ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‌ಬಾಗ್‌ ಪ್ರತಿಭಟನೆ ಸಂಧಾನಕಾರರಿಂದ ವರದಿ

ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ಸಾಧನಾ
Last Updated 24 ಫೆಬ್ರುವರಿ 2020, 19:36 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ವಿರೋಧಿಸಿಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ನಿಯುಕ್ತಿಗೊಂಡಿದ್ದ ಸಂಧಾನಕಾರರು ಕೋರ್ಟ್‌ಗೆಮುಚ್ಚಿದ ಲಕೋಟೆಯಲ್ಲಿ ಸೋಮವಾರ ವರದಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಕೆ.ಎಂ.ಜೋಸೆಫ್‌ ಅವರಿದ್ದ ಪೀಠಕ್ಕೆಸಂಧಾನಕಾರರಲ್ಲಿ ಒಬ್ಬರಾದ ವಕೀಲೆ ಸಾಧನಾ ರಾಮಚಂದ್ರನ್‌ ಅವರು ವರದಿಯನ್ನು ಒಪ್ಪಿಸಿದರು. ಹಿರಿಯ ವಕೀಲ ಸಂಜಯ್‌ ಹೆಗ್ಡೆ ಮತ್ತೊಬ್ಬ ಸಂಧಾನಕಾರ.

ವರದಿಯನ್ನು ಪರಾಮರ್ಶಿಸಿದ ಬಳಿಕ ಫೆ. 26ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿತು. ಅಲ್ಲದೆ, ಸಂಧಾನಕಾರರು ಕೊಟ್ಟ ವರದಿಯನ್ನು ಕಕ್ಷಿದಾರರ ಜತೆ ಈ ಹಂತದಲ್ಲಿ ಹಂಚಿಕೊಳ್ಳುವುದಿಲ್ಲ
ಎಂದೂ ಸ್ಪಷ್ಟಪಡಿಸಿತು.

ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್‌ ಹಬೀಬುಲ್ಲಾ, ‘ಪ್ರತಿಭಟನೆ ತುಂಬಾ ಶಾಂತರೀತಿಯಲ್ಲಿ ನಡೆದಿದೆ. ದಾರಿಹೋಕರಿಗೆ ಏನಾದರೂ ತೊಂದರೆ ಆಗಿದ್ದರೆ ಅದು ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳಿಂದಲೇ ಹೊರತು ಪ್ರತಿಭಟನೆಯಿಂದ ಅಲ್ಲ. ಪ್ರತಿಭಟನಾ ಸ್ಥಳದಿಂದ ತುಂಬಾ ದೂರದಲ್ಲಿ ಅನಗತ್ಯವಾಗಿ ಈ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ’ ಎಂದು ಕೋರ್ಟ್‌ನ ಗಮನಕ್ಕೆ ತಂದರು.

ಸಾಮಾಜಿಕ ಕಾರ್ಯಕರ್ತರಾದ ಸಯ್ಯದ್‌ ಬಹದ್ದೂರ್‌, ಅಬ್ಬಾಸ್‌ ನಕ್ವಿ ಮತ್ತು ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಸಲ್ಲಿಸಿದ ಪ್ರಮಾಣಪತ್ರದಲ್ಲೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.‘ಪ್ರಜೆಗಳಿಗೆ ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿ ಪ್ರತಿಭಟಿಸುವ ಮೂಲಭೂತ ಹಕ್ಕು ಇದೆಯಾದರೂ ಶಾಹೀನ್‌ಬಾಗ್‌ ಪ್ರದೇಶದಲ್ಲಿಪ್ರತಿಭಟನೆಗಾಗಿ ಸಾರ್ವಜನಿಕ ರಸ್ತೆಯನ್ನೇ ಬಂದ್‌ ಮಾಡಿದ್ದು ಕಳವಳ ಉಂಟು ಮಾಡಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT