ಮಧ್ಯಪ್ರದೇಶದಲ್ಲಿ ಕಮಲನಾಥ್‌,ಸಿಂಧಿಯ;ರಾಜಸ್ಥಾನದಲ್ಲಿ ಗೆಹ್ಲೋಟ್‌,ಪೈಲಟ್‌ ಮೇಲಾಟ

7

ಮಧ್ಯಪ್ರದೇಶದಲ್ಲಿ ಕಮಲನಾಥ್‌,ಸಿಂಧಿಯ;ರಾಜಸ್ಥಾನದಲ್ಲಿ ಗೆಹ್ಲೋಟ್‌,ಪೈಲಟ್‌ ಮೇಲಾಟ

Published:
Updated:
Deccan Herald

ಜೈಪುರ/ಭೋಪಾಲ್‌/ರಾಯಪುರ: ಹಿಂದಿ ಭಾಷಿಕ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುವುದು ನಿಚ್ಚಳವಾಗಿದೆ. 

ಮತಗಟ್ಟೆ ಸಮೀಕ್ಷೆಗಳನ್ನೆಲ್ಲ ಸುಳ್ಳಾಗಿಸಿ ಛತ್ತೀಸಗಡದಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ದಾಖಲಿಸಿದೆ. ರಾಜಸ್ಥಾನದಲ್ಲಿ ಪ್ರಯಾಸದ ಗೆಲುವು ಸಿಕ್ಕಿದೆ. ಮಧ್ಯ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಮತ್ತು ಪಕ್ಷೇತರರ ಬಲದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಚುನಾವಣೆಗೆ ಮೊದಲು ಕಾಂಗ್ರೆಸ್‌ ಘೋಷಿಸಿರಲಿಲ್ಲ. ಹಾಗಾಗಿ ಈ ರಾಜ್ಯಗಳಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.

ಮಧ್ಯಪ್ರದೇಶ, ರಾಜಸ್ಥಾನದ ಶಾಸಕರು ಸಭೆ ನಡೆಸಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ವಹಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಒಬ್ಬರು ಹಿರಿಯ ಮತ್ತು ಒಬ್ಬರು ಕಿರಿಯ ಪ್ರಬಲ ಆಕಾಂಕ್ಷಿಗಳಿರುವುದು ಆಯ್ಕೆಯನ್ನು ಸಂಕೀರ್ಣಗೊಳಿಸಿದೆ. 

ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ 21 ಕ್ಷೇತ್ರಗಳ ಗೆಲುವಿಗೆ ಸೀಮಿತವಾಗಿದ್ದ ಪಕ್ಷವನ್ನು ಈ ಬಾರಿ ಗೆಲುವಿನ ದಡ ಹತ್ತಿಸಿದ ಹಿರಿಮೆ ಅವರ ಬೆನ್ನಿಗಿದೆ. ಆದರೆ, ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೂ ಮುಖ್ಯಮಂತ್ರಿ ಗಾದಿಗೆ ಹಕ್ಕು ಮಂಡಿಸಿದ್ದಾರೆ. ಈ ಇಬ್ಬರೂ ಮುಖಂಡರು ರಾಹುಲ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಮಧ್ಯ ಪ್ರದೇಶದಲ್ಲಿ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲನಾಥ್‌ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಪೈಪೋಟಿ ಇದೆ. 

ಕಮಲನಾಥ್‌ ಅವರೇ ಮುಖ್ಯಮಂತ್ರಿ ಹುದ್ದೆಗೇರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ರಾಹುಲ್‌ ಅವರ ಸಮ್ಮತಿಯ ನಂತರ ಕಮಲನಾಥ್‌ ಹೆಸರು ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ. 

‘ಮುಖ್ಯಮಂತ್ರಿ ಹುದ್ದೆ ಕೊಟ್ಟರೆ ಅದೊಂದು ಗೌರವ ಎಂದು ಭಾವಿಸುವೆ’ ಎಂದು ಸಿಂಧಿಯಾ ಹೇಳಿದ್ದಾರೆ. ಆದರೆ, ಹೈಕಮಾಂಡ್‌ ನಿರ್ಧಾರಕ್ಕೆ ಅವರು ತಲೆ ಬಾಗುವ ಸಾಧ್ಯತೆಯೇ ಹೆಚ್ಚು. 

ಛತ್ತೀಸಗಡದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭೂಪೇಶ್‌ ಬಘೆಲ್‌, ಸಂಸದ ತಾಮ್ರಧ್ವಜ ಸಾಹು ಮತ್ತು ಹಿರಿಯ ಮುಖಂಡ ಟಿ.ಎಸ್‌.ಸಿಂಹದೇವ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಫೋಟಿ ಇದೆ. ಆ್ಯಪ್‌ ಮೂಲಕ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿ ಆಯ್ಕೆ ನಡೆಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.

ಸದ್ದಿಲ್ಲದೆ ಮೈತ್ರಿ ಸೇರಿದ ಎಸ್‌ಪಿ–ಬಿಎಸ್‌ಪಿ

ಕಾಂಗ್ರೆಸ್‌ ಗೆದ್ದಿರುವ ಮೂರೂ ರಾಜ್ಯಗಳಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿಯ ಮಾತುಕತೆ ನಡೆದಿತ್ತು. ಆದರೆ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಹೆಚ್ಚು ಕ್ಷೇತ್ರಗಳಿಗೆ ಬೇಡಿಕೆ ಇಟ್ಟ ಕಾರಣ ಈ ಮೈತ್ರಿ ಕೈಗೂಡಿರಲಿಲ್ಲ.

ಉತ್ತರ ಪ್ರದೇಶ ಮಹಾಮೈತ್ರಿಯಿಂದಲೂ ಕಾಂಗ್ರೆಸ್‌ ಪಕ್ಷವನ್ನು ದೂರ ಇರಿಸಬೇಕು ಎಂದು ಮಾಯಾವತಿ ಒತ್ತಾಯಿಸಿದ್ದರು. ಮೂರೂ ರಾಜ್ಯಗಳಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದರು. ಛತ್ತೀಸಗಡದಲ್ಲಿ ಅಜಿತ್‌ ಜೋಗಿ ಜತೆ ಮೈತ್ರಿ ಮಾಡಿ ಕಾಂಗ್ರೆಸ್‌ ಗೆಲುವಿಗೆ ಅಡ್ಡಿಯಾಗಲು ಯತ್ನಿಸಿದ್ದರು.

ಆದರೆ, ಈಗ ಮಧ್ಯ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲಾಗುವುದು ಎಂದು ಎಸ್‌ಪಿ ಮತ್ತು ಬಿಎಸ್‌ಪಿ ಹೇಳಿವೆ. ಮಹಾಮೈತ್ರಿಕೂಟದ ಭಾಗವಾಗಿಯೂ ಇರುವುದಾಗಿ ಹೇಳಿವೆ.

ಇಂದು ಬಿಜೆಪಿ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರನ್ನು ಉದ್ದೇಶಿಸಿ ಗುರುವಾರ ಮಾತನಾಡಲಿದ್ದಾರೆ. ಬಳಿಕ, ಪಕ್ಷದ ಪ್ರಮುಖ ಮುಖಂಡರು ಸುಮಾರು ಏಳು ತಾಸು ಸಭೆ ನಡೆಸಲಿದ್ದಾರೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸೋಲು ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !