ಶನಿವಾರ, ನವೆಂಬರ್ 23, 2019
18 °C

ಭಾರತ–ಚೀನಾ ಸೈನಿಕರ ಹೊಯ್‌ಕೈ

Published:
Updated:

ನವದೆಹಲಿ : ಪೂರ್ವ ಲಡಾಖ್‌ನ ಪ್ಯಾನ್‌ಗಾಂಗ್‌ ಸರೋವರದ ಬಳಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಹೊಯ್‌ಕೈ ನಡೆದಿದೆ. ಬಳಿಕ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದೆ ಎಂದು ಸೇನೆಯ ಮೂಲಗಳು ಹೇಳಿವೆ.

ಈ ಪ್ರದೇಶದಲ್ಲಿ ಭಾರತದ ಯೋಧರು ಗಸ್ತು ನಡೆಸುತ್ತಿದ್ದಾಗ ಇದು ನಡೆದಿದೆ. ಇಲ್ಲಿ ಭಾರತದ ಯೋಧರು ಗಸ್ತು ನಡೆಸಬಾರದು ಎಂದು ಚೀನಾದ ಸೈನಿಕರು ಆಕ್ಷೇಪ ಎತ್ತಿದ್ದರು. ಆದರೆ ಭಾರತದ ಸೈನಿಕರು ಇದನ್ನು ಮಾನ್ಯ ಮಾಡಲಿಲ್ಲ. ಹಾಗಾಗಿ, ಹೊಯ್‌ಕೈ ನಡೆಯಿತು. ಇನ್ನಷ್ಟು ಯೋಧರನ್ನು ಸ್ಥಳಕ್ಕೆ ಕರೆಸಿಕೊಳ್ಳಲು ಎರಡೂ ಕಡೆಯವರು ಸೂಚನೆ ಕೊಟ್ಟರು. ಆದರೆ, ನಿಯೋಗ ಮಟ್ಟದ ಮಾತುಕತೆ ಬಳಿಕ ಸಮಸ್ಯೆ ಪರಿಹಾರ ಆಗಿದೆ.  

ಪೂರ್ವ ಲಡಾಖ್‌ನ ಮೂರನೇ ಎರಡರಷ್ಟು ಭೂಪ್ರದೇಶ ಚೀನಾದ ನಿಯಂತ್ರಣದಲ್ಲಿದೆ. 

ಎರಡು ದೇಶಗಳ ನಡುವಣ ನಿಯಂತ್ರಣ ರೇಖೆಗೆ ಸಂಬಂಧಿಸಿ ಎರಡೂ ಕಡೆಯ ಸೈನಿಕರಲ್ಲಿ ಇದ್ದ ಭಿನ್ನ ಗ್ರಹಿಕೆಯಿಂದಾಗಿ ಈ ಸಂಘರ್ಷ ಉಂಟಾಯಿತು. ನಿಯೋಗ ಮಟ್ಟದಲ್ಲಿ ಮಂಗಳವಾರ ನಡೆದ ಮಾತುಕತೆಯ ಬಳಿಕ ಎರಡೂ ಕಡೆಯ ಸೈನಿಕರು ಹಿಂದೆ ಸರಿದಿದ್ದಾರೆ. 

ಇಂತಹ ಘಟನೆಗಳು ನಡೆದಾಗ ಅವುಗಳನ್ನು ಪರಿಹರಿಸಲು ವ್ಯವಸ್ಥೆ ಇದೆ. ಅದರ ಪ್ರಕಾರವೇ ಈಗಿನ ಸಮಸ್ಯೆಯೂ ಪರಿಹಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

2017ರಲ್ಲಿ ದೋಕಲಾದಲ್ಲಿ ಭಾರತ–ಚೀನಾ ಸೈನಿಕರ ಮುಖಾಮುಖಿ ನಡೆದಿತ್ತು. ಈ ಪ್ರದೇಶದಲ್ಲಿ ಚೀನಾದ ಸೇನೆಯು ಆರಂಭಿಸಿದ ರಸ್ತೆ ಕಾಮಗಾರಿಗೆ ಭಾರತದ ಯೋಧರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಮುಖಾಮುಖಿ 73 ದಿನ ಇತ್ತು. ದೋಕಲಾ ಪ್ರದೇಶದ ಬಗ್ಗೆ ಭೂತಾನ್‌ ಮತ್ತು ಚೀನಾ ನಡುವೆ ವಿವಾದ ಇದೆ.

ಪ್ರತಿಕ್ರಿಯಿಸಿ (+)