ಭಾನುವಾರ, ಜೂನ್ 26, 2022
29 °C
ಸೈನಿಕರಿಗೆ ಕಠಿಣ ನಿಯಾಮವಳಿ ಜಾರಿ

ಮರೆಯಲ್ಲಿ ಅಡಗಿ ಉಗ್ರರ ದಾಳಿ: ಸೇನೆಗೆ ಹೊಸ ಚಿಂತೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಶ್ರೀನಗರ: ಕಾಶ್ಮೀರದ ಕಣಿವೆಯಲ್ಲಿ ಜೈಷೆ – ಮೊಹಮ್ಮದ್‌ ಸಂಘಟನೆಯ ಭಯೋತ್ಪಾದಕರು ಮರೆಯಲ್ಲಿ ನಿಂತು ಸೈನಿಕರ ಮೇಲೆ ದಾಳಿ ನಡೆಸುತ್ತಿರುವುದು ಗಡಿಭದ್ರತಾ ಪಡೆಗೆ ಹೊಸ ತಲೆನೋವಾಗಿದೆ. ಸೆಪ್ಟೆಂಬರ್‌ ಮದ್ಯಭಾಗದಿಂದ ಈ ರೀತಿಯ ದಾಳಿಗೆ ಮೂವರು ಸೈನಿಕರು ಹುತಾತ್ಮರಾಗಿದ್ದು, ಇದಕ್ಕೆ ಪ್ರತಿದಾಳಿ ನಡೆಸಲು ಹೊಸ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್‌ 18ರಂದು ಪುಲ್ವಾಮಾದ ನೆವಾದಲ್ಲಿ ನಡೆದ ದಾಳಿಯಲ್ಲಿ ಕೇಂದ್ರಿಯ ಪೊಲೀಸ್‌ ಮೀಸಲು ಪಡೆಯ ಸಿಬ್ಬಂದಿ ಗಾಯಗೊಂಡಿದ್ದರು. ಅದೇ ರೀತಿ ತ್ರಾಲ್ ಹಾಗೂ ನೌಗಾಮ್‌ನಲ್ಲಿ ನಡೆದ ದಾಳಿಗೆ ಸಶಸ್ತ್ರಸೀಮಾಬಲದ ಒಬ್ಬ ಯೋಧ ಹಾಗೂ ಸಿಆರ್‌ಪಿಎಫ್‌ನ ಒಬ್ಬ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು.

ಜೈಷೆ – ಮೊಹಮ್ಮದ್‌ ಸಂಘಟನೆಯ ಎರಡು ತಂಡಗಳು ಸಕ್ರಿಯವಾಗಿದ್ದು, ಸೆಪ್ಟೆಂಬರ್‌ನಲ್ಲಿ ಇಬ್ಬರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಉಗ್ರರು ಪುಲ್ವಾಮಾದಲ್ಲಿ ಅಡಗಿದ್ದು, ಸ್ಥಳೀಯರ ಬೆಂಬಲದೊಂದಿಗೆ ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ.

‘ಈ ಭಯೋತ್ಪಾದಕರಿಗೆ ಮರೆಯಲ್ಲಿ ನಿಂತು ದಾಳಿ ನಡೆಸುವ ತರಬೇತಿಯನ್ನು ಐಎಸ್‌ಐ ನೀಡಿದೆ. ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನೆ ಬಳಸಿದ್ದ ಎಂ–4 ಕಾರ್ಬೈನ್‌ ಬಂದೂಕುಗಳನ್ನು ಬಳಸಿ ದಾಳಿ ನಡೆಸುತ್ತಿದ್ದಾರೆ. ಸೈನಿಕರು ಸ್ನೇಹಿತರು, ಸಂಬಂಧಿಕರ ಜೊತೆ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುವ ವೇಳೆ ಅದರ ಬೆಳಕನ್ನು ಗುರುತಿಸಿ, ಕಡಿದಾದ ಪರ್ವತ ಶ್ರೇಣಿ, ಮರಗಳ ಮರೆನಿಂತು ದಾಳಿ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ರಾತ್ರಿ ವೇಳೆ ಗಸ್ತು ತಿರುಗುವ ವೇಳೆ ಮೊಬೈಲ್‌ ಬಳಕೆ, ಭಯೋತ್ಪಾದಕರಿಂದ ದಾಳಿಯಿಂದ ಎಚ್ಚರ ವಹಿಸುವ ಕುರಿತಂತೆ ನಿಯಾಮವಳಿಗಳನ್ನು ಬಿಡುಗಡೆಗೊಳಿಸಲಾಗಿದೆ. 

ಎಂ–4 ಕಾರ್ಬೈನ್‌ ವಿಶೇಷತೆ: ಎಂ–4 ಕಾರ್ಬೈನ್‌ ಬಂದೂಕುಗಳು ಅತ್ಯಾಧುನಿಕ ಟೆಲಿಸ್ಕೋಪ್‌ ಹೊಂದಿವೆ. ರಾತ್ರಿ ಕಣ್ಗಾವಲು ಸೌಲಭ್ಯ ಬಳಸಿ, ಸೇನಾಯೋಧರು, ಸೇನಾಕ್ಯಾಂಪ್‌ಗಳ ಮೇಲೆ ನಿಖರ ದಾಳಿ ನಡೆಸುತ್ತಿದ್ದಾರೆ. ಸುಮಾರು 500ರಿಂದ 600 ಮೀಟರ್‌ ದೂರದಲ್ಲಿ ನಿಂತು ದಾಳಿ ನಡೆಸಲು ಇದು ಸಹಕಾರಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು