ಸೋಮವಾರ, ಸೆಪ್ಟೆಂಬರ್ 23, 2019
28 °C
ಚಂದ್ರಯಾನ–2: ಜಾಗತಿಕ ಸುದ್ದಿ ಮಾಧ್ಯಮಗಳಲ್ಲಿ ಇಸ್ರೊಗೆ ಪ್ರಶಂಸೆ

ವಿಫಲವಾಗಿದ್ದರೂ ಇದು ದೊಡ್ಡ ಸಾಧನೆ

Published:
Updated:

ವಾಷಿಂಗ್ಟನ್ (ಪಿಟಿಐ): ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯತ್ನಕ್ಕೆ ಹಿನ್ನಡೆ ಆಗಿರಬಹುದು. ಆದರೆ ಬಾಹ್ಯಾಕಾಶ ಸಂಶೋಧನೆಯಲ್ಲಿ ‘ಸೂಪರ್‌ ಪವರ್’ ಆಗುವ ಭಾರತದ ಎಂಜಿನಿಯರಿಂಗ್ ಕೌಶಲವನ್ನು ಈ ಕಾರ್ಯಾಚರಣೆ ಎತ್ತಿಹಿಡಿದಿದೆ ಎಂದು ಜಾಗತಿಕ ಸುದ್ದಿ ಮಾಧ್ಯಮಗಳು ಹೇಳಿವೆ.

ನ್ಯೂಯಾರ್ಕ್ ಟೈಮ್ಸ್‌, ವಾಷಿಂಗ್ಟನ್ ಪೋಸ್ಟ್‌, ಬಿಬಿಸಿ, ಗಾರ್ಡಿಯನ್ ಸೇರಿದಂತೆ ಹಲವು ಪತ್ರಿಕೆಗಳು ಚಂದ್ರಯಾನ–2ಕ್ಕೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸಿವೆ.

ವಿಕ್ರಮ್ ಲ್ಯಾಂಡರ್‌ ಮತ್ತು ಪ್ರಜ್ಞಾನ್ ರೋವರ್ ಸಂಪರ್ಕ ಕಳೆದುಕೊಂಡಿದ್ದು ದೊಡ್ಡ ಹಿನ್ನಡೆಯೇ ಹೌದು. ಆದರೆ ಅಷ್ಟು ಮಾತ್ರಕ್ಕೆ ಇಡೀ ಚಂದ್ರಯಾನ–2 ಮುಗಿದುಹೋಗಿಲ್ಲವಲ್ಲ –ವಯರ್ಡ್‌, ಅಮೆರಿಕದ ನಿಯತಕಾಲಿಕೆ

ಚಂದ್ರನ ಮೇಲೆ ನೌಕೆ ಇಳಿಸುವ ಭಾರತದ ಯತ್ನ ಫಲಪ್ರದವಾಗದೇ ಇರಬಹುದು. ಆದರೆ ದಶಕಗಳ ಕಾಲದ ಅನುಭವ ಮತ್ತು ಭಾರತೀಯ ವಿಜ್ಞಾನಿಗಳ ಕೌಶಲವನ್ನು ಚಂದ್ರಯಾನ–2 ಸಾಬೀತು ಮಾಡಿದೆ –ನ್ಯೂಯಾರ್ಕ್ ಟೈಮ್ಸ್‌

ಚಂದ್ರನ ಮೇಲೆ ಲ್ಯಾಂಡರ್‌ ಇಳಿಸುವ ಭಾರತದ ಯತ್ನವು ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ. ಆದರೆ ಚಂದ್ರನ ಮೇಲೆ ಮಾನವ ವಸತಿಯನ್ನು ಸ್ಥಾಪಿಸುವ ಭವಿಷ್ಯದತ್ತ ಭಾರತವು ಹೆಜ್ಜೆ ಇರಿಸಿದೆ –ಗಾರ್ಡಿಯನ್

ಚಂದ್ರಯಾನ–2 ಭಾಗಶಃ ವಿಫಲವಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೊಗೆ ಪ್ರಶಂಸೆಗಳ ಮಹಾಪೂರವೇ ಹರಿದಿದೆ. ಇದು ಭಾರತೀಯ ಯುವಜನರ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ –ವಾಷಿಂಗ್ಟನ್ ಪೋಸ್ಟ್‌

ಅತ್ಯಂತ ಅಗ್ಗದ ಯೋಜನೆ ಆಗಿದ್ದರಿಂದಲೇ ಚಂದ್ರಯಾನ–2 ವಿಶ್ವದ ಗಮನ ಸೆಳೆದಿತ್ತು. ಇಸ್ರೊ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಸಾಹಸ ಮೆರೆದಿದ್ದು ಇದೇ ಮೊದಲಲ್ಲ. 2014ರಲ್ಲಿ ಮಂಗಳಯಾನವನ್ನೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಇಸ್ರೊ ಸಾಧಿಸಿ ತೋರಿಸಿತ್ತು –ಬಿಬಿಸಿ

ಕಾರ್ಯಾಚರಣೆಯ ಪ್ರತಿಯೊಂದು ಹಂತವನ್ನೂ ಅಲ್ಲಿ ನೆರೆದಿದ್ದವರು ಸಂಭ್ರಮಿಸುತ್ತಿದ್ದರು. ಆದರೆ ನೆಲಸ್ಪರ್ಶಕ್ಕೂ ಮುನ್ನ ಸಂಪರ್ಕ ಕಳೆದುಕೊಂಡಿದ್ದರಿಂದ ಅಲ್ಲಿ ಮೌನ ಮಡುಗಟ್ಟಿತು –ಸಿಎನ್‌ಎನ್‌

***

ಹಿನ್ನಡೆಗಳು ಯಾವುದೇ ಪಯಣದ ಭಾಗವಾಗಿರುತ್ತವೆ. ಹಿನ್ನಡೆ ಇಲ್ಲದೆ ಯಶಸ್ಸು ಸಿಗುವುದಿಲ್ಲ. ಇಡೀ ಭಾರತ ಇಸ್ರೊ ಜತೆಗೆ ನಿಲ್ಲುತ್ತದೆ. ನಿಮ್ಮ ಮೇಲೆ ನಮಗೆ ವಿಶ್ವಾಸವಿದೆ

– ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

***

ನಿಮ್ಮ ಶ್ರಮ ವ್ಯರ್ಥವಾಗಿಲ್ಲ. ಮುಂದಿನ ದಿನಗಳಲ್ಲಿನ ಅತ್ಯಂತ ಮಹತ್ವದ ಮತ್ತು ಮಹತ್ವಾಕಾಂಕ್ಷೆಯ ಸಾಧನೆಗಳಿಗೆ ಇದು ಅಡಿಪಾಯ ಹಾಕಿದೆ
– ರಾಹುಲ್ ಗಾಂಧಿ, ಕಾಂಗ್ರೆಸ್‌ ಸಂಸದ

***

ನಮ್ಮ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆಯಿದೆ. ವಿಜ್ಞಾನಿಗಳ ಸಾಮರ್ಥ್ಯಕ್ಕೆ ಸಾಟಿಯೇ ಇಲ್ಲ. ನೀವು ನಿಮ್ಮ ಕೆಲಸಗಳನ್ನು ಮುಂದುವರಿಸಿ, ನಾವು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿ

– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ಎಷ್ಟೋಬಾರಿ ಅಂದುಕೊಂಡಿದ್ದ ಗುರಿಯನ್ನು ನಾವು ತಲುಪುವುದೇ ಇಲ್ಲ. ಆದರೆ ಗುರಿ ತಲುಪಲು ನಾವು ‘ಟೇಕ್‌ ಆಫ್’ ಆಗಿದ್ದೆವು ಎಂಬುದು ಮಹತ್ವವಾದುದು

– ಶಾರುಕ್ ಖಾನ್, ಬಾಲಿವುಡ್ ನಟ

***

ಹೆಮ್ಮೆಯು ಯಾವತ್ತೂ ಸೋಲುವುದಿಲ್ಲ... ಚಂದ್ರಯಾನ ನಮ್ಮ ಹೆಮ್ಮೆ, ನಮ್ಮ ಗೆಲುವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಗ್ಗೆ ಹೆಮ್ಮೆಯಿದೆ

– ಅಮಿತಾಬ್ ಬಚ್ಚನ್, ಹಿಂದಿ ನಟ

***

ಚಂದ್ರನ ಮೇಲೆ ನೌಕೆ ಇಳಿಸಲು 60 ವರ್ಷಗಳಲ್ಲಿ ನಡೆದ ಯತ್ನಗಳಲ್ಲಿ ಶೇ 60ರಷ್ಟು ಮಾತ್ರ ಯಶಸ್ವಿಯಾಗಿವೆ. 109 ಯತ್ನಗಳಲ್ಲಿ ಗುರಿ ತಲುಪಿದ್ದು 61 ಮಾತ್ರ

– ನಾಸಾ

Post Comments (+)