ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸದೃಢ ಭಾರತ ಸಶಕ್ತ ಭಾರತ’

‘ಫಿಟ್ ಇಂಡಿಯಾ ಚಳವಳಿ’ಗೆ ಪ್ರಧಾನಿ ಚಾಲನೆ
Last Updated 29 ಆಗಸ್ಟ್ 2019, 18:24 IST
ಅಕ್ಷರ ಗಾತ್ರ

ನವದೆಹಲಿ: ‘ಫಿಟ್ ಇಂಡಿಯಾ ಮೂವ್‌ಮೆಂಟ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು. ದಿನಕ್ಕೆ ಕೇವಲ ಒಂದು ಗಂಟೆ ವಿನಿಯೋಗಿಸುವುದರಿಂದ ದೇಶದ ಭವಿಷ್ಯ ಆರೋಗ್ಯಕರವಾಗಿರಲಿದೆ ಎಂದು ಅವರು ಹೇಳಿದರು.

ಮಾರ್ಷಲ್ ಆರ್ಟ್ಸ್ ಪ್ರದರ್ಶನ ಸೇರಿದಂತೆ ಆಕರ್ಷಕವಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಡತ್ವದ ಜೀವನಶೈಲಿಗೆ ತಂತ್ರಜ್ಞಾನವೇ ಕಾರಣ ಎಂದರು.

ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಎಲ್ಲರೂ ನಿತ್ಯ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಫಿಟ್ ಇಂಡಿಯಾದ ಉದ್ದೇಶ. ಕ್ರೀಡಾ ಸಚಿವ ಕಿರಣ್ ರಿಜಿಜು ನೇತೃತ್ವದ ಸಮಿತಿಗೆ ಕಾರ್ಯಕ್ರಮವನ್ನು ಇನ್ನಷ್ಟು ಪ್ರಚುರಪಡಿಸುವ ಹೊಣೆ ನೀಡಲಾಗಿದೆ.

‘ಶೂನ್ಯ ಬಂಡವಾಳದ ಸದೃಢತೆಯು ಅನಂತ ಆದಾಯವನ್ನು ತಂದುಕೊಡಬಲ್ಲದು’ ಎಂದು ಅಭಿಪ್ರಾಯಟ್ಟರು.

‘ಫಿಟ್‌ನೆಸ್ ಎಂಬುದು ನಮ್ಮ ಸಂಸ್ಕೃತಿಯ ಭಾಗವೇ ಆಗಿತ್ತು. ಆದರೆ ಈಗ ಫಿಟ್‌ನೆಸ್ ಬಗ್ಗೆ ಹಲವು ವಾದಗಳು ಹುಟ್ಟಿಕೊಂಡಿವೆ. ಕೆಲವು ದಶಕಗಳ ಹಿಂದೆ ಒಬ್ಬ ಸಾಮಾನ್ಯ ವ್ಯಕ್ತಿ 8–10 ಕಿಲೋಮೀಟರ್ ಓಡಾಡುತ್ತಿದ್ದ, ಸೈಕಲ್ ತುಳಿಯುತ್ತಿದ್ದ. ಆದರೆ ತಂತ್ರಜ್ಞಾನದಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ನಾವು ಹೆಚ್ಚು ಓಡಾಡುತ್ತಿಲ್ಲ ಎಂದು ಅದೇ ತಂತ್ರಜ್ಞಾನ ನಮ್ಮನ್ನು ಎಚ್ಚರಿಸುತ್ತಿದೆ’ ಎಂದು ಮೋದಿ ವಿವರಿಸಿದರು.

‘ಯುವಜನಾಂಗವು ಜೀವನಶೈಲಿಯ ರೋಗಗಳಿಗೆ ಈಡಾಗುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ರಕ್ತದೊತ್ತಡ ಹಾಗೂ ಮಧುಮೇಹ ಪ್ರಕರಣಗಳು ಹೆಚ್ಚುತ್ತಿವೆ. 12 ವರ್ಷದ ಮಕ್ಕಳು ಮಧುಮೇಹದಿಂದ ಬಳಲುತ್ತಿದ್ದಾರೆ. 30 ವರ್ಷದ ಯುವಕ ಹೃದಯಾಘಾತಕ್ಕೆ ಒಳಗಾಗುತ್ತಿರುವ ಸುದ್ದಿಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ಸಕಾರಾತ್ಮಕ ಮನೋಭಾವ ಮತ್ತುಜೀವನಶೈಲಿ ಬದಲಾವಣೆಯಿಂದ ಎಲ್ಲವನ್ನೂ ಸರಿಪಡಿಸಲು ಸಾಧ್ಯ’ ಎಂದರು.

ರಾಷ್ಟ್ರೀಯ ಕ್ರೀಡಾ ಸಾಧಕರನ್ನು ಪ್ರಧಾನಿ ಅಭಿನಂದಿಸಿದರು. ಕ್ರೀಡಾ ಸಾಧಕರ ಪದಕಗಳು ಕೇವಲ ಅವರ ಸಾಧನೆಯನ್ನಷ್ಟೇ ಬಿಂಬಿಸುವುದಿಲ್ಲ, ಬದಲಾಗಿ ನವಭಾರತದ ವಿಶ್ವಾಸವನ್ನು ಪ್ರತಿಫಲಿಸುತ್ತವೆ ಎಂದು ಅವರು ಶ್ಲಾಘಿಸಿದರು.

***

ಯಶಸ್ಸು ಹಾಗೂ ಸದೃಢತೆಗೆ ಹತ್ತಿರದ ನಂಟಿದೆ. ದೇಹ ಸದೃಢವಾಗಿದ್ದರೆ ಮನಸ್ಸೂ ಸದೃಢ. ಎಲ್ಲ ಯಶಸ್ವಿ ವ್ಯಕ್ತಿಗಳೂ ಸದೃಢರು

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT