ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವೊಲಿಕೆಗೆ ಒಲ್ಲದ ಫಾರೂಕ್‌

Last Updated 16 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ವಿರುದ್ಧ ಯಾವುದೇ ಪ್ರತಿಭಟನೆ ನಡೆಸಬಾರದು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಮತ್ತು ಇತರ ಮುಖಂಡರ ಮನವೊಲಿಸಲು ಸರ್ಕಾರ ‘ತೆರೆಮರೆ’ ಯತ್ನ ನಡೆಸಿತ್ತು. ಆದರೆ, ಎನ್‌ಸಿ ನಾಯಕರು ಇದಕ್ಕೆ ಒಪ್ಪಿಲ್ಲ. ಹಾಗಾಗಿಯೇ ಫಾರೂಕ್‌ ವಿರುದ್ಧ ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಫಾರೂಕ್‌, ಮಾಜಿ ಮುಖ್ಯಮಂತ್ರಿಗಳಾದ ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡಿದರೆ ಅವರು ವಿಶೇಷಾಧಿಕಾರ ರದ್ದತಿ ವಿರುದ್ಧ ಜನರನ್ನು ಸಂಘಟಿಸಬಹುದು. ಆ.5ರಂದು ವಿಶೇಷಾಧಿಕಾರ ರದ್ದತಿ ಬಳಿಕ ಕಾಶ್ಮೀರದ ಪರಿಸ್ಥಿತಿ ಶಾಂತಿಯಿಂದಲೇ ಇದೆ. ಹಾಗಾಗಿ, ಈಗ ಅದಕ್ಕೆ ಧಕ್ಕೆಯಾಗುವ ಯಾವುದೇ ನಿರ್ಧಾರ ಕೈಗೊಳ್ಳಲು ಸರ್ಕಾರ ಸಿದ್ಧವಿಲ್ಲ’ ಎಂದು ಅವರು ಹೇಳಿದ್ದಾರೆ.‌

ಜಮ್ಮು–ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಆ. 5ರಂದು ವಿಂಗಡಿಸಲಾಗಿತ್ತು. ಆಗಿನಿಂದಲೂ ಫಾರೂಕ್‌ ಅವರನ್ನು ‘ಅನಧಿಕೃತ’ ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಶ್ರೀನಗರದಲ್ಲಿರುವ ಅವರ ಮನೆಯನ್ನೇ ಇನ್ನುಮುಂದೆ ‘ಸೆರೆಮನೆ’ ಎಂದು ಪರಿಗಣಿಸಲಾಗುತ್ತದೆ.

ಸಂಸದ ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಪಿಎಸ್‌ಎ ಅಡಿಯಲ್ಲಿ ಬಂಧಿಸಿರುವುದು ಇದೇ ಮೊದಲು. ನ್ಯಾಷನಲ್‌ ಕಾನ್ಫರೆನ್ಸ್‌ ಸ್ಥಾಪಕ ಮತ್ತು ಫಾರೂಕ್‌ ಅವರ ತಂದೆ ಶೇಕ್‌ ಮೊಹಮ್ಮದ್‌ ಅಬ್ದುಲ್ಲಾ ಅವರು 1978ರಲ್ಲಿ ಈ ಕಾಯ್ದೆ ಜಾರಿಗೆ ತಂದಿದ್ದರು. ನಾಟಾ ಕಳ್ಳಸಾಗಾಟ ತಡೆಗಾಗಿ ಈ ಕಾಯ್ದೆ ಜಾರಿಗೆ ತರಲಾಗಿತ್ತು. ಬಳಿಕ, ಬಂಧಿತ ಉಗ್ರರು, ಪ್ರತ್ಯೇಕತಾವಾದಿಗಳು ಮತ್ತು ಕಲ್ಲು ತೂರಾಟಗಾರರ ವಿರುದ್ಧ ಮಾತ್ರ ಈ ಕಾಯ್ದೆ ಬಳಸಲಾಗಿತ್ತು.

ಫಾರೂಕ್‌ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕೋರಿ ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೊ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ಜಮ್ಮು–ಕಾಶ್ಮೀರ ಆಡಳಿತಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು. ಸೋಮವಾರ ಅದರ ವಿಚಾರಣೆ ನಡೆದಿತ್ತು. ಆದರೆ, ಭಾನುವಾರವೇ ಫಾರೂಕ್‌ ವಿರುದ್ಧ ಪಿಎಸ್‌ಎ ಅಡಿ ಕ್ರಮ ಕೈಗೊಳ್ಳಲಾಗಿದೆ.

ಫಾರೂಕ್‌ ಅವರ ಮಗ ಮತ್ತು ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿ ಕಾಶ್ಮೀರದ ಹಲವು ಹಿರಿಯ ನಾಯಕರನ್ನು ಆ.5ರಿಂದ ಬಂಧನದಲ್ಲಿ ಇರಿಸಲಾಗಿದೆ.

ಫಾರೂಕ್‌ ಅವರು ಲೋಕಸಭೆಯಲ್ಲಿ ಯಾಕೆ ಹಾಜರಿಲ್ಲ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಆ.6ರಂದು ಪ್ರಶ್ನಿಸಿದ್ದರು. ಅದಕ್ಕೆ ಲೋಕಸಭೆಯಲ್ಲಿ ಉತ್ತರಿಸಿದ್ದ ಗೃಹ ಸಚಿವ ಅಮಿತ್‌ ಶಾ, ‘ಅವರನ್ನು ಬಂಧಿಸಿಲ್ಲ, ವಶಕ್ಕೂ ಪಡೆದಿಲ್ಲ. ಸ್ವ ಇಚ್ಛೆಯಿಂದ ಅವರು ಮನೆಯಲ್ಲಿಯೇ ಉಳಿದಿದ್ದಾರೆ’ ಎಂದಿದ್ದರು. ಬಳಿಕ, ಫಾರೂಕ್‌ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದ ವಿಚಾರ ಬಯಲಾಗಿತ್ತು.

ಪರಿಸ್ಥಿತಿ ಪರಾಮರ್ಶಿಸಿದ ಶಾ

ಜಮ್ಮು–ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಪರಾಮರ್ಶೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ನಡೆಸಿದ್ದಾರೆ. ಸುಮಾರು 230 ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಶಿಬಿರಗಳಲ್ಲಿ ನೆಲೆಯಾಗಿದ್ದಾರೆ. ಅವರು ಭಾರತದೊಳಕ್ಕೆ ನುಸುಳಲು ಸಮಯ ಕಾಯುತ್ತಿದ್ದಾರೆ ಎಂಬ ವರದಿಗಳ ಕಾರಣ ಈ ಪರಾಮರ್ಶೆ ಮಹತ್ವ ಪಡೆದಿದೆ.

ಈ ಸಭೆ ಸುಮಾರು ಎರಡು ತಾಸು ನಡೆದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಬಗ್ಗೆ ಗೃಹ ಸಚಿವರಿಗೆ ವಿವರವಾದ ಮಾಹಿತಿ ನೀಡಲಾಯಿತು.

ಪಾಕ್‌ಗೆ ಮುಸ್ಲಿಂ ರಾಷ್ಟ್ರಗಳ ಕಿವಿಮಾತು

ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ವಿಷಯ ಕುರಿತಂತೆ ಭಾರತದ ಜೊತೆಗೆ ತೆರೆಮರೆಯಲ್ಲಿ ರಾಜತಾಂತ್ರಿಕ ಚರ್ಚೆ ನಡೆಸಬೇಕು ಎಂದು ಕೆಲ ಪ್ರಭಾವಿ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನಕ್ಕೆ ಕಿವಿಮಾತು ಹೇಳಿವೆ.

ಅಲ್ಲದೆ, ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಉದ್ವಿಗ್ನವಾಗುವುದನ್ನು ತಡೆಯಲು ತಮ್ಮ ದನಿಯನ್ನು ತಗ್ಗಿಸಬೇಕು ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೂ ಸಲಹೆ ಮಾಡಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಅದೆಲ್‌ ಅಲ್‌ ಜುಬೈರ್‌ ಮತ್ತು ಯುಎಇಯ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್‌ ಅಲ್ ನಹ್ಯಾನ್‌ ಅವರು ಒಟ್ಟಾಗಿ ಸೆ.3ರಂದು ಇಸ್ಲಾಮಾಬಾದ್‌ಗೆ ಪ್ರಯಾಣಿಸುವಾಗ ಅವರಿಗೆ ತಮ್ಮ ನಾಯಕರು ಹಾಗೂ ಕೆಲ ಪ್ರಭಾವಿ ರಾಷ್ಟ್ರಗಳ ಮುಖಂಡರಿಂದ ಈ ಕುರಿತು ಸಂದೇಶ ಬಂದಿತ್ತು ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT