ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಮ್ಸ್‌ ವೈದ್ಯರ ಮೇಲೆ ಹಲ್ಲೆ ಆರೋಪ: ಕನ್ಹಯ್ಯಕುಮಾರ್‌ ಮೇಲೆ ಎಫ್‌ಐಆರ್‌ ದಾಖಲು

Last Updated 15 ಅಕ್ಟೋಬರ್ 2018, 14:18 IST
ಅಕ್ಷರ ಗಾತ್ರ

ಪಟ್ನಾ: ಅಖಿಲ ಭಾರತ ವೈದ್ಯಕೀಯ ವಿದ್ಯಾಸಂಸ್ಥೆ (ಏಮ್ಸ್‌) ಆವರಣದಲ್ಲಿ ಭದ್ರತಾ ಸಿಬ್ಬಂದಿ ಜತೆ ಜಗಳ ತೆಗೆದು, ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ವಿರುದ್ಧ ಆಸ್ಪತ್ರೆ ಆಡಳಿತ ಮಂಡಳಿ ಫುಲ್ವರಿಶರೀಫ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದೆ.

ಏಮ್ಸ್‌ ಆಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ (ಎಐಎಸ್‌ಎಫ್‌) ಕಾರ್ಯಕರ್ತ ಸುಶಿಲ್‌ ಕುಮಾರ್‌ ಅವರನ್ನು ನೋಡಲು ಕನ್ಹಯ್ಯ ಕುಮಾರ್‌ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಆಗ ತಮ್ಮ 15ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ವೈದ್ಯರನ್ನು ತಳ್ಳಿಕೊಂಡು ಅವರ ಮೇಲೆ ಹಲ್ಲೆ ನಡೆಸಿ ಟ್ರಾಮಾ ಸೆಂಟರ್‌ಗೆ ನುಗ್ಗಿದ್ದರು ಎಂದು ವೈದ್ಯರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ವೈದ್ಯರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ, ವೈದ್ಯರು ಧರಣಿ ಕೈಬಿಟ್ಟಿದ್ದಾರೆ.

ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಪ್ರವೇಶ ಅವಕಾಶವಿದೆ ಎಂದು ಭದ್ರತಾ ಸಿಬ್ಬಂದಿ ಕನ್ಹಯ್ಯ ಅವರಿಗೆ ತಿಳಿಸಿದಾಗ, ಎಡಪಂಥೀಯ ಸಂಘಟನೆಯ ವಿದ್ಯಾರ್ಥಿ ಮುಖಂಡರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಆಗ ಕನ್ಹಯ್ಯ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದರು ಎಂದು ಕೆಲವು ವೈದ್ಯರು ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಏಮ್ಸ್‌ನಿಂದ ವರದಿ ಕೇಳಿರುವ ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ, ‘ಇದು ಜೆಎನ್‌ಯು ಅಲ್ಲ, ಅಲ್ಲಿ ನಿಮ್ಮ ದೌರ್ಜನ್ಯ ನಡೆಯಬಹುದು. ಆದರೆ, ಇಲ್ಲಿ ಕಾನೂನು ಉಲ್ಲಂಘಿಸಿದರೆ, ಕಾನೂನು ಅಡಿಯೇ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಕನ್ಹಯ್ಯ ಕುಮಾರ್‌ಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT