ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ವಸೂಲಿಗೆ ಕಿರುಕುಳ: ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದ ಮೋದಿ

Last Updated 2 ಫೆಬ್ರುವರಿ 2019, 20:27 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಕಾಂಗ್ರೆಸ್‌–ಜೆಡಿಎಸ್‌ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಹೆಸರಿಗಷ್ಟೇ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಸಾಲ ಮರು ಪಾವತಿಸಲಾಗದ ರೈತರ ಮೇಲೆ ಪೊಲೀಸರನ್ನು ಬಿಟ್ಟು ದಬ್ಬಾಳಿಕೆ ನಡೆಸಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ.

ಪಶ್ಚಿಮ ಬಂಗಾಳದ 24 ಉತ್ತರ ಪರಗಣ ಜಿಲ್ಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕೃಷಿ ಸಾಲ ಮನ್ನಾ ಬಗ್ಗೆ ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ.ಕೃಷಿ ಸಾಲ ವಸೂಲು ಮಾಡಲು ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಪೊಲೀಸರನ್ನು ಬಳಸುತ್ತಿದೆ. ಇದು ಕಾಂಗ್ರೆಸ್‌ ಪಕ್ಷ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿ ಎಂದು ತರಾಟೆಗೆ ತೆಗೆದುಕೊಂಡರು.

‘ಮಧ್ಯಪ್ರದೇಶದಲ್ಲಿ ₹2.50 ಲಕ್ಷ ಸಾಲ ಪಡೆದ ರೈತರಿಗೆ ₹13 ಮನ್ನಾ ಮಾಡಲಾಗಿದೆ. ಸಾಲ ಮನ್ನಾ ಮಾಡಲು ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಹಿಂದೇಟು ಹಾಕುತ್ತಿದೆ. ಕರ್ನಾಟಕದಲ್ಲಿ ರೈತರ ಮೇಲೆ ಪೊಲೀಸ್‌ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದು ರೈತರ ಬಗ್ಗೆ ಕಾಂಗ್ರೆಸ್‌ ಅನುಸರಿಸುತ್ತಿರುವ ನೀತಿ’ ಎಂದು ಮೋದಿ ಟೀಕಿಸಿದರು.

ದೀದಿ ನಿದ್ರೆಗೆಡಿಸಿದ ಬಿಜೆಪಿ ಜನಪ್ರಿಯತೆ: ‘ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಬಿಜೆಪಿ ಜನಪ್ರಿಯತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿಯೇ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯುತ್ತಿಲ್ಲ. ಪ್ರಜಾಪ್ರಭುತ್ವ ಉಳಿಸುವುದಾಗಿ ನಟನೆ ಮಾಡುತ್ತಿರುವ ಅವರು, ಬಿಜೆಪಿ ಬೆಂಬಲಿಸುತ್ತಿರುವ ಮುಗ್ಧ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಪ್ರಧಾನಿ ಆರೋಪಿಸಿದರು.

‘ದೇಶದ ವಿಭಜನೆಯ ನಂತರ ಕೆಲವರು ಆಯಾ ದೇಶಗಳಲ್ಲಿರುವ ತಮ್ಮ ಪೂರ್ವಜರಿದ್ದ ಸ್ಥಳದಲ್ಲಿಯೇ ವಾಸಿಸಲು ನಿರ್ಧರಿಸಿದ್ದರು. ಆದರೆ, ಅಲ್ಲಿಯ ದೌರ್ಜನ್ಯಗಳಿಗೆ ಬೇಸತ್ತು ಅವರು ಮರಳಿ ಭಾರತಕ್ಕೆ ಬಂದಿದ್ದಾರೆ. ಅವರಲ್ಲಿ ಹಿಂದೂಗಳು, ಸಿಖ್‌, ಜೈನರು ಮತ್ತು ಪಾರ್ಸಿಗಳು ಇದ್ದಾರೆ. ಇವರೆಲ್ಲ ಘನತೆ– ಗೌರವದೊಂದಿಗೆ ಭಾರತದಲ್ಲಿ ವಾಸಿಸುವ ಹಕ್ಕನ್ನು ಪಡೆಯಲು ಪೌರತ್ವ ತಿದ್ದುಪಡಿ ಮಸೂದೆ ಅಗತ್ಯವಿದೆ. ಈ ಮಸೂದೆಗೆ ಟಿಎಂಸಿ ಬಂಬಲಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈಗಾಗಲೇ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ರಾಜಸಭೆಯಲ್ಲಿ ಮಸೂದೆ ಅಂಗೀಕಾರವಾಗಬೇಕಾದರೆ ಟಿಎಂಸಿ ಬೆಂಬಲ ಅಗತ್ಯವಿದೆ. ಈ ಜನರು ಗೌರವಯುತವಾಗಿ ಬದುಕುವ ನಿಟ್ಟಿನಲ್ಲಿ ಮಸೂದೆಗೆ ಟಿಎಂಸಿ ಬೆಂಬಲಿಸಬೇಕು ಎಂದು ಅವರು ಹೇಳಿದರು.

ಶುಕ್ರವಾರ ಮಂಡಿಸಿದ ಬಜೆಟ್‌ ಪ್ರಸ್ತಾಪಿಸಿದ ಅವರು, ಮಧ್ಯಮ ವರ್ಗದವರಿಗೆ ತೆರಿಗೆ ಹೊರೆ ಇಳಿಸಲಾಗಿದೆ. ಕಾರ್ಮಿಕರಿಗೆ ಪಿಂಚಣಿ ಹಾಗೂ ರೈತರಿಗೆ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

**

‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನ’

ದುರ್ಗಾಪುರ: ’ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮಧ್ಯಮ ವರ್ಗದ ಜನರ ಕನಸುಗಳನ್ನು ಹೊಸಕಿ ಹಾಕುತ್ತಿದೆ’ ಎಂದು ಮೋದಿ ಆರೋಪಿಸಿದರು.

ಹಿಂದಿನ ಕಮ್ಯುನಿಸ್ಟ್‌ ಸರ್ಕಾರದ ಹಾದಿಯಲ್ಲಿಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಯತ್ನಿಸುತ್ತಿದೆ ಎಂದರು.

**

ಮಹಿಳೆಯರು, ಮಕ್ಕಳಿಗೆ ಗಾಯ

ಠಾಕೂರ್‌ನಗರ: ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವೇದಿಕೆ ಎದುರು ಬರಲು ಜನರು ಯತ್ನಿಸಿದಾಗ ನೂಕುನುಗ್ಗಲು ಉಂಟಾಗಿದೆ. ಕಾಲ್ತುಳಿತದ ಸ್ಥಿತಿ ನಿರ್ಮಾಣವಾಗಿ ಕೆಲವರು ಗಾಯಗೊಂಡಿದ್ದಾರೆ.

ಮತುವಾ ಸಮುದಾಯದ ಸಹಯೋಗದಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು, ವೇದಿಕೆಯ ಮುಂಭಾಗಕ್ಕೆ ನುಗ್ಗಲು ಯತ್ನಿಸಿದರು. ಆ ಸಂದರ್ಭದಲ್ಲಿ ಕುರ್ಚಿಗಳನ್ನು ವೇದಿಕೆ ಮುಂಭಾಗಕ್ಕೆ ತೂರಲಾಯಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ, ಪ್ರಧಾನಿ ಮೋದಿ ಅವರು ಭಾಷಣ ಮೊಟಕುಗಳಿಸಿ ಮತ್ತೊಂದು ಸಮಾವೇಶದ ಕಡೆಗೆ ತೆರಳಿದರು.

ಮಹಿಳೆಯರು ಹಾಗೂ ಮಕ್ಕಳು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT