ಎಲ್ಲಾ ಕೈಮೀರುತ್ತಿದೆ, ನಾವು ಸೋತುಹೋಗಿದ್ದೇವೆ

7
ರಕ್ಷಣೆಗೆ ಮೊರೆ ಇಡುತ್ತಿರುವ ಕೇರಳ ಮಹಾಮಳೆ ಸಂತ್ರಸ್ತರು

ಎಲ್ಲಾ ಕೈಮೀರುತ್ತಿದೆ, ನಾವು ಸೋತುಹೋಗಿದ್ದೇವೆ

Published:
Updated:
Deccan Herald

ಕೊಚ್ಚಿ: ಮಹಾಮಳೆಯಿಂದ ತತ್ತರಿಸಿರುವ ಕೇರಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಮಳೆಯ ಬಿರುಸು ಕಡಿಮೆಯಾಗಿದ್ದರೂ, ಹೆಲಿಕಾಪ್ಟರ್‌ ಮತ್ತು ದೋಣಿಗಳ ಕೊರತೆ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.

ರಾಜ್ಯದ ರಾಜಧಾನಿ ತಿರುವನಂತಪುರದಿಂದ 120 ಕಿ.ಮೀ.ನಷ್ಟು ದೂರದಲ್ಲಿರುವ ಚೆಂಗನ್ನೂರು ಪಟ್ಟಣವು ನಾಲ್ಕು ದಿನಗಳಿಂದ ಸಂಪೂರ್ಣ ಸಂಪರ್ಕ ಕಳೆದುಕೊಂಡಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಮತ್ತು ಇಡೀ ಪಟ್ಟಣ ಜಲಾವೃತವಾಗಿರುವುದರಿಂದ ರಕ್ಷಣಾ ಕಾರ್ಯಕರ್ತರು ಅಲ್ಲಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಶನಿವಾರ ಮಧ್ಯಾಹ್ನವಷ್ಟೇ ಒಂದು ದೋಣಿಯಲ್ಲಿ ರಕ್ಷಣಾ ತಂಡ ಚೆಂಗನ್ನೂರಿಗೆ ಹೋಗಿದೆ. ಆದರೆ ಅದಿನ್ನೂ ಹಿಂತಿರುಗಿಲ್ಲ.

‘ಚೆಂಗನ್ನೂರಿನಲ್ಲಿ 50ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಶವಗಳೆಲ್ಲಾ ಕೊಳೆಯುತ್ತಿವೆ. ನನ್ನ ಜನರನ್ನು ರಕ್ಷಿಸಲು ಏನೆಲ್ಲಾ ಮಾಡಬಹುದಿತ್ತೋ ಅವನ್ನೆಲ್ಲಾ ಮಾಡಿದ್ದೇವೆ. ಆದರೆ ಇಡೀ ಪಟ್ಟಣದ ಜನರನ್ನು ದೋಣಿಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಎಲ್ಲಾ ನಮ್ಮ ಕೈಮೀರುತ್ತಿದೆ. ನಾವು ಸೋತುಹೋಗಿದ್ದೇವೆ.

ನಿಮ್ಮನ್ನು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನಮಗೊಂದು ಹೆಲಿಕಾಪ್ಟರ್ ಒದಗಿಸಿ. ನಮ್ಮ ಜನರನ್ನು ಏರ್‌ಲಿಫ್ಟ್ ಮಾಡಬೇಕು. ಇಲ್ಲದಿದ್ದರೆ ಅವರೆಲ್ಲಾ ಸತ್ತುಹೋಗುತ್ತಾರೆ’ ಎಂದು ಚೆಂಗನ್ನೂರು ಶಾಸಕ ಸಾಜಿ ಚೆರಿಯನ್ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಕಣ್ಣೀರಿಟ್ಟು ಅಂಗಲಾಚುತ್ತಿರುವ ಈ ವಿಡಿಯೊವನ್ನು ಸುದ್ದಿವಾಹಿನಿಗಳೂ ಪ್ರಸಾರ ಮಾಡಿವೆ.

ಇಡೀ ರಾಜ್ಯದ ಬಹುತೇಕ ಎಲ್ಲಾ ವಸತಿ ಪ್ರದೇಶಗಳೂ ಜಲಾವೃತವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ವಿದ್ಯುತ್ ಇಲ್ಲದಿರುವುದರಿಂದ ಮೊಬೈಲ್ ಸಂಪರ್ಕ ಕಡಿತವಾಗಿದೆ. ಹೀಗಾಗಿ ಜನ ಎಲ್ಲಿ ಸಿಲುಕಿದ್ದಾರೆ ಎಂಬುದನ್ನು ಪತ್ತೆ ಮಾಡುವುದೇ ಕಷ್ಟವಾಗಿದೆ ಎಂದು ರಕ್ಷಣಾ ತಂಡಗಳು ಹೇಳಿವೆ.

‘ರಕ್ಷಣಾ ಕಾರ್ಯಾಚರಣೆ ಸಾಲುತ್ತಿಲ್ಲ. ಇನ್ನೂ ಹತ್ತಾರು ಸಾವಿರ ಮಂದಿಯನ್ನು ರಕ್ಷಿಸಬೇಕಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಳೆ ಮತ್ತು ಮಳೆ ಸಂಬಂಧಿ ಅವಘಡಗಳಿಗೆ ಸಿಲುಕಿ ಸತ್ತವರ ಸಂಖ್ಯೆ ಬಗ್ಗೆ ನಿಖರ ಮಾಹಿತಿ ದೊರಕುತ್ತಿಲ್ಲ. ಶನಿವಾರ ಹಲವೆಡೆ ಹತ್ತಾರು ಶವಗಳು ಪತ್ತೆಯಾಗಿವೆ ಎಂದು ಇಲ್ಲಿನ ಸುದ್ದಿವಾಹಿನಿಗಳು ವರದಿ ಮಾಡಿವೆ. ಆದರೆ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರವು ಯಾವುದೇ ಮಾಹಿತಿ ನೀಡಿಲ್ಲ.

ರಕ್ಷಣಾ ಕಾರ್ಯಕ್ಕೆಂದು ಆರಂಭಿಸಿರುವ ಫೇಸ್‌ಬುಕ್ ಪುಟದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ನೆರವಿಗಾಗಿ ಮನವಿ ಮಾಡಿದ್ದಾರೆ. ‘ನಮ್ಮಲ್ಲಿ ನೀರು ಖಾಲಿಯಾಗಿದೆ’, ‘ಆಹಾರ ಮುಗಿದುಹೋಗಿದೆ’, ‘ದಯವಿಟ್ಟು ನಮ್ಮನ್ನು ಕಾಪಾಡಿ’ ಎಂಬ ಮನವಿಗಳಿರುವ ಪೋಸ್ಟ್‌ಗಳು ಈ ಪುಟದಲ್ಲಿ ದಾಖಲಾಗಿವೆ. ಆದರೆ ಈ ಎಲ್ಲಾ ಮನವಿಗಳಿಗೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಅತೀವ ಅಪಾಯದಲ್ಲಿರುವವರನ್ನು ಆದ್ಯತೆ ಮೇಲೆ ರಕ್ಷಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

‘ಎಸ್‌ಯುವಿ ಇದ್ದರೆ ನೆರವಿಗೆ ಬನ್ನಿ’

‘ಗುಡ್ಡಗಳಲ್ಲಿ, ರಸ್ತೆಗಳೇ ಇಲ್ಲದ ಪ್ರದೇಶಗಳ ಗ್ರಾಮಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಆ ಸ್ಥಳಗಳನ್ನು ತಲುಪುವ ಸಾಮರ್ಥ್ಯವಿರುವ ವಾಹನಗಳ ಕೊರತೆ ಇದೆ. ಹೀಗಾಗಿ 4x4 ಸವಲತ್ತು ಇರುವ ಮಹೀಂದ್ರಾ ಸ್ಕಾರ್ಪಿಯೊ, ಜೀಪ್, ಟಾಟಾ ಸಫಾರಿಯಂತಹ ಎಸ್‌ಯುವಿಗಳು ಇರುವವರು ದಯವಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ನಮಗೆ ನೆರವಾಗಬೇಕು’ ಎಂದು ಕೇರಳದ ಹಲವು ಜಿಲ್ಲಾಡಳಿತಗಳು ಅಧಿಕೃತವಾಗಿ ಮನವಿ ಮಾಡಿಕೊಂಡಿವೆ.


ಕೋಯಿಕ್ಕೋಡ್‌ನ ನೆರೆಪೀಡಿತ ಪಟ್ಟಣವೊಂದರಲ್ಲಿ ಸಿಲುಕಿರಬಹುದಾದ ಜನರಿಗಾಗಿ ಹುಡುಕಾಟ ನಡೆಸಿದ ಕೇರಳ ಅಡ್ವೆಂಚರ್ ಸ್ಫೋರ್ಟ್ಸ್ ಕ್ಲಬ್‌ನ ಸದಸ್ಯರು –ಎಎಫ್‌ಪಿ ಚಿತ್ರ

ಇಕ್ಕಟ್ಟಾಗಿರುವ ಗುಡ್ಡಗಾಡು ಪ್ರದೇಶಗಳಿಗೆ ಹೆಲಿಕಾಪ್ಟರ್‌ಗಳಿಂದಲೂ ತಲುಪಲು ಸಾಧ್ಯವಾಗುತ್ತಿಲ್ಲ. ಅಂತಹ ಪ್ರದೇಶಗಳಿಗೆ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಕೊಂಡೊಯ್ಯಲು ಇಂತಹ ವಾಹನಗಳು ಬೇಕಿವೆ. ಅಂತಹ ವಾಹನಗಳು ಇರುವವರು, ಆಫ್‌ರೋಡ್ ಚಾಲನೆ ಅನುಭವವಿರುವವರು ತಕ್ಷಣವೇ ಜಿಲ್ಲಾಡಳಿತವನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈ ಪ್ರಕಟಣೆಗೆ ಸ್ಪಂದಿಸಿರುವ ಕೆಲವು ಸ್ಪೋರ್ಟ್ಸ್‌ ಕ್ಲಬ್‌ಗಳ ಸದಸ್ಯರು ತಮ್ಮ ಎಸ್‌ಯುವಿಗಳೊಂದಿಗೆ ನೆರವಿಗೆ ಧಾವಿಸಿದ್ದಾರೆ.

***

3.14 ಲಕ್ಷ -ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮಳೆ ಸಂತ್ರಸ್ತರ ಸಂಖ್ಯೆ

58 -ಎನ್‌ಡಿಆರ್‌ಎಫ್‌ನ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ದೇಶದ ಇತಿಹಾಸದಲ್ಲಿ ಇಷ್ಟು ತಂಡಗಳು ಒಮ್ಮೆಲೇ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲು

40 -ಎನ್‌ಡಿಆರ್‌ಎಫ್‌ನ ಪ್ರತಿ ತಂಡದಲ್ಲಿ ಇರುವ ಕಾರ್ಯಕರ್ತರು

10,467 -ಈವರೆಗೆ ರಕ್ಷಿಸಲಾದ ಜನರ ಸಂಖ್ಯೆ

 
ಹರಿದು ಬರುತ್ತಿರುವ ಪರಿಹಾರ ಸಾಮಗ್ರಿ

ಆಹಾರ ಸಾಮಗ್ರಿಗಳನ್ನು ಹೊತ್ತಿರುವ 20 ಲಾರಿಗಳು ತಮಿಳುನಾಡಿನಿಂದ ಕೇರಳದತ್ತ ಹೊರಟಿವೆ

ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಹೊತ್ತು ತಮಿಳುನಾಡಿನಿಂದ ಹೊರಟಿದ್ದ ರೈಲು ಕೇರಳ ತಲುಪಿದೆ

100 ಟನ್‌ನಷ್ಟು ಆಹಾರ ಸಾಮಗ್ರಿಗಳಿರುವ ಲಾರಿಗಳು ಪಂಜಾಬ್‌ನಿಂದ ಹೊರಟಿವೆ

 

ಬರಹ ಇಷ್ಟವಾಯಿತೆ?

 • 44

  Happy
 • 3

  Amused
 • 5

  Sad
 • 0

  Frustrated
 • 0

  Angry

Comments:

0 comments

Write the first review for this !