ಕಲ್ಲಿದ್ದಲು ಹಗರಣ:ಮಾಜಿ ಕಾರ್ಯದರ್ಶಿ ಎಚ್‌ಸಿ.ಗುಪ್ತಾ ಸೇರಿ ಮೂವರಿಗೆ 3 ವರ್ಷ ಜೈಲು

7
ಮೂವರಿಗೂ ಷರತ್ತು ಬದ್ಧ ಜಾಮೀನು ಮಂಜೂರು

ಕಲ್ಲಿದ್ದಲು ಹಗರಣ:ಮಾಜಿ ಕಾರ್ಯದರ್ಶಿ ಎಚ್‌ಸಿ.ಗುಪ್ತಾ ಸೇರಿ ಮೂವರಿಗೆ 3 ವರ್ಷ ಜೈಲು

Published:
Updated:

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಪ್ರಕರಣದಲ್ಲಿ ಕೇಂದ್ರ ಕಲ್ಲಿದ್ದಲು ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ ಸೇರಿ ಮೂವರು ಅಧಿಕಾರಿಗಳಿಗೆ ದೆಹಲಿ ಕೋರ್ಟ್‌ ಬುಧವಾರ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಎಚ್‌.ಸಿ.ಗುಪ್ತಾ, ಕೆ.ಎಸ್‌.ಕ್ರೋಫಾ ಹಾಗೂ ಕೆ.ಸಿ.ಸಮೀರಾಗೆ ಮೂರು ವರ್ಷ ಜೈಲು ಶಿಕ್ಷೆಯ ಜೊತೆಗೆ ತಲಾ ₹50 ಸಾವಿರ ದಂಡ ವಿಧಿಸಿದೆ.  ಜೈಲು ಶಿಕ್ಷೆ ಪ್ರಮಾಣ ನಾಲ್ಕು ವರ್ಷಕ್ಕಿಂತ ಕಡಿಮೆ ಇರುವುದರಿಂದ ಮೂವರಿಗೂ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. 

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್, ಕಲ್ಲಿದ್ದಲು ಹಗರಣದ ಇತರೆ ಆರೋಪಿಗಳಾದ ವಿಕಾಸ್‌ ಮೆಟಲ್ಸ್‌ ಮತ್ತು ಪವರ್‌ ಲಿಮಿಟೆಡ್‌ನ ಎಂಡಿ ವಿಕಾಸ್‌ ಪಾಟನೀ ಹಾಗೂ ಕಂಪನಿಯ ಪಾಲುದಾರ ಆನಂದ್‌ ಮಲ್ಲಿಕ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಸಂಸ್ಥೆಗೆ ₹1 ಲಕ್ಷ ದಂಡ ವಿಧಿಸಲಾಗಿದೆ. 

ಆರೋಪಿಗಳಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಸಂಸ್ಥೆಗೆ ಭಾರಿ ಮೊತ್ತದ ದಂಡ ವಿಧಿಸುವಂತೆ ಸಿಬಿಐ ಕೋರ್ಟ್‌ಗೆ ಮನವಿ ಮಾಡಿತ್ತು. ನ.30ರಂದು ನ್ಯಾಯಾಲಯ ಗುಪ್ತಾ ಸೇರಿದಂತೆ ಐವರನ್ನು ಮತ್ತು ವಿಕಾಸ್‌ ಮೆಟಲ್ಸ್‌ ಮತ್ತು ಪವರ್‌ ಲಿಮಿಟೆಡ್‌ ಕಂಪೆನಿಯನ್ನು ದೋಷಿ ಎಂದು ತೀರ್ಪು ನೀಡಿತ್ತು.

ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣದ ಮೊಯಿರಾ ಮತ್ತು ಮಧುಜೋರ್‌ನ ಕಲ್ಲಿದ್ದಲ್ಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ 2012ರ ಸೆಪ್ಟೆಂಬರ್‌ನಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !