ಅಲ್ಪ ಮೊತ್ತಕ್ಕೆ ಮಲ್ಯ ವಿಮಾನ ಬಿಕರಿ

7
₹152 ಕೋಟಿ ವಿಮಾನ ₹34.8 ಕೋಟಿಗೆ ಮಾರಾಟ

ಅಲ್ಪ ಮೊತ್ತಕ್ಕೆ ಮಲ್ಯ ವಿಮಾನ ಬಿಕರಿ

Published:
Updated:

ಮುಂಬೈ: ಉದ್ಯಮಿ ವಿಜಯ್‌ ಮಲ್ಯ ಖಾಸಗಿ ವಿಲಾಸಿ ವಿಮಾನ ಸತತ ಎರಡು ವರ್ಷಗಳ ಪ್ರಯತ್ನದ ನಂತರ ಅತ್ಯಂತ ಅಲ್ಪ ಮೊತ್ತಕ್ಕೆ ಬಿಕರಿಯಾಗಿದೆ.  

ಕಳೆದ ಶುಕ್ರವಾರ ನಡೆದ ಇ–ಹರಾಜಿನಲ್ಲಿ ಭಾಗವಹಿಸಿದ್ದ ಅಮೆರಿಕದ ಫ್ಲಾರಿಡಾದ ಖಾಸಗಿ ವಿಮಾನಯಾನ ಸಂಸ್ಥೆ ಎಲ್‌ಎಲ್‌ಸಿ, ನೂರಾರು ಕೋಟಿ ಬೆಲೆ ಬಾಳುವ ವಿಮಾನವನ್ನು ಕೇವಲ ₹34.8 ಕೋಟಿಗೆ ಖರೀದಿಸಿದೆ.

ಮಲ್ಯ ಖಾಸಗಿ ಪ್ರಯಾಣಕ್ಕೆ ‘ಎ319’ ವಿಲಾಸಿ ವಿಮಾನವನ್ನು ಹೆಚ್ಚಾಗಿ ಬಳಸುತ್ತಿದ್ದರು. 2016ರ ಮಾರ್ಚ್‌ನಿಂದ ನಾಲ್ಕು ಬಾರಿ ಈ ವಿಮಾನ ಮಾರಾಟ ಮಾಡಲು ಯತ್ನಿಸಿದ್ದ ಇಲಾಖೆಯ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿರಲಿಲ್ಲ.

ಮಲ್ಯ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ 2012ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಮೊದಲು ₹800 ಕೋಟಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಬಾಕಿ ವಸೂಲು ಮಾಡಲು ಸೇವಾ ತೆರಿಗೆ ಇಲಾಖೆ 2013ರಲ್ಲಿ ವಿಮಾನವನ್ನು ವಶಕ್ಕೆ ಪಡೆದಿತ್ತು.

ವಿಮಾನ ಹರಾಜು ಹಾಕಲು ಕರ್ನಾಟಕ ಹೈಕೋರ್ಟ್‌ ಮತ್ತು ಬಾಂಬೆ ಹೈಕೋರ್ಟ್‌ ಸಮ್ಮತಿ ನೀಡಿದ್ದವು.

2016ರ ಮಾರ್ಚ್‌ನಲ್ಲಿ ನಡೆದಿದ್ದ ಮೊದಲ ಹರಾಜಿನಲ್ಲಿ ವಿಮಾನದ ಬೆಲೆಯನ್ನು ₹152 ಕೋಟಿಗೆ ನಿಗದಿ ಮಾಡಲಾಗಿತ್ತು.

ಆದರೆ, ಅಷ್ಟು ಹಣ ತೆತ್ತು ವಿಮಾನ ಖರೀದಿಸಲು ಯಾರೂ ಮುಂದೆ ಬಂದಿರಲಿಲ್ಲ. ಅತ್ಯಲ್ಪ ಮೊತ್ತಕ್ಕೆ ಬಿಡ್‌ ಸಲ್ಲಿಸಲಾಗಿತ್ತು. ನಂತರದ ಹರಾಜಿನಲ್ಲಿ ಮಾರಾಟ ಬೆಲೆಯನ್ನು ಕಡಿತಗೊಳಿಸುತ್ತ ಬರಲಾಯಿತು.

ಇಲಾಖೆ ಈ ವಿಮಾನವನ್ನು ಮುಟ್ಟುಗೋಲು ಹಾಕಿಕೊಂಡ ನಂತರ 2013ರಿಂದಲೂ ಮುಂಬೈ ವಿಮಾನ ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿದೆ.

ಇದರಿಂದಾಗಿ ಸಂಚಾರ ದಟ್ಟಣೆಯಿಂದ ಮುಂಬೈ ನಿಲ್ದಾಣದಲ್ಲಿ ಬೇರೆ ವಿಮಾನ ನಿಲುಗಡೆಗೆ ತೊಂದರೆಯಾಗುತ್ತಿದೆ. ಆದಷ್ಟೂ ಬೇಗ ಜಾಗ ತೆರವುಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಹಾಗಾಗಿ, ಇಲಾಖೆ ಅಧಿಕಾರಿಗಳು ಹೇಗಾದರೂ ಸರಿ ವಿಮಾನವನ್ನು ಮಾರಾಟ ಮಾಡುವ ಒತ್ತಡಕ್ಕೆ ಸಿಲುಕಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !