ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಕ್ರಮ

ಕೊರೊನಾ: ಆರೋಗ್ಯ ಸಚಿವಾಲಯದಿಂದ ಯೋಜನೆ ಸಿದ್ಧ
Last Updated 5 ಏಪ್ರಿಲ್ 2020, 20:04 IST
ಅಕ್ಷರ ಗಾತ್ರ

ನವದೆಹಲಿ: ‘ಹೈ ರಿಸ್ಕ್‌’ ಎಂದು ಗುರುತಿಸಲಾದ ಪ್ರದೇಶಗಳ ಮೇಲೆ ತಿಂಗಳ ಮಟ್ಟಿಗೆ ಸಂಪೂರ್ಣ ದಿಗ್ಬಂಧನ ಹೇರುವುದೂ ಸೇರಿದಂತೆ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಆರೋಗ್ಯ ಸಚಿವಾಲಯ ಮತ್ತಷ್ಟು ಕಠಿಣ ಕ್ರಮಗಳನ್ನು ಒಳಗೊಂಡ ಯೋಜನೆಯನ್ನು ರೂಪಿಸಿದೆ.

ಸದ್ಯ 274 ಜಿಲ್ಲೆಗಳಲ್ಲಿ ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಸೋಂಕು ಹರಡುವ ಸರಪಳಿಯನ್ನು ತುಂಡರಿಸುವ ಉದ್ದೇಶದಿಂದ ‘ಜನತಾ ಕರ್ಫ್ಯೂ’ವನ್ನೂ ಹೇರಲಾಗಿತ್ತು. ಅದಾದ ನಂತರವೂ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಬದಲಾಗಿ, ಪ್ರಕರಣಗಳಲ್ಲಿ ಮೂರುಪಟ್ಟು ಹೆಚ್ಚಳ ಕಂಡು ಬಂದ ಕಾರಣ ಮತ್ತಷ್ಟು ಬಿಗಿ ಕ್ರಮಗಳಿಗೆ ಕೇಂದ್ರ ಮುಂದಾಗಿದೆ.

‘ವ್ಯಕ್ತಿಯೊಬ್ಬರಲ್ಲಿ ಕೋವಿಡ್‌–19 ಇರುವುದನ್ನು ದೃಢಪಡಿಸಲು ತೀರ ಇತ್ತೀಚೆಗೆ ನಡೆದ ಪರೀಕ್ಷೆಯನ್ನು ಪರಿಗಣಿಸಬೇಕು. ಈ ಪ್ರಕರಣದ ಪರೀಕ್ಷೆ ನಡೆದು ನಾಲ್ಕು ವಾರಗಳ ನಂತರ, ಮತ್ತೆ ಪ್ರಕರಣಗಳು ವರದಿಯಾಗದಿದ್ದರೆ ಮಾತ್ರ ಕಠಿಣವಾದ ದಿಗ್ಬಂಧನವನ್ನು ಸಡಿಲಗೊಳಿಸಲಾಗುತ್ತದೆ’ ಎಂದು ಸಚಿವಾಲಯ ಹೇಳಿದೆ.

ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದಂತೆ ‘ಹೈರಿಸ್ಕ್‌’ ಎಂದು ಗುರುತಿಸಿದ ಪ್ರದೇಶಗಳಿಂದ ಹೊರಗೆ ಮತ್ತು ಆ ಪ್ರದೇಶಗಳಿಗೆ ಜನರ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಎಲ್ಲ ಶಂಕಿತ ವ್ಯಕ್ತಿಗಳನ್ನು ಕೋವಿಡ್‌–19 ಚಿಕಿತ್ಸೆಗಾಗಿ ಗುರುತಿಸಿರುವ ಆಸ್ಪತ್ರೆಗಳ ಐಸೋಲೇಷನ್‌ ವಾರ್ಡ್‌ಗಳಲ್ಲಿ ಇರಿಸುವುದು ಈ ಯೋಜನೆಯಲ್ಲಿರುವ ಕೆಲವು ಅಂಶಗಳು.

ಶಂಕಿತ ವ್ಯಕ್ತಿಯ ಗಂಟಲ ದ್ರವವನ್ನು ಒಳಗೊಂಡ ಮಾದರಿಯನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಎರಡೂ ಬಾರಿ ನೆಗೆಟಿವ್‌ ಬಂದರೆ ಮಾತ್ರ ಅಂಥವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದು. ಸೌಮ್ಯರೂಪದ ಲಕ್ಷಣಗಳು ಇದ್ದರೆ ಅವರನ್ನು ಕ್ರೀಡಾಂಗಣಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ.

ಇನ್ನು, ಸಾಧಾರಣವಾದ ರೋಗ ಲಕ್ಷಣಗಳು ಕಂಡು ಬರುವ ವ್ಯಕ್ತಿಗಳನ್ನು ಕೋವಿಡ್‌–19 ಚಿಕಿತ್ಸೆಗಾಗಿ ಗುರುತಿಸಿದ ಆಸ್ಪತ್ರೆಗಳಲ್ಲಿ ಹಾಗೂ ತೀವ್ರಸ್ವರೂಪದ ಲಕ್ಷಣಗಳನ್ನು ಹೊಂದಿದವರನ್ನು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇರುವ ಆಸ್ಪತ್ರೆಗಳಿಗೆ ದಾಖಲಿಸುವಂತಹ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ.

‘ಬಫರ್ ವಲಯ’ಗಳನ್ನು ಗುರುತಿಸಿ, ಈ ಪ್ರದೇಶಗಳಲ್ಲಿ ಶಾಲಾ–ಕಾಲೇಜುಗಳು, ಕಚೇರಿಗಳನ್ನು ಬಂದ್‌ ಮಾಡಬೇಕು. ಅಗತ್ಯ ಸೇವೆಗಳಿಗೆ ಹೊರತುಪಡಿಸಿ, ಯಾವುದೇ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಗೆ ಅವಕಾಶವನ್ನೂ ನೀಡುವುದಿಲ್ಲ ಎಂಬಅಂಶಗಳಿಗೂ ಈ ಯೋಜನೆಯಲ್ಲಿ ಒತ್ತು ನೀಡಲಾಗಿದೆ.

ಕೋವಿಡ್‌–19 ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಬೇರೆ ಬೇರೆ ಸ್ವರೂಪದ ದಿಗ್ಬಂಧನದ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಬೇಕು. ಹಾಟ್‌ಸ್ಪಾಟ್‌ ಎಂದು ಘೋಷಿಸಿರುವ ಪ್ರದೇಶಗಳಲ್ಲಿ ಗರಿಷ್ಠಮಟ್ಟದ ದಿಗ್ಬಂಧನಕ್ಕೆ ಈ ಯೋಜನೆ ಅವಕಾಶ ನೀಡುತ್ತದೆ.

‘ಸಾಮಾಜಿಕ ಅಂತರ ಪರಿಣಾಮಕಾರಿ’
ಕೊರೊನಾ ಸೋಂಕಿನ ಪ್ರಸರಣ ತಡೆಯುವಲ್ಲಿ ಚಿಕಿತ್ಸೆ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಚೀನಾದಲ್ಲಿ ಈ ತಂತ್ರಕ್ಕೆ ಮೊರೆ ಹೋಗಲಾಗಿತ್ತು’ ಎಂಬ ಅಂಶಕ್ಕೆ ಸಚಿವಾಲಯ ಒತ್ತು ನೀಡಿದೆ.

ವೈದ್ಯರು, ನರ್ಸ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿ ತಮ್ಮ ಕಾರ್ಯಕ್ಷೇತ್ರದಲ್ಲಿರುವಾಗ ಮೂರು ಪದರಿನ ಸರ್ಜಿಕಲ್‌ ಮಾಸ್ಕ್‌, ಕೈಗವಸುಗಳನ್ನು ಧರಿಸುವುದು ಅಷ್ಟೇ ಮುಖ್ಯ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT