂಪನಿ ರೈತರ ವಿರುದ್ಧ ಮೊಕದ್ದಮೆ ಹೂಡಿತ್ತು.

ಮೊಕದ್ದಮೆ ಹೆಸರಿನಲ್ಲಿ ಪೆಪ್ಸಿಕೊ ಕಂಪನಿ ಆಲೂಗಡ್ಡೆ ಬೆಳೆಗಾರರಿಗೆ ‘ಕಿರುಕುಳ’ ನೀಡಿದ ಕಾರಣಕ್ಕಾಗಿ ಪರಿಹಾರ ನೀಡಬೇಕು ಎಂದು ಕಾರ್ಯಕರ್ತರು ಮತ್ತು ರೈತ ನಾಯಕರು ಒತ್ತಾಯಿಸಿದ್ದಾರೆ.

ಗುಜರಾತ್‌ನಲ್ಲಿ ಆಲೂಗಡ್ಡೆ ಬೆಳೆಗಾರರ ವಿರುದ್ಧ ಹಾಕಿದ್ದ ದೂರುಗಳನ್ನು ಪೆಪ್ಸಿಕೊ ವಾಪಸ್‌ ಪಡೆಯುವುದಾಗಿ ಘೋಷಿಸಿದ ಮರುದಿನವೇ ರೈತರು ಈ ಬೇಡಿಕೆ ಇಟ್ಟಿದ್ದಾರೆ.

ಸುಮಾರು 9 ರೈತರು ಸ್ವಾಮ್ಯತೆ ಪಡೆದಿರುವ ತನ್ನ ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದು ಮಾರುತ್ತಿರುವುದರಿಂದ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೆಪ್ಸಿ ಕಂಪನಿ ತಿಳಿಸಿತ್ತು.

ಭಾರತೀಯ ಕಿಸಾನ್‌ ಸಂಘ (ಬಿಕೆಎಸ್‌) ಸೇರಿದಂತೆ 25ಕ್ಕೂ ಹೆಚ್ಚು ರೈತ ಸಂಘಟನೆಗಳು ಮತ್ತು ಎನ್‌ಜಿಒಗಳ ಕಾರ್ಯಕರ್ತರು ಪೆಪ್ಸಿ ಕಂಪನಿಯ ಈ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ಬಿತ್ತನೆ ಬೀಜಗಳ ಮೇಲಿನ ರೈತರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ‘ಬೀಜ ಸಾರ್ವಭೌಮತ್ವ ಮಂಡಳಿ‘ ರಚಿಸಲು ನಿರ್ಧರಿಸಿವೆ.

ಈ ಕುರಿತು ಶುಕ್ರವಾರ ಸಭೆ ನಡೆಸಿದ ರೈತ ಸಂಘಟನೆಗಳು, ಈ ಕುರಿತು ಕ್ರಿಯಾಯೋಜನೆ ರೂಪಿಸಿ ಎಲ್ಲವನ್ನೂ ಈ ಮಂಡಳಿಯಡಿ ತರುವ ಕುರಿತು ನಿರ್ಣಯ ಕೈಗೊಂಡವು.

‘ಮೊಕದ್ದಮೆ ಹಿಂಪಡೆಯಲು ಪೆಪ್ಸಿ ಕಂಪನಿ ಘೋಷಿಸುವುದರಲ್ಲಿ ಹೊಸದೇನೂ ಇಲ್ಲ. ಎರಡು ಷರತ್ತುಗಳ ಅನ್ವಯ ಮೊಕದ್ದಮೆ ಹಿಂಪಡೆಯುವುದಾಗಿ ಕಂಪನಿ ಘೋಷಿಸಿತ್ತು. ರೈತರು ಪೆಪ್ಸಿ ಕಂಪನಿ ಸ್ವಾಮ್ಯಕ್ಕೆ ಒಳಪಟ್ಟ ಬೀಜಗಳನ್ನು ಬಳಸದಿರುವುದು ಅಥವಾ ರೈತರು ಕಂಪನಿಯ ಒಪ್ಪಂದದ ಭಾಗವಾಗಿಯೇ ಇದನ್ನು ಬೆಳೆಯಬೇಕು ಎಂದಿತ್ತು‘ ಎಂದು ರೈತ ಹಕ್ಕು ಹೋರಾಟಗಾರ, ‘ಜತನ್‌’ ಸರ್ಕಾರೇತರ ಸಂಸ್ಥೆಯ ಕಾರ್ಯಕರ್ತ ಕಪಿಲ್‌ ಶಾ ಹೇಳಿದರು.

‘ಬೇಷರತ್‌ ಆಗಿ ಮೊಕದ್ದಮೆಯನ್ನು ಹಿಂಪಡೆಯಬೇಕು ಮತ್ತು ರೈತರಿಗೆ ಕಂಪನಿಯು ಸೂಕ್ತ ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಯಾವ ಬಿತ್ತನೆ ಬೀಜ ಬಳಸಬೇಕೆಂಬುದು ರೈತನ ಹಕ್ಕು. ಕಾನೂನು ಕೂಡ ಇದನ್ನೇ ಹೇಳುತ್ತದೆ‘ ಎಂದು ಅವರು ಹೇಳಿದರು.

‘ಸೂಚನೆ ಸ್ಥಳೀಯ ಭಾಷೆಯಲ್ಲಿರಲಿ’: ‘ರೈತರಿಗೆ ಸಂಬಂಧಿಸಿದ ಹಕ್ಕುಗಳು ಅಥವಾ ಸೂಚನೆಗಳು ಇಂಗ್ಲಿಷ್‌ನಲ್ಲಿ ಇರುತ್ತವೆ. ಹೀಗಾಗಿ, ಬಹುತೇಕ ರೈತರಿಗೆ ಇದು ಅರ್ಥವಾಗುವುದಿಲ್ಲ. ಪರಿಣಾಮ, ಅವರ ಹಕ್ಕುಗಳ ಬಗ್ಗೆ ರೈತರಿಗೆ ತಿಳಿಯುವುದೇ ಇಲ್ಲ. ಇಂತಹ ಕಾನೂನುಗಳನ್ನು ಅಥವಾ ತಿಳಿವಳಿಕೆಯನ್ನು ಸ್ಥಳೀಯ ಭಾಷೆಯಲ್ಲಿ ಪ್ರಕಟಿಸುವ ಅಗತ್ಯವಿದೆ‘ ಎನ್ನುತ್ತಾರೆ ಗುಜರಾತ್‌ನ ಕೃಷಿ ವಿಜ್ಞಾನಗಳ ಸಂಸ್ಥೆ ಅಧ್ಯಕ್ಷ ರಾಜೇಂದ್ರ ಖಿಮಾನಿ ಹೇಳುತ್ತಾರೆ.

*
ಪೆಪ್ಸಿ ಕಂಪನಿ ರೈತರ ಬೇಷರತ್‌ ಕ್ಷಮೆಯಾಚಿಸಬೇಕು. ಯಾವ ಬೀಜ ಬಳಸಬೇಕು ಎನ್ನುವುದು ಕೂಡ ರೈತರ ಹಕ್ಕು
–ಭಾರತೀಯ ಕಿಸಾನ್‌ ಸಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT