ನೀಲಗಿರಿ ಆನೆ ಕಾರಿಡಾರ್‌ನಲ್ಲಿ ರೆಸಾರ್ಟ್‌: ಬೀಗ ಜಡಿಯಿರಿ- ‘ಸುಪ್ರೀಂ’

7
ನೀಲಗಿರಿ ಆನೆ ಕಾರಿಡಾರ್‌ನಲ್ಲಿ ರೆಸಾರ್ಟ್‌

ನೀಲಗಿರಿ ಆನೆ ಕಾರಿಡಾರ್‌ನಲ್ಲಿ ರೆಸಾರ್ಟ್‌: ಬೀಗ ಜಡಿಯಿರಿ- ‘ಸುಪ್ರೀಂ’

Published:
Updated:

ನವದೆಹಲಿ: ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿನ ಆನೆ ಕಾರಿಡಾರ್‌ ವ್ಯಾಪ್ತಿಯಲ್ಲಿ ರೆಸಾರ್ಟ್‌ ಹಾಗೂ ವಾಣಿಜ್ಯ ಕಟ್ಟಡಗಳು ತಲೆ ಎತ್ತಿರುವುದಕ್ಕೆ ತೀವ್ರ ವ್ಯಥೆ ಹೊರಹಾಕಿದ ಸುಪ್ರೀಂ ಕೋರ್ಟ್‌, ‘ಇದು ಪರಂಪೆಯನ್ನು ಕಾಪಾಡುವ ಬಗೆಯೇ’ ಎಂದು ಪ್ರಶ್ನಿಸಿದೆ.

1996ರಲ್ಲಿ ಎ.ರಂಗರಾಜನ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ತ್ರಿಸದಸ್ಯ ಪೀಠ, ಒಟ್ಟು 39ರ ಪೈಕಿ 27 ಕಟ್ಟಡಗಳಿಗೆ 48 ಗಂಟೆಯೊಳಗೆ ಬೀಗ ಜಡಿಯಬೇಕು ಎಂದು ನೀಲಗಿರಿ ಜಿಲ್ಲಾಧಿಕಾರಿಗೆ ಸೂಚಿಸಿತು.

‘ಆನೆ ಭಾರತದ ಭವ್ಯ ಪರಂಪರೆಯ ಪ್ರತೀಕ. ಅವುಗಳ ಬಗ್ಗೆ ನಾವು ತೋರುತ್ತಿರುವ ಈ ಧೋರಣೆ ಸರಿಯೇ’ ಎಂದು ಕೇಳಿದ ನ್ಯಾಯಪೀಠ, ‘ನಿರ್ಮಾಣಕ್ಕೆ ಅನುಮತಿ ನೀಡಿರುವ ದಾಖಲೆ ಪ್ರಸ್ತುತಪಡಿಸಲು ಸಾಧ್ಯವಾಗದ 27 ರೆಸಾರ್ಟ್‌ಗಳ ಮಾಲೀಕರು ತಮ್ಮ ಪರ ವಕೀಲರನ್ನೇ ಕಳುಹಿಸದೆ ಇರುವುದನ್ನು ಗಮನಿಸಿದರೆ ಅವೆಲ್ಲವೂ ಅಕ್ರಮ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ’ ಎಂದು ಅಭಿಪ್ರಾಯಪಟ್ಟಿತು.

ದಾಖಲೆ ಒದಗಿಸಲು ಸಮಯಾವಕಾಶ ನೀಡುವಂತೆ 12 ಕಟ್ಟಡಗಳ ಮಾಲೀಕರ ಪರ ಹಾಜರಿದ್ದ ವಕೀಲ ಸಲ್ಮಾನ್‌ ಖುರ್ಷಿದ್‌ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ಪೀಠ, 48 ಗಂಟೆಗಳಲ್ಲಿ ದಾಖಲೆ ಪ್ರಸ್ತುತಪಡಿಸುವಂತೆ ಸೂಚಿಸಿತು.

ನೀಲಗಿರಿ ಬೆಟ್ಟಗಳ ಪ್ರದೇಶದಲ್ಲಿ 22.64 ಕಿ.ಮೀ ಉದ್ದ ಹಾಗೂ 1.50 ಕಿ.ಮೀ ಅಗಲದ ವಿಸ್ತೀರ್ಣ ಹೊಂದಿರುವ ಈ ಕಾರಿಡಾರ್‌, ಪಶ್ಚಿಮ ಘಟ್ಟದಿಂದ ಪೂರ್ವ ಘಟ್ಟಗಳಿಗೆ ಆನೆಗಳ ಸಂಪರ್ಕಕ್ಕೆ ಇರುವ ಏಕೈಕ ದಾರಿಯಾಗಿದೆ.

ಆನೆ ಕಾರಿಡಾರ್‌ನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡಗಳು ತಲೆ ಎತ್ತದಂತೆ ನಿಗಾ ವಹಿಸಲು ಸರ್ಕಾರವು ‘ಗಜ’ ಹೆಸರಿನ ಟಾಸ್ಕ್‌ ಫೋರ್ಸ್‌ ರಚಿಸಿದ್ದರೂ, ಅಕ್ರಮ ಕಟ್ಟಡಗಳು ತಲೆ ಎತ್ತಿರುವುದನ್ನು ವಿರೋಧಿಸಿ ಪಿಐಎಲ್‌ ಸಲ್ಲಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !