ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಪತ್ರ| ‘ಧ್ವನಿ ದಮನದ ವಿರುದ್ಧ ಇನ್ನೂ ಜೋರು ದನಿ’

ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ: ಸಾಂಸ್ಕೃತಿಕ ಲೋಕದ 180 ಮಂದಿಯ ಖಂಡನೆ
Last Updated 8 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಮುಂಬೈ: ಗುಂಪು ಹಲ್ಲೆ, ಜನರ ಧ್ವನಿಯನ್ನು ಹತ್ತಿಕ್ಕುವುದು ಮತ್ತು ಪೌರರಿಗೆ ಕಿರುಕುಳ ನೀಡುವುದಕ್ಕಾಗಿ ನ್ಯಾಯಾಂಗದ ದುರ್ಬಳಕೆ ವಿರುದ್ಧ ಇನ್ನೂ ಜೋರಾಗಿ ಧ್ವನಿ ಎತ್ತುವುದಾಗಿ ಸಾಂಸ್ಕೃತಿಕ ರಂಗದ 180ಕ್ಕೂ ಹೆಚ್ಚು ಗಣ್ಯರು ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದ 49 ಗಣ್ಯರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ನಟ ನಾಸಿರುದ್ದೀನ್‌ ಶಾ, ಛಾಯಾಗ್ರಾಹಕ ಆನಂದ್‌ ಪ್ರಧಾನ್‌, ಇತಿಹಾಸಕಾರ್ತಿ ರೊಮಿಲಾ ಥಾಪರ್‌, ಸಾಮಾಜಿಕ ಹೋರಾಟಗಾರ ಹರ್ಷ ಮಂದರ್‌ ಮುಂತಾದವರು ಪತ್ರ ಬರೆದಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಲ್ಲೆ ಬಗ್ಗೆ ಕಳವಳ ವ್ಯಕ್ತಪಡಿಸಿ ಸಿನಿಮಾ ನಿರ್ದೇಶಕರಾದ ಅಪರ್ಣಾ ಸೇನ್‌, ಅಡೂರ್‌ ಗೋಪಾಲಕೃಷ್ಣನ್‌, ಇತಿಹಾಸಕಾರ ರಾಮಚಂದ್ರ ಗುಹಾ ಸೇರಿ 49 ಜನರು ಜುಲೈನಲ್ಲಿ ಪ್ರಧಾನಿಗೆ ಬಹಿರಂಗಪತ್ರ ಬರೆದಿದ್ದರು. ಅವರ ವಿರುದ್ಧ ಬಿಹಾರದ ಮುಜಫ್ಫರ್‌ಪುರದಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

‘ನಾಗರಿಕ ಸಮಾಜದ ಗೌರವಾನ್ವಿತ ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಸಾಂಸ್ಕೃತಿಕ ಸಮುದಾಯದ ನಮ್ಮ49 ಸಹೋದ್ಯೋಗಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಗುಂಪು ಹಲ್ಲೆಗೆ ಕಳವಳ ವ್ಯಕ್ತಪಡಿಸಿ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಇದನ್ನು ದೇಶದ್ರೋಹ ಎಂದು ಕರೆಯಬಹುದೇ? ಅಥವಾ ಇದು ಜನರ ಧ್ವನಿಯನ್ನು ಹತ್ತಿಕ್ಕುವುದಕ್ಕಾಗಿ ಅವರಿಗೆ ಕಿರುಕುಳ ನೀಡಲು ನ್ಯಾಯಾಂಗದ ದುರ್ಬಳಕೆಯೇ’ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಪ್ರಕರಣವನ್ನು ರದ್ದತಿಗೆ ಕಮಲ್‌ ಒತ್ತಾಯ

(ಚೆನ್ನೈ ವರದಿ): ಪ್ರಧಾನಿಗೆ ಪತ್ರ ಬರೆದ ಗಣ್ಯರ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣವನ್ನು ರದ್ದು ಮಾಡಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ತಮಿಳು ನಟ ಹಾಗೂ ಮಕ್ಕಳ್‌ ನೀದಿ ಮಯ್ಯಂ ಅಧ್ಯಕ್ಷ ಕಮಲ್‌ ಹಾಸನ್‌ ಒತ್ತಾಯಿಸಿದ್ದಾರೆ.

ದೇಶದ್ರೋಹ ಪ್ರಕರಣ ಎದುರಿಸುತ್ತಿರುವ 49 ಗಣ್ಯರ ಜತೆಗೆ ತಾವು ಇರುವುದಾಗಿ ಕಮಲ್‌ ಟ್ವೀಟ್‌ ಮಾಡಿದ್ದಾರೆ.

‘ಭಾರತವು ಸೌಹಾರ್ದಯುತವಾಗಿ ಇರಬೇಕು ಎಂದು ಪ್ರಧಾನಿ ಬಯಸುತ್ತಾರೆ. ಸಂಸತ್ತಿನಲ್ಲಿ ಅವರು ನೀಡಿರುವ ಹೇಳಿಕೆ ಅದನ್ನು ದೃಢಪಡಿಸುತ್ತದೆ. ಸರ್ಕಾರ ಮತ್ತು ಕಾನೂನು ಅದನ್ನು ಪಾಲಿಸಬೇಕಲ್ಲವೇ? ಪ್ರಧಾನಿಯ ಆಕಾಂಕ್ಷೆಗೆ ತದ್ವಿರುದ್ಧವಾಗಿ ನಮ್ಮ ಸಹವರ್ತಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ’ ಎಂದು ಟ್ವೀಟ್‌ನಲ್ಲಿ ಕಮಲ್‌ ಹಾಸನ್‌ ಅವರು ಹೇಳಿದ್ದಾರೆ.

‘ಮೌನ ಸಾಧ್ಯವಿಲ್ಲ’

‘ಗುಂಪು ಹಲ್ಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಎಲ್ಲ ಗಣ್ಯರವಿರುದ್ಧವೂ ಇದೀಗ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ನಡೆಯುವ ಹಿಂಸಾಚಾರ ಮತ್ತು ಲಂಚಗುಳಿತನದ ಬಗ್ಗೆ ದೂರು ಸಲ್ಲಿಸುವುದಾರೂ ಹೇಗೆ? ನಾವು ಇನ್ನೂ ಮೌನವಾಗಿರಲು ಸಾಧ್ಯವಿಲ್ಲ. ಅಸಂಬದ್ಧವಾಗಿ ಎಫ್‌ಐಆರ್‌ ಹಾಕಿರುವುದನ್ನು ಪ್ರಶ್ನಿಸಬೇಕಿದೆ. ಒಟ್ಟಾಗಿ ಧ್ವನಿ ಎತ್ತಬೇಕು’ ಎಂದು ರಂಗಕರ್ಮಿ ಎಸ್.ರಘುನಂದನ್ ಹೇಳಿದ್ದಾರೆ.

***

ಮೋದಿ ಸರ್ಕಾರದ ಹೆಸರು ಕೆಡಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಬಿಂಬಿಸಲು ಇಂತಹ ಅಪಪ್ರಚಾರ ಮಾಡಲಾಗುತ್ತಿದೆ

– ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT