ಭಾನುವಾರ, ಆಗಸ್ಟ್ 25, 2019
21 °C

ದೆಹಲಿ: 29ರಿಂದ ಮಹಿಳೆಯರಿಗೆ ಸಾರಿಗೆ ಪ್ರಯಾಣ ಸೇವೆ ಉಚಿತ

Published:
Updated:
Prajavani

ನವದೆಹಲಿ: ರಾಜಧಾನಿಯಲ್ಲಿ ಅಕ್ಟೋಬರ್‌ 29ರಿಂದ ಜಾರಿಗೆ ಬರುವಂತೆ ದೆಹಲಿ ಸರ್ಕಾರದ ನಿರ್ವಹಣೆಯ ಸಾರಿಗೆ ಬಸ್ಸುಗಳಲ್ಲಿ (ಡಿಟಿಸಿ) ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಲಭ್ಯವಾಗಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಗುರುವಾರ ಈ ವಿಷಯ ಪ್ರಕಟಿಸಿದರು.

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಮಾಹಿತಿ ನೀಡಿದರು. ಮೆಟ್ರೊ ರೈಲಿಗೂ ಅನ್ವಯವಾಗುವಂತೆ ಈ ಸೌಲಭ್ಯವನ್ನು ನೀಡಲಾಗುವುದು ಎಂದು ಎರಡು ತಿಂಗಳ ಹಿಂದೆ ಭರವಸೆ ನೀಡಿದ್ದರು. ಆದರೆ, ಸದ್ಯ ಮೆಟ್ರೊಗೆ ಈ ಸೌಲಭ್ಯ ಪ್ರಕಟಿಸಿಲ್ಲ.

‘ರಕ್ಷಾಬಂಧನದ ದಿನದಂದು ನನ್ನ ಸೋದರಿಯರಿಗೆ ಕೊಡುಗೆ ನೀಡಲು ಬಯಸುತ್ತೇನೆ. ಎಲ್ಲ ಡಿಟಿಸಿ ಮತ್ತು ಕ್ಲಸ್ಟರ್‌ ಸೇವೆಯ ಬಸ್ಸುಗಳಲ್ಲಿ ಭಯ್ಯಾ ದೂಜ್‌ ದಿನವಾದ ಅ.29ರಿಂದ ಡಿಟಿಸಿಯಲ್ಲಿ ಉಚಿತ ಪ್ರಯಾಣ ಸೇವೆ ಸಿಗಲಿದೆ. ಇದು, ಅವರಿಗೆ ಸುರಕ್ಷತೆಯ ಭರವಸೆಯನ್ನು ನೀಡಲಿದೆ’ ಎಂದು ಕೇಜ್ರಿವಾಲ್‌ ತಿಳಿಸಿದರು.

ಬಳಿಕ ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ‘ಈ ಕ್ರಮವು ಮಹಿಳೆಯರ ಸುರಕ್ಷತೆ, ಸಬಲೀಕರಣ ಹಾಗೂ ಅವರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಉತ್ತಮ ನಡೆ ಆಗಲಿದೆ’ ಎಂದು ಆಶಿಸಿದ್ದಾರೆ.

ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಆಮ್ ಅದ್ಮಿ ಪಕ್ಷ (ಎಎಪಿ) ಮೂರನೇ ಸ್ಥಾನಗಳಿಸಿತ್ತು. ಕೇಜ್ರಿವಾಲ್‌ ಅವರ ಈ ಕ್ರಮ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಸೆಳೆಯುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.

ಆದರೆ, ಉಚಿತ ಪ್ರಯಾಣ ಸೇವೆಯನ್ನು ಮೆಟ್ರೊಗೆ ಅನ್ವಯಿಸಿ ವಿಸ್ತರಿಸಿಲ್ಲ. ಇದಕ್ಕೆ ಕೇಂದ್ರದ ನಿರಾಸಕ್ತಿ ಕಾರಣ ಎನ್ನಲಾಗಿದೆ. ದೆಹಲಿ ಮೆಟ್ರೊದಲ್ಲಿ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಮಾನ ಪಾಲು ಹೊಂದಿದೆ. ಅಲ್ಲದೆ, ಮಹಿಳೆಯರಿಗೆ ಉಚಿತ ಸೇವೆ ಒದಗಿಸುವ ಪ್ರಸ್ತಾಪಕ್ಕೆ ದೆಹಲಿ ಮೆಟ್ರೊದ ಮಾಜಿ ಅಧ್ಯಕ್ಷ ಎಂ.ಶ್ರೀಧರನ್‌ ವಿರೋಧಿಸಿದ್ದರು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಮೆಟ್ರೊ ಸೇರಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವುದರಿಂದ ಬೊಕ್ಕಸಕ್ಕೆ ₹ 700–800 ಕೋಟಿ ಹೊರೆ ಬೀಳಲಿದೆ. ಇದನ್ನು ಪೂರ್ಣ ದೆಹಲಿ ಸರ್ಕಾರವೇ ಭರಿಸಲಿದೆ’ ಎಂದು ಈ ಮೊದಲು ಕೇಜ್ರಿವಾಲ್‌ ಪ್ರಕಟಿಸಿದ್ದರು.

Post Comments (+)