ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಮಾ ಜಾರಿ ಬೆದರಿಕೆಗೆ ಬಗ್ಗುವುದಿಲ್ಲ

ಸಂಧಾನಕ್ಕೆ ಒಪ್ಪಿದರೆ ಮುಷ್ಕರ ಇಲ್ಲ: ಬಿಎಂಆರ್‌ಸಿಎಲ್‌ ನೌಕರರ ಸಂಘ ಸ್ಪಷ್ಟನೆ
Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿ ಮಾಡಿದರೂ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ನೌಕರರ ಸಂಘ ಸ್ಪಷ್ಟಪಡಿಸಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಇದೇ 22ಕ್ಕೆ ಮುಷ್ಕರ ನಡೆಸಲು ಬಿಎಂಆರ್‌ಸಿಎಲ್‌ ನೌಕರರ ಸಂಘ ತೀರ್ಮಾನಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ರಾಷ್ಟ್ರೀಯ ಮಜ್ದೂರ್‌ ಕಾಂಗ್ರೆಸ್‌ನ (ಇಂಟಕ್‌) ರಾಜ್ಯ ವಿಭಾಗದ ಕಾನೂನು ಸಲಹೆಗಾರ ಡಿ.ಲೀಲಾಕೃಷ್ಣನ್‌, ‘ಮುಷ್ಕರದ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಅವರಿಗೆ ಮಾಹಿತಿ ನೀಡಿದ್ದೇವೆ. ಆದರೆ, ಅವರು ಸಂಧಾನಕ್ಕೆ ಮುಂದಾಗುವ ಬದಲು ಎಸ್ಮಾ ಜಾರಿಮಾಡುವುದಾಗಿ ಹೇಳುತ್ತಿದ್ದಾರೆ. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸುವ ಬದಲು ಮುಷ್ಕರಕ್ಕೆ ಪ್ರೇರೇಪಿಸುತ್ತಿದ್ದಾರೆ’ ಎಂದರು.

‘ನಿಗಮದಲ್ಲಿ ಎಸ್ಮಾ ಜಾರಿಗೆ ಕೋರ್ಟ್‌ ಕಳೆದ ವರ್ಷವೇ ತಡೆ ನೀಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನಿಗಮಕ್ಕೆ ಈ ಎಸ್ಮಾ ಅನ್ವಯ ಆಗುವುದಿಲ್ಲ’ ಎಂದರು.

ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿಗಮದ ಸಿಬ್ಬಂದಿ 2017ರ ಜುಲೈ 7ರಂದು ಮುಷ್ಕರ ನಡೆಸಿದ್ದರು. ಅಂದಿನ ಸಂಧಾನ ಸಭೆಯಲ್ಲಿ ಬೇಡಿಕೆ ಈಡೇರಿಸಲು ನಿಗಮ ಒಪ್ಪಿದ ಬಳಿಕವಷ್ಟೇ ಸಿಬ್ಬಂದಿ ಮುಷ್ಕರ ಹಿಂದಕ್ಕೆ ಪಡೆದಿದ್ದರು. ಆದರೆ, ಈವರೆಗೂ ಅದನ್ನು ಈಡೇರಿಸಿಲ್ಲ. ಮೆಟ್ರೊ ಸಿಬ್ಬಂದಿಯ ಕಾರ್ಮಿಕ ಸಂಘಟನೆಗೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆಗೂ ಬಿಎಂಆರ್‌ಸಿಎಲ್‌ ಒಪ್ಪಿಲ್ಲ ಎಂದರು.

‘ನಿಗಮದ ಕಾರ್ಯಾಚರಣೆ ವಿಭಾಗದ ಕೆಲವು ಸಿಬ್ಬಂದಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವುದೇ ಬಡ್ತಿ ನೀಡಿಲ್ಲ. ಸೆಕ್ಷನ್‌ ಎಂಜಿನಿಯರ್‌ಗಳಿಗೆ ಸಹಾಯಕ ವ್ಯವಸ್ಥಾಪಕರಾಗಿ ಬಡ್ತಿ ನೀಡಲು ಅವಕಾಶವಿದೆ. ಆದರೂ ನಿಗಮವು ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ’ ಎಂದು ಇಂಟಕ್‌ ರಾಜ್ಯ ವಿಭಾಗದ ಪ್ರಧಾನ ಕಾರ್ಯದರ್ಶಿ ಟಿ.ಆರ್‌. ಉದಯ್‌ ತಿಳಿಸಿದರು.

‘ಬಿಎಂಆರ್‌ಸಿಎಲ್‌ ಕೇಂದ್ರ ಕಚೇರಿಯ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ. ಆದರೆ, ಕಾರ್ಯಾಚರಣೆ ವಿಭಾಗದ ಸಿಬ್ಬಂದಿಗೆ ಸವಲತ್ತು ನೀಡುವಾಗ ತಾರತಮ್ಯ ಮಾಡಲಾಗುತ್ತಿದೆ’ ಎಂದರು.

‘ನಿಗಮದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಹರಿಸ್ವಾಮಿ ಅವರು ಮೂರು ಬಾರಿ ಬಡ್ತಿ ಪಡೆದಿದ್ದಾರೆ. ಅವರು ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ದೂರು ನೀಡುವವರಿಗೆಲ್ಲರಿಗೂ ನೋಟಿಸ್‌ ನೀಡಿ ಬೆದರಿಸುತ್ತಿದ್ದಾರೆ’ ಎಂದು ದೂರಿದರು.

ಹೆರಿಗೆ ರಜೆ ಕೇಳಿದ ಸಿಬ್ಬಂದಿಯೊಬ್ಬರಿಗೆ, ‘ಯಾವಾಗ ಮಗು ಮಾಡಿಕೊಳ್ಳಬೇಕೆಂಬ ಪರಿಜ್ಞಾನ ಇಲ್ಲವೇ’ ಎಂದಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಊಟಕ್ಕೂ ವಿರಾಮವಿಲ್ಲ ಎಂದರು.

‘ಪ್ರಯಾಣಿಕರ ಪ್ರಾಣಕ್ಕೆ ಅಪಾಯ’
ಬಿಎಂಆರ್‌ಸಿಎಲ್‌ ‘ಹೆಚ್ಚುವರಿ ತುರ್ತು ತಂಡ’ವೊಂದನ್ನು ರೂಪಿಸಿದ್ದು, ಅದರಲ್ಲಿ‌ರುವವರಿಗೆ ರೈಲು ಚಲಾಯಿಸಿದ ಅನುಭವವೇ ಇಲ್ಲ. ಸಿಬ್ಬಂದಿ ಮುಷ್ಕರ ನಡೆಸಿದಾಗ ಇವರನ್ನು ಬಳಸಿಕೊಂಡು ಸೇವೆ ಒದಗಿಸಲು ಮುಂದಾಗಿಸುವ ನಿಗಮ ಪ್ರಯಾಣಿಕರ ಜೀವದ ಜೊತೆ ಆಟವಾಡುತ್ತಿದೆ’  ಎಂದು ಇಂಟಕ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥ್‌ ಆರೋಪಿಸಿದರು.

‘ಒಟ್ಟು 62 ಜನರ ತಂಡದಲ್ಲಿ 22 ಮಂದಿ ರೈಲು ಚಾಲಕರಿದ್ದಾರೆ. ರಾತ್ರಿ ಹತ್ತು ಗಂಟೆಯ ನಂತರ ಅವರಿಗೆ ಚಾಲನಾ ತರಬೇತಿ ನೀಡಲಾಗುತ್ತಿದೆ. ಇಲ್ಲಿಯವರೆಗೂ ಒಮ್ಮೆಯೂ ಅವರು ಸಮರ್ಪಕವಾಗಿ ರೈಲು ಚಲಾಯಿಸಿಲ್ಲ. ಸುರಂಗದಲ್ಲಿ 10 ನಿಮಿಷ ರೈಲು ನಿಂತರೂ ಪ್ರಯಾಣಿಕರ ಪ್ರಾಣಕ್ಕೆ ಅಪಾಯ. ಆ ವೇಳೆ ಏನೆಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರಲ್ಲಿ ಯಾರಿಗೂ ತಿಳಿದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT