ಗುರುವಾರ , ಸೆಪ್ಟೆಂಬರ್ 23, 2021
22 °C
ಉಗ್ರರ ದಾಳಿಯ ಅಪಾಯದ ಸಲುವಾಗಿ ಭಾರಿ ಭದ್ರತೆ

ಸರ್ಪಗಾವಲಿನಲ್ಲಿ ಅಮರನಾಥ ಯಾತ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಅಮರನಾಥ ಯಾತ್ರೆ ಆರಂಭವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಸಲಹೆಗಾರರಾದ ಕೆ.ವಿಜಯ್ ಕುಮಾರ್ ಬುಧವಾರ ಬೆಳಿಗ್ಗೆ ಮೊದಲ ತಂಡದ ಭಕ್ತಾದಿಗಳನ್ನು ಹೊತ್ತಿರುವ ವಾಹನಗಳಿಗೆ ಹಸಿರು ನಿಶಾನೆ ತೋರಿದರು. 

2017ರ ಯಾತ್ರೆ ವೇಳೆ ಭಕ್ತಾದಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದರು. ಈ ಬಾರಿಯೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವ ಅಪಾಯವಿದೆ. ಹಾಗಾಗಿ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.  

 40,000 ಭದ್ರತಾ ಸಿಬ್ಬಂದಿ ನಿಯೋಜನೆಕಣ್ಗಾವಲಿಗೆ ಸಿ.ಸಿ.ಟಿ.ವಿ–ಡ್ರೋನ್ ಕ್ಯಾಮೆರಾಗಳು ಗುಂಡು ನಿರೋಧಕ ಬಂಕರ್‌ಗಳನ್ನು ಯಾತ್ರೆ ಹಾದಿಯುದ್ದಕ್ಕೂ ನಿರ್ಮಿಸಲಾಗಿದೆ

 ಸಿಆರ್‌ಪಿಎಫ್
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿಗೆ ಯಾತ್ರೆಯ ಹಾದಿಯ ಕಣ್ಗಾವಲು ಹೊಣೆಯನ್ನು ನೀಡಲಾಗಿದೆ. ಜಮ್ಮುವಿನಿಂದ ಪಹಲ್‌ಗಾಮ್‌ ಮತ್ತು ಬಾಲ್‌ಟಾಲ್‌ವರೆಗಿನ ಹೆದ್ದಾರಿ ಹಾಗೂ ಅಲ್ಲಿಂದ ಅಮರನಾಥ ಗುಹೆಯ ಚಾರಣ ಹಾದಿಯುದ್ದಕ್ಕೂ ಸಿಆರ್‌ಪಿಎಫ್ ಸಿಬ್ಬಂದಿ ಕಾವಲು ಇರಲಿದ್ದಾರೆ. ಚಾರಣದ ಹಾದಿಯಲ್ಲಿ ನೆಲಬಾಂಬ್‌ಗಳನ್ನು ಅಡಗಿಸಲಾಗಿದೆಯೇ ಎಂಬುದನ್ನು ಸಿಆರ್‌ಪಿಎಫ್ ಸಿಬ್ಬಂದಿ ಪ್ರತಿ ದಿನವೂ ಪರಿಶೀಲಿಸಲಿದ್ದಾರೆ

 ಬೈಕ್ ಆಂಬುಲೆನ್ಸ್
ಹೆದ್ದಾರಿಗಳಲ್ಲಿ ಸಿಆರ್‌ಪಿಎಫ್‌ನ ತುರ್ತು ಪ್ರತಿಸ್ಪಂದನಾ ಬೈಕ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಆ ಬೈಕ್‌ಗಳಲ್ಲಿ ಸಶಸ್ತ್ರ ಸಿಬ್ಬಂದಿ ಮತ್ತು ವೈದ್ಯಕೀಯ ಉಪಕರಣಗಳು ಇರಲಿವೆ. ಉಗ್ರರ ದಾಳಿ ಸಂದರ್ಭದಲ್ಲಿ ಭದ್ರತೆ ಒದಗಿಸುವ ಮತ್ತು ವೈದ್ಯಕೀಯ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡುವ ಕೆಲಸ ಈ ತುಕಡಿಯದ್ದು. ಬೈಕ್‌ ಚಲಾಯಿಸುವ ಸಿಬ್ಬಂದಿಯ ಹೆಲ್ಮೆಟ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ದಾಖಲಾಗುವ ದೃಶ್ಯಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸಲಾಗುತ್ತದೆ

 ಎನ್‌ಡಿಆರ್‌ಎಫ್
ಯಾತ್ರೆ ಸಂದರ್ಭದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾ ಪಡೆ (ಎನ್‌ಡಿಆರ್‌ಎಫ್‌) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

 ಆರ್‌ಎಫ್‌ಟಿ ಟ್ಯಾಗ್
ಯಾತ್ರಾರ್ಥಿಗಳನ್ನು ಹೊತ್ತ ಪ್ರತಿ ವಾಹನಕ್ಕೂ ಭದ್ರತಾ ಸಿಬ್ಬಂದಿಯು ರೇಡಿಯೊ ತರಂಗಾಂತರ ಗುರುತು ಟ್ಯಾಗ್ ಅಂಟಿಸಲಿದ್ದಾರೆ. ವಾಹನದ ಸಂಚಾರದ ಮೇಲೆ ಕಣ್ಗಾವಲು ಇರಿಸಲು ಮತ್ತು ತುರ್ತು ಸಂದರ್ಭದಲ್ಲಿ ವಾಹನವನ್ನು ಸುಲಭವಾಗಿ ಪತ್ತೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಯಾತ್ರಾರ್ಥಿಗಳ ವಾಹನದ ಮುಂದೆ ಮತ್ತು ಹಿಂದೆ ಗುಂಡು ನಿರೋಧಕ ಸೇನಾ ವಾಹನಗಳು ಬೆಂಗಾವಲಿಗೆ ಇರಲಿವೆ. 

 ನಿಯಂತ್ರಣ ಕೊಠಡಿ
ಎಲ್ಲಾ ಭದ್ರತಾ ಪಡೆಗಳ ತುಕಡಿಗಳ ಜತೆ ಸಂಪರ್ಕ ಇರುವ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿಗಳು, ಡ್ರೋನ್‌ ಕ್ಯಾಮೆರಾದ ದೃಶ್ಯಾವಳಿಗಳು ಇಲ್ಲಿ ಲಭ್ಯವಿರಲಿದೆ. ಯಾತ್ರಿಗಳನ್ನು ಹೊತ್ತ ವಾಹನಗಳು ಎಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ರೇಡಿಯೊ ತರಂಗಾಂತರ ಗುರುತು ಟ್ಯಾಗ್‌ಗಳ ಲಭ್ಯವಾಗುತ್ತದೆ. ತುರ್ತು ಸಂದರ್ಭದಲ್ಲಿ ಯಾವ ತುಕಡಿ ಏನು ಕೆಲಸ ಮಾಡಬೇಕು ಎಂಬುದನ್ನು ನಿಯಂತ್ರಣ ಕೊಠಡಿ ಮೂಲಕ ಸೂಚಿಸಲಾಗುತ್ತದೆ.

2,995 – ಮೊದಲ ತಂಡದ ಭಕ್ತಾದಿಗಳು

2,334 – ಪುರುಷರು

520 – ಮಹಿಳೆಯರು

21 – ಮಕ್ಕಳು

120 ಸಾಧುಗಳು

107 ಮೊದಲ ತಂಡದ ಭಕ್ತಾದಿಗಳನ್ನು ಹೊತ್ತಿರುವ ವಾಹನಗಳು

1,904 – ಭಕ್ತಾದಿಗಳು ಪಹಲ್‌ಗಾಮ್‌–ಅಮರನಾಥ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ

1,091– ಭಕ್ತಾದಿಗಳು ಬಾಲ್‌ಟಾಲ್‌–ಅಮರನಾಥ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ

 ಬಾಲ್‌ಟಾಲ್‌ ಮಾರ್ಗ
ಇದು ಅತ್ಯಂತ ಕಡಿದಾದ ಇಳಿಜಾರುಗಳನ್ನು ಹೊಂದಿರುವ ಚಾರಣದ ಹಾದಿ. ಕಡಿಮೆ ಸಂಖ್ಯೆಯ ಭಕ್ತಾದಿಗಳು ಮಾತ್ರ ಯಾತ್ರೆಗೆ ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 12 ಕಿ.ಮೀ. ಯಾತ್ರೆಯ ಚಾರಣದ ಹಾದಿಯ ದೂರ

 ಪಹಲ್‌ಗಾಮ್‌ ಮಾರ್ಗ
ಇದು ಅತ್ಯಂತ ದೂರದ ಹಾದಿ. ಆದರೆ ಸುಲಭದ ಹಾದಿಯಾಗಿರುವುದರಿಂದ ಬಹಳಷ್ಟು ಭಕ್ತಾದಿಗಳು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 36 ಕಿ.ಮೀ.ಯಾತ್ರೆಯ ಚಾರಣದ ಹಾದಿಯ ದೂರ

ಜಮ್ಮು ಮತ್ತು ಕಾಶ್ಮೀರ, ಅಮರನಾಥ ಗುಹೆ, ಗಡಿ ನಿಯಂತ್ರಣಾ ರೇಖೆ, ಪಾಕ್ ಆಕ್ರಮಿತ ಕಾಶ್ಮೀರ, ಜಮ್ಮು, ಶ್ರೀನಗರ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು