ಚುನಾವಣೆ ಗೆಲ್ಲುವುದೇ ವಾಯುದಾಳಿ ಗುರಿ: ಫಾರೂಕ್‌

ಭಾನುವಾರ, ಮಾರ್ಚ್ 24, 2019
27 °C

ಚುನಾವಣೆ ಗೆಲ್ಲುವುದೇ ವಾಯುದಾಳಿ ಗುರಿ: ಫಾರೂಕ್‌

Published:
Updated:
Prajavani

ಶ್ರೀನಗರ : ಲೋಕಸಭೆ ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಪಾಕಿಸ್ತಾನದ ಬಾಲಾಕೋಟ್‌ನ ಮೇಲೆ ವಾಯು ದಾಳಿ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಆರೋಪಿಸಿದ್ದಾರೆ. 

‘ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಈ ನಿರ್ದಿಷ್ಟ ದಾಳಿ (ವಾಯು ದಾಳಿ) ನಡೆಸಲಾಗಿದೆ... ಇದು ಸಂಪೂರ್ಣವಾಗಿ ಚುನಾವಣೆಗಾಗಿಯೇ ಮಾಡಿದ್ದಾಗಿದೆ. ಕೋಟ್ಯಂತರ ಬೆಲೆ ಬಾಳುವ ಒಂದು ಯುದ್ಧ ವಿಮಾನವನ್ನು ನಾವು ಕಳೆದುಕೊಂಡೆವು. ಅದೃಷ್ಟವಶಾತ್‌ ಭಾರತೀಯ ವಾಯುಪಡೆಯ ಪೈಲಟ್‌ (ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌) ಬದುಕು
ಳಿದರು ಮತ್ತು ಪಾಕಿಸ್ತಾನದಿಂದ ಗೌರವಯುತವಾಗಿಯೇ ಹಿಂದಿರುಗಿದರು’ ಎಂದು ಅಬ್ದುಲ್ಲಾ ಹೇಳಿದ್ದಾರೆ. 

ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಅತ್ಯಂತ ದೊಡ್ಡ ತರಬೇತಿ ಶಿಬಿರದ ಮೇಲೆ ಫೆ. 26ರಂದು ಭಾರತದ ವಾಯುಪಡೆ ದಾಳಿ ನಡೆಸಿತ್ತು. ಅದಕ್ಕೂ ಮೊದಲು, ಫೆ. 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಜೈಷ್‌ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದ. 

‘ಭೀತಿಯ ವಾತಾವರಣ ಸೃಷ್ಟಿಸಲು ಅವರು (ಬಿಜೆಪಿಯವರು) ಬಯಸುತ್ತಿದ್ದಾರೆ. ಆದರೆ, ಇಲ್ಲಿ ನಿಜವಾಗಿಯೂ ಭೀತಿ ಇಲ್ಲ. ಇಡೀ ಜಗತ್ತು ಗಮನಿಸುತ್ತಿದೆ. ಹಿರಿಯ ಅಧಿಕಾರಿಗಳನ್ನು ಚುನಾವಣೆ ಗೆಲ್ಲಲು ಬಯಸುತ್ತಿದ್ದಾರೆ. ಹಲವು ಅಧಿಕಾರಿಗಳನ್ನು ಬದಿಗೊತ್ತಿ ಒಬ್ಬರನ್ನು ಮೇಲೆ ತಂದಿದ್ದಾರೆ. ಹಾಗೆ ಮೇಲೆ ಬಂದ ಅಧಿಕಾರಿ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಅದಿಲ್ಲದಿದ್ದರೆ ಇಲ್ಲಿ ಯಾವ ಅಪಾಯವೂ ಇಲ್ಲ’ ಎಂದು ಅಬ್ದುಲ್ಲಾ ಹೇಳಿದ್ದಾರೆ. ಆದರೆ, ಈ ಅಧಿಕಾರಿ ಯಾರು ಎಂದು ಅವರು ಹೆಸರಿಸಿಲ್ಲ. 

‘ಅವರು ಇಲ್ಲದೆ ಈ ದೇಶದಲ್ಲಿ ಏನೂ ನಡೆಯದು ಎಂಬ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ನೀವು ದೇವರು ಅಲ್ಲ, ಮತ್ತು ಯಾವತ್ತೂ ದೇವರು ಆಗುವುದೂ ಇಲ್ಲ ಎಂಬುದನ್ನು ಅವರಿಗೆ ನಾನು ಹೇಳಲು ಇಚ್ಛಿಸುತ್ತೇನೆ’ ಎಂದರು. 

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸದಿರುವ ನಿರ್ಧಾರದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೇಂದ್ರ ಸರ್ಕಾರ ಏನೋ ಕಿಡಿಗೇಡಿತನ ನಡೆಸಿದೆ. ಹಾಗಾಗಿ ವಿಧಾನಸಭೆ ಚುನಾವಣೆ ಮುಂದೂಡಿಕೆ ಆಗಿದೆ. ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಾವಿರಾರು ಜನರು ಮತ ಹಾಕಿದ್ದಾರೆ. ಆಗ ಇಲ್ಲದ ಅಪಾಯಗಳು ಈಗ ಏನಿವೆ? ಆಗ ಇದ್ದುದಕ್ಕಿಂತ ಹೆಚ್ಚು ಭದ್ರತಾ ಸಿಬ್ಬಂದಿ ಈಗ ಇದ್ದಾರೆ. ರಾಜ್ಯದ ಪ್ರತಿ ಮೂಲೆಯಲ್ಲಿಯೂ ಭದ್ರತಾ ಸಿಬ್ಬಂದಿಯನ್ನು ಕಾಣಬಹುದು’ ಎಂದು ಅಬ್ದುಲ್ಲಾ ಹೇಳಿದ್ದಾರೆ. 

ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂಬುದು ಎಲ್ಲ ಪಕ್ಷಗಳ ಅಭಿಪ್ರಾಯ. ಆದರೆ, ಚುನಾವಣೆ ನಡೆಸದಿರುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 1

  Frustrated
 • 15

  Angry

Comments:

0 comments

Write the first review for this !