ಅರಣ್ಯ ಇಲಾಖೆಗೆ ಅತ್ತ ದರಿ, ಇತ್ತ ‘ಪುಲಿ’

7
ಕಾರ್ಯಾಚರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ‘ಅವನಿ’ ಭಯ

ಅರಣ್ಯ ಇಲಾಖೆಗೆ ಅತ್ತ ದರಿ, ಇತ್ತ ‘ಪುಲಿ’

Published:
Updated:
Deccan Herald

ಗುವಾಹಟಿ: ಇಲ್ಲಿನ ಉದಲ್‌ಗುರಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಪ್ರಾಣಿಗಳನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ಹಿಡಿಯಬೇಕು ಎಂಬುದು ಸ್ಥಳೀಯರ ಒತ್ತಾಯ. ಆದರೆ, ಯಾವುದೇ ತಂತ್ರ ಹೂಡಿದರೂ ತಪ್ಪಿಸಿಕೊಳ್ಳುತ್ತಿರುವ ಹುಲಿಯನ್ನು ಹಿಡಿಯಲು ಹರಸಾಹಸ ಮಾಡುತ್ತಿರುವ  ಅಸ್ಸಾಂನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈಗ ‘ಅವನಿ’ ಭಯ ಕಾಡುತ್ತಿದೆ.

‘ಕೇಂದ್ರ ಅಸ್ಸಾಂನ  ಒರಾಂಗ್‌ ನ್ಯಾಷನಲ್‌ ಪಾರ್ಕ್‌ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ರಾಯಲ್‌ ಬೆಂಗಾಲ್‌ ಹೆಣ್ಣು ಹುಲಿಯು,  ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೇಟೆಯಾಡಿ 60ಕ್ಕೂ ಹೆಚ್ಚು ಹಂದಿ ಮತ್ತು ಕುರಿಗಳನ್ನು ಬಲಿ ಪಡೆದಿದೆ. ಇದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅದನ್ನು ಜೀವಂತವಾಗಿ ಹಿಡಿಯುವ ಯತ್ನ ಸಫಲವಾಗುತ್ತಿಲ್ಲ. ಅದನ್ನು ಕೊಂದರೆ ಮಹಾರಾಷ್ಟ್ರದಲ್ಲಿ ‘ಅವನಿ’ ಪ್ರಕರಣದಲ್ಲಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾದಂತೆ, ನಮಗೂ ಟೀಕೆ ಎದುರಾಗಬಹುದು ಎಂಬ ಆತಂಕ ಕಾಡುತ್ತಿದೆ’  ಎಂದು ವಿಭಾಗೀಯ ಅರಣ್ಯ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 

 

‘12 ವರ್ಷದ ಈ ಹುಲಿಯು ಸದ್ಯ ಬೊರ್ಗೊರಾ ಟೀ ಎಸ್ಟೇಟ್‌ ಪ್ರದೇಶದಲ್ಲಿ ಭತ್ತದ ಹೊಲವೊಂದರಲ್ಲಿ ಅಡಗಿಕೊಂಡಿದೆ. ಹುಲಿಗೆ ‘ಎಫ್‌–03’ ಎಂಬ ರಹಸ್ಯ ಸಂಕೇತವನ್ನು ನೀಡಿದ್ದೇವೆ. ಯಾವುದೇ ಸಂದರ್ಭದಲ್ಲಿ ಅದು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಅದರಲ್ಲೂ, ಕೃಷಿ ಕಾರ್ಮಿಕರು ಆತಂಕ ಎದುರಿಸುತ್ತಿದ್ದಾರೆ. ಆದರೆ, ಭತ್ತದ ಹೊಲದಲ್ಲಿ ಕಾರ್ಯಾಚರಣೆ ಕಷ್ಟವಾಗಿರುವುದರಿಂದ ಸದ್ಯ ಸುಮ್ಮನಾಗಿದ್ದೇವೆ’ ಎಂದು ಅವರು ಹೇಳಿದರು. 

 

‘ಅರಣ್ಯ ಇಲಾಖೆಯು ಹುಲಿ ಹಿಡಿಯುವಲ್ಲಿ ವಿಫಲವಾಗುತ್ತಿದೆ. ಅವರು ಅದನ್ನು ಕೊಲ್ಲುವ ಬಗ್ಗೆ ನಮ್ಮಲ್ಲಿ ನಂಬಿಕೆ ಉಳಿದಿಲ್ಲ. ಇಲಾಖೆ ಸಿಬ್ಬಂದಿ  ಶೀಘ್ರವಾಗಿ ಸೆರೆ ಹಿಡಿಯದಿದ್ದರೆ,  ಅದನ್ನು ನಾವೇ ಕೊಲ್ಲುವುದು ಅನಿವಾರ್ಯವಾಗುತ್ತದೆ’ ಎಂದು ಸ್ಥಳೀಯ ಮುಖಂಡ ದಿಪೇನ್‌ ಬೊರೊ ಹೇಳುತ್ತಾರೆ. 

 

‘ಅರಣ್ಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ, ಎನ್‌ಎಚ್‌–15  ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಅಸ್ಸಾಂ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗುತ್ತದೆ’ ಅಸ್ಸಾಂನ ವಿದ್ಯಾರ್ಥಿ ಸಂಘಟನೆಯು ಎಚ್ಚರಿಕೆ ನೀಡಿದೆ.

 

2017ರ ಹುಲಿ ಗಣತಿ ಪ್ರಕಾರ, ಒರಾಂಗ್‌ ನ್ಯಾಷನಲ್‌ ಪಾರ್ಕ್‌ನ 78 ಕಿ.ಮೀ. ವ್ಯಾಪ್ತಿಯಲ್ಲಿ 24 ಹುಲಿಗಳು ಇವೆ. 

**

 

ಎರಡು ವರ್ಷಗಳ ಹಿಂದೆ ಇದೇ ರೀತಿ ಪ್ರಾಣಿಗಳನ್ನು ಸಾಯಿಸುತ್ತಿದ್ದ ಹುಲಿಯನ್ನು ವಿಷವಿಟ್ಟು ಸಾಯಿಸಿದ್ದೆವು. ಈ ಬಾರಿ ಅರಣ್ಯಇಲಾಖೆ ಸಿಬ್ಬಂದಿ ಮನವಿ ಮೇಲೆ ಸುಮ್ಮನಾಗಿದ್ದೇವೆ. ಈ ಹುಲಿ ಹಿಡಿಯದಿದ್ದರೆ ನಾವು ಮೊದಲಿನ ಕೆಲಸವನ್ನೇ ಮಾಡಬೇಕಾಗುತ್ತದೆ
- ದಿಪೇನ್‌ ಬೊರೊ, ಸ್ಥಳೀಯ ನಾಯಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !