ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಜಂಕ್‌ಫುಡ್‌ಗೆ ಬ್ರೇಕ್‌: ನಿಯಮ ಸಿದ್ಧ

ಆರೋಗ್ಯಕರ ಆಹಾರ ಕ್ರಮ ಅನುಸರಿಸಲು ಆಹಾರ ಸುರಕ್ಷತಾ ಪ್ರಾಧಿಕಾರ ಸೂಚನೆ
Last Updated 5 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಕೋಲ್ಕತ್ತ: ಅಧಿಕ ಪ್ರಮಾಣದ ಉಪ್ಪು, ಕೊಬ್ಬು ಹಾಗೂ ಸಕ್ಕರೆ ಅಂಶವಿರುವ ಜಂಕ್‌ ಫುಡ್‌ಗಳನ್ನು ಶಾಲಾ ಆವರಣದಲ್ಲಿ ಪೂರೈಕೆ ಅಥವಾ ಮಾರಾಟವನ್ನು ನಿಷೇಧಿಸುವ ಪ್ರಸ್ತಾವವನ್ನು ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮುಂದಿಟ್ಟಿದೆ.

ಶಾಲೆಗಳಲ್ಲಿ ಆಹಾರ ವಿತರಿಸುವ ಶಿಕ್ಷಣ ಸಂಸ್ಥೆಗಳು ಮತ್ತು ಆಹಾರ ಪೂರೈಕೆದಾರರು ಪರವಾನಗಿ ಪಡೆಯಬೇಕು ಎಂದು ಸೂಚಿಸಿದೆ. ಕರಡು ನಿಯಮಾವಳಿಗಳನ್ನು ಪ್ರಾಧಿಕಾರ ಪ್ರಕಟಿಸಿದ್ದು, ಡಿಸೆಂಬರ್ 3ರೊಳಗೆ ಸಾರ್ವಜನಿಕರಿಗೆ ಪ್ರತಿಕ್ರಿಯೆ ನೀಡಲು ಅವಕಾಶವಿದೆ.

ಶಾಲೆಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳಲು ಅಗತ್ಯ ಮಾರ್ಗಸೂಚಿಗಳನ್ನು ರಚಿಸುವಂತೆ ಆಹಾರ ಪ್ರಾಧಿಕಾರಕ್ಕೆ ದೆಹಲಿ ಹೈಕೋರ್ಟ್ 2015ರಲ್ಲಿ ಸೂಚಿಸಿತ್ತು.

ಪರವಾನಗಿ ಕಡ್ಡಾಯ ಮಾಡುವುದರಿಂದ ಶಾಲೆಗಳಲ್ಲಿ ನೈರ್ಮಲ್ಯಯುಕ್ತ ಆಹಾರ ಪೂರೈಕೆಯಾಗುವುದನ್ನು ಖಚಿತಪಡಿಸಿಕೊಳ್ಳಬಹುದು. ಶಾಲಾ ಕ್ಯಾಂಟೀನ್ ಮತ್ತು ಮಧ್ಯಾಹ್ನದ ಬಿಸಿಯೂಟ ಪೂರೈಸುವವರಿಗೂ ಪರವಾನಗಿ ನಿಯಮಗಳು ಅನ್ವಯವಾಗುತ್ತವೆ.

ಆಹಾರ ತಯಾರಿಕೆ ಸಂಸ್ಥೆಗಳು ಕಡಿಮೆ ಪೌಷ್ಟಿಕಾಂಶದ ತಿಂಡಿಗಳನ್ನು ಶಾಲಾ ಸಂಕೀರ್ಣದ ಒಳಗೆ ಪ್ರಚಾರ ಮಾಡುವಂತಿಲ್ಲ. ಉತ್ಪನ್ನಗಳನ್ನು ಜಾಹೀರಾತು ಬ್ಯಾನರ್‌ನಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ, ಬಸ್‌ಗಳ ಮೇಲೆ ಪ್ರಕಟಿಸುವಂತಿಲ್ಲ. ಬಹುಮಾನವಾಗಿ ನೀಡುವಂತಿಲ್ಲ.ಮಕ್ಕಳಲ್ಲಿ ಹೆಚ್ಚು ತಿನ್ನುವ ವ್ಯಸವನ್ನು ತಡೆಯಲು ನಿಗದಿತ ಅಳತೆಯ ಪೊಟ್ಟಣ ತಯಾರಿಕೆ, ಪೌಷ್ಟಿಕಾಂಶಯುಕ್ತ ಹೊಸ ತಿಂಡಿಗಳನ್ನು ತಯಾರಿಸುವ ಮೂಲಕ ಸುಧಾರಣೆ ತರುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ.

ಕರಡು ನಿಯಮಾವಳಿಯ ಅಂಶಗಳು
* ಅಧಿಕ ಪ್ರಮಾಣದ ಉಪ್ಪು, ಕೊಬ್ಬು ಹಾಗೂ ಸಕ್ಕರೆ ಅಂಶವಿರುವ ಆಹಾರವನ್ನುಶಾಲೆಯಿಂದ 50 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮಾಡುವಂತಿಲ್ಲ
* ಕಡಿಮೆ ಪೌಷ್ಠಿಕಾಂಶವಿರುವ ಕೋಲಾ, ಆಲೂ ಚಿಪ್ಸ್ ಮುಂತಾದ ಆಹಾರದ ಉಚಿತ ಸ್ಯಾಂಪಲ್ ವಿತರಣೆ ಹಾಗೂ ನೇರ ಮಾರಾಟಕ್ಕೆ ನಿಷೇಧ
* ತಿಂಡಿಯಲ್ಲಿ (ಸ್ನ್ಯಾಕ್ಸ್) 100–150 ‌‌‌‌ಕ್ಯಾಲರಿ,ಊಟದಲ್ಲಿ 300–350 ಕ್ಯಾಲರಿ ಇರಬೇಕು
* 15–20 ಗ್ರಾಂ ಪ್ರೊಟೀನ್ ಮತ್ತು ಸೂಕ್ಷ್ಮ ಪೋಷಕಾಂಶ (ಹಣ್ಣು, ತರಕಾರಿ) ಕಡ್ಡಾಯ‌
* ನಿಯಮಾವಳಿ ಪಾಲನೆ ಮೇಲೆ ನಿಗಾ ವಹಿಸಲು ಕಣ್ಗಾವಲು ಘಟಕಗಳನ್ನು ಪ್ರತಿ ಶಾಲೆಯಲ್ಲೂ ತೆರೆಯಬೇಕು

**
ಮಾರ್ಗಸೂಚಿ ಕ್ರಮ ಸರಿಯಾಗಿವೆ. ಜಂಕ್ ಫುಡ್‌ ನಿಷೇಧಿಸಿದರೆ, ಅದರ ಗೀಳು ಅಂಟಿಸಿಕೊಂಡಿರುವ ಮಕ್ಕಳು ಪೌಷ್ಟಿಕ ಆಹಾರದದಲ್ಲೇ ರುಚಿ ಕಾಣುತ್ತಾರೆ.
-ಕೆ.ಶ್ರೀನಾಥ್‌ ರೆಡ್ಡಿ,ಭಾರತೀಯ ಸಾರ್ವಜನಿಕ ಆರೋಗ್ಯ ಪ್ರಾಧಿಕಾರದ ಅಧ್ಯಕ್ಷ

**

ಶಾಲಾಮಕ್ಕಳ ಅಹಾರದಲ್ಲಿ ಅಪೌಷ್ಟಿಕ ಅಂಶ ಹೆಚ್ಚಿದೆ ಎಂದು ದಾಖಲೆ ಹೇಳುತ್ತವೆ. ಆರೋಗ್ಯಕರ ಆಹಾರ ಕ್ರಮ ಪಾಲನೆಗೆ ಮಾರ್ಗದರ್ಶಿ ಸೂತ್ರ ಅಗತ್ಯ.
-ಪೂರ್ಣಿಮಾ ಮೆನನ್, ಸಂಶೋಧಕಿ, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT