ಗುರುವಾರ , ಡಿಸೆಂಬರ್ 12, 2019
16 °C

ಭಯೋತ್ಪಾದನೆಯತ್ತ ವಿಶ್ವದ ಗಮನ ಸೆಳೆದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಸಾಕಾ (ಪಿಟಿಐ): ರಷ್ಯಾ ಪ್ರಧಾನಿ ವ್ಲಾಡಿಮಿರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜೊತೆ ಶುಕ್ರವಾರ ತ್ರಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಯೋತ್ಪಾದನೆ, ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿರುವ ಮೋದಿ, ಈ ಇಬ್ಬರು ನಾಯಕರೊಡನೆ ಅನೌಪಚಾರಿಕ ‘ರಷ್ಯಾ– ಭಾರತ– ಚೀನಾ’ (ಆರ್‌ಐಸಿ) ಸಭೆ ನಡೆಸಿದರು. ಸಭೆಯ ನಂತರ ನೀಡಿದ ಜಂಟಿ ಹೇಳಿಕೆಯಲ್ಲಿ, ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಾಯಕರು ಖಂಡಿಸಿದರು.

ಆರಂಭದಲ್ಲಿ ಮಾತನಾಡಿದ ಮೋದಿ ಅವರು, ‘ಜಾಗತಿಕ ವಿಚಾರಗಳ ಬಗ್ಗೆ ಮತ್ತು ಪರಸ್ಪರಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಚರ್ಚಿಸಲು ಇಂಥ ತ್ರಿಪಕ್ಷೀಯ ಸಭೆಗಳು ಸಹಾಯಕವಾಗಿವೆ. ಸುದೀರ್ಘ ಅಂತರದ ಬಳಿಕ, ಕಳೆದ ವರ್ಷ ಅರ್ಜೆಂಟೀನಾದಲ್ಲಿ ನಾವು ಭೇಟಿಯಾಗಿದ್ದೆವು’ ಎಂದರು.

‘ಜಗತ್ತಿನ ಮುಂಚೂಣಿಯ ಅರ್ಥವ್ಯವಸ್ಥೆಗಳಾಗಿ, ಜಾಗತಿಕ ಮಟ್ಟದ ಆರ್ಥಿಕ, ರಾಜಕೀಯ ಮತ್ತು ಭದ್ರತಾ ವಿಚಾರಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಅಗತ್ಯ. ಜಾಗತಿಕ ಮಟ್ಟದ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ
ಸಹಕಾರ ನೀಡುವ ನಿಟ್ಟಿನಲ್ಲಿ ಇಂದಿನ ತ್ರಿಪಕ್ಷೀಯ ಮಾತುಕತೆ ತುಂಬ ಸಹಾಯಕವಾಗಿದೆ’ ಎಂದು ಮೋದಿ ಹೇಳಿದರು.

‘ಕಳೆದ ಫೆಬ್ರುವರಿಯಲ್ಲಿ ಚೀನಾದಲ್ಲಿ ನಡೆದಿದ್ದ ವಿದೇಶಾಂಗ ವ್ಯವಹಾರಗಳ ಸಚಿವರ ಮಟ್ಟದ ಮಾತುಕತೆಯಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರ ನೀಡುವುದು, ಸಂಬಂಧಗಳ ಸುಧಾರಣೆ, ಹವಾಮಾನ ಬದಲಾವಣೆ ಮುಂತಾದ ಅನೆಕ ವಿಚಾರಗಳ ಬಗ್ಗೆ ಚರ್ಚೆಗಳಾಗಿದ್ದವು’ ಎಂದು ಅವರು ಸ್ಮರಿಸಿದರು.

ಭಯೋತ್ಪಾದನೆ ದೊಡ್ಡ ಸವಾಲು: ಇದೇ ಸಂದರ್ಭದಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಮೋದಿ, ‘ಭಯೋತ್ಪಾದನೆಯು ಮಾನವೀಯತೆಗೆ ಅತಿದೊಡ್ಡ ಅಪಾಯ’ ಎಂದು ಬಣ್ಣಿಸಿದರಲ್ಲದೆ ‘ಭಯೋತ್ಪಾದನೆಯು ಮುಗ್ಧ ಜನರ ಹತ್ಯೆಗೆ ಕಾರಣವಾಗುತ್ತಿರುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಗೂ ಮಾರಕವಾಗುತ್ತಿದೆ’ ಎಂದರು.

‘ಯಾವ ರೂಪದಲ್ಲೇ ಆದರೂ ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲರನ್ನೂ ತಡೆಯಬೇಕಾಗಿದೆ. ಇದು ಜಾಗತಿಕ ಸಮಸ್ಯೆ, ಅಂತರರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಿಯೇ ಭಯೋತ್ಪಾದನೆಯ ಸವಾಲನ್ನು ಎದುರಿಸಬೇಕಾಗಿದೆ’ ಎಂದು ಮೋದಿ ಸಭೆಯಲ್ಲಿ ಕರೆ ನೀಡಿದರು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಐದು ‘ಐ’

ಡಿಜಿಟಲ್‌ ತಂತ್ರಜ್ಞಾನವು ಸಾಮಾಜಿಕ ಬೆಳವಣಿಗೆಗೆ ಗರಿಷ್ಠ ನೆರವು ನೀಡುವಂತೆ ಮಾಡಲು ಐದು ‘ಐ’ಗಳ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಅವರು ಮುಂದಿಟ್ಟಿದ್ದಾರೆ. ಜಿ20ಶೃಂಗಸಭೆಯ ಡಿಜಿಟಲ್‌ ಅರ್ಥವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ ಸಂವಾದದಲ್ಲಿ ಅವರು ಮಾತನಾಡಿದರು. 

‘ಸಾಮಾಜಿಕ ಅನುಕೂಲಕ್ಕೆ ಡಿಜಿಟಲ್‌ ತಂತ್ರಜ್ಞಾನ ಬಳಕೆಯ ಕಾರ್ಯಸೂಚಿಗೆ ಮೋದಿ ಅವರು ರೂಪ ಕೊಟ್ಟಿದ್ದಾರೆ. ಅವರು ಪ್ರತಿಪಾದಿಸಿದ ಐದು ‘ಐ’ಗಳು ಹೀಗಿವೆ: ಎಲ್ಲರ ಒಳಗೊಳ್ಳುವಿಕೆ (ಇನ್‌ಕ್ಲೂಸಿವ್‌ನೆಸ್‌), ದೇಶೀಕರಣ (ಇಂಡಿಜಿನೈಸೇಷನ್‌), ಆವಿಷ್ಕಾರ (ಇನ್ನೋವೇಷನ್‌), ಮೂಲಸೌಕರ್ಯದಲ್ಲಿ ಹೂಡಿಕೆ (ಇನ್‌ವೆಸ್ಟ್‌ಮೆಂಟ್‌ ಇನ್‌ ಇನ್‌ಫ್ರಾಸ್ಟ್ರಕ್ಚರ್‌) ಮತ್ತು ಅಂತರರಾಷ್ಟ್ರೀಯ ಸಹಕಾರ (ಇಂಟರ್‌ನ್ಯಾಷನಲ್‌ ಕೋ–ಆಪರೇಷನ್‌)’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. 

ಒಸಾಕಾ ಜಿ20 ಶೃಂಗಸಭೆಯಲ್ಲಿ...

l ರಷ್ಯಾ ತನ್ನ ಬೇಜವಾಬ್ದಾರಿ ನಡವಳಿಕೆ ಮತ್ತು ಬ್ರಿಟನ್‌ ಅನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಡುವವರೆಗೂ ಎರಡು ದೇಶಗಳ ನಡುವೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂದು ತೆರೆಸಾ ಮೇ ಅವರು ಪುಟಿನ್‌ಗೆ ಸ್ಪಷ್ಟವಾಗಿ ಹೇಳಿದರು

l ಭಾರತದ ನವೋದ್ಯಮಗಳಲ್ಲಿ ಹೂಡಿಕೆ ಮಾಡುವ ಸಲುವಾಗಿ ‘ಇಂಡೊ– ಜಪಾನ್‌ ಟೆಕ್ನಾಲಜಿ ಫಂಡ್‌’ ಆರಂಭಿಸಲಾಗಿದ್ದು ಇದನ್ನು ರಿಲಯನ್ಸ್‌ ನಿಪ್ಪಾನ್‌ ಲೈಫ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ (ಆರ್‌ಎನ್‌ಎಎಂ) ಸಂಸ್ಥೆ ನಿರ್ವಹಿಸಲಿದೆ

l ಅನಾರೋಗ್ಯದ ನಡುವೆಯೂ ಶೃಂಗಸಭೆಗೆ ಹಾಜರಾದ ಜರ್ಮನಿಯ ಚಾನ್ಸಲರ್‌ ಏಂಜಲಾ ಮಾರ್ಕೆಲ್‌, ‘ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ವೈಮನಸ್ಸು ತಿಳಿಗೊಳ್ಳುವುದು ಅಗತ್ಯ’ ಎಂದರು

l ಸಂರಕ್ಷಣಾವಾದ ಮತ್ತು ‘ದೌರ್ಜನ್ಯ’ವು ಜಾಗತಿಕ ವ್ಯವಸ್ಥೆಗೆ ಮಾರಕವಾಗಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಎಚ್ಚರಿಸಿದ್ದಾರೆ. ಟ್ರಂಪ್‌ ಮತ್ತು ಷಿ ನಡುವೆ ಶನಿವಾರ ಮಾತುಕತೆ ನಡೆಯದೆ. ಎರಡೂ ದೇಶಗಳ ನಡುವಣ ವ್ಯಾಪಾರ ಸಮರದ ಕಾರಣಕ್ಕೆ 
ಈ ಮಾತುಕತೆ ಕುತೂಹಲ ಮೂಡಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು