ಶುಕ್ರವಾರ, ಡಿಸೆಂಬರ್ 6, 2019
21 °C
ಸ್ಥಳೀಯವಾಗಿ ದತ್ತಾಂಶ ಸಂಗ್ರಹಕ್ಕೆ ಭಾರತದ ಒತ್ತು: ಡಿಜಿಟಲ್ ವ್ಯಾಪಾರ ನಿಯಂತ್ರಣಕ್ಕೆ ಅಮೆರಿಕದ ವಿರೋಧ

ದತ್ತಾಂಶ ವಿಕೇಂದ್ರೀಕರಣದತ್ತ ಜಿ20 ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಸಾಕಾ (ಪಿಟಿಐ): ದತ್ತಾಂಶವು ಹೊಸ ರೂಪದ ಸಂಪತ್ತು. ಹಾಗಾಗಿ, ಈ ವಿಚಾರದಲ್ಲಿ ಅಭಿವೃದ್ಧಿಶೀಲ ದೇಶಗಳ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಇದೆ ಎಂದು ಭಾರತ ಪ್ರತಿಪಾದಿಸಿದೆ. ಆದರೆ, ದತ್ತಾಂಶ ವಿಕೇಂದ್ರೀಕರಣ ಮತ್ತು ಡಿಜಿಟಲ್‌ ವ್ಯಾಪಾರವನ್ನು ನಿಯಂತ್ರಿಸುವ ನೀತಿಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರೋಧಿಸಿದ್ದಾರೆ.

ಭಾರತವೂ ಸೇರಿ ಜಗತ್ತಿನಾದ್ಯಂತ ನಡೆಯುತ್ತಿರುವ ದತ್ತಾಂಶ ವಿಕೇಂದ್ರೀಕರಣ ಪ್ರಯತ್ನಗಳ ವಿರುದ್ಧ ಗೂಗಲ್‌, ಮಾಸ್ಟರ್‌ ಕಾರ್ಡ್‌, ವೀಸಾ ಮತ್ತು ಅಮೆಜಾನ್‌ನಂತಹ ಅಮೆರಿಕದ ಕಂಪನಿಗಳು ಲಾಬಿ ನಡೆಸುತ್ತಿವೆ. 

ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್‌ ನಡುವಣ ಮಾತುಕತೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವ್ಯಾಪಾರ ಮತ್ತು ಡಿಜಿಟಲ್‌ ಆರ್ಥಿಕತೆಯ ನಡುವಣ ಸಂಪರ್ಕದ ಮಹತ್ವದ ಬಗ್ಗೆ ಭಾರತಕ್ಕೆ ಸಹಮತ ಇದೆ ಎಂದು ಅವರು ತಿಳಿಸಿದರು. 

‘ಅಭಿವೃದ್ಧಿಯಲ್ಲಿ ದತ್ತಾಂಶದ ಪಾತ್ರದ ಮಹತ್ವಕ್ಕೆ ಭಾರತ ಒತ್ತು ಕೊಡುತ್ತಿದೆ. ನಮ್ಮ ದೃಷ್ಟಿಯಲ್ಲಿ ದತ್ತಾಂಶವು ಪ್ರಮುಖವಾದ ವಿಚಾರ. ನಾವು ಇದನ್ನು ದೇಶೀಯ ನೆಲೆಯಲ್ಲಿಯೂ ನೋಡುತ್ತಿದ್ದೇವೆ. ಆದರೆ, ಇದರ ನಿಯಮ ರೂಪಿಸುವಿಕೆ ಅಂತರರಾಷ್ಟ್ರೀಯವಾಗಿ ನಡೆಯುತ್ತಿದೆ. ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ವ್ಯಾಪ್ತಿಯಲ್ಲಿ ದತ್ತಾಂಶದ ಬಗ್ಗೆ ಚರ್ಚೆ ನಡೆಯಬೇಕು ಎಂಬುದು ಭಾರತ ಮತ್ತು ಬ್ರಿಕ್ಸ್‌ ದೇಶಗಳ ನಿಲುವಾಗಿದೆ ಎಂದು ಗೋಖಲೆ ವಿವರಿಸಿದರು. 

ದತ್ತಾಂಶ ವಿಕೇಂದ್ರೀಕರಣವನ್ನು ಅಮೆರಿಕ ವಿರೋಧಿಸುತ್ತದೆ ಎಂದು ಜಿ20 ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿಯೇ ಟ್ರಂಪ್‌ ಅವರು ಹೇಳಿದ್ದಾರೆ.

‘ನಮ್ಮ 5ಜಿ ಜಾಲಗಳ ಸುರಕ್ಷತೆಯನ್ನು ಖಾತರಿಪಡಿಸಬೇಕು. ನಮ್ಮೆಲ್ಲರ ಸುರಕ್ಷತೆ ಮತ್ತು ಸಮೃದ್ಧಿಗೆ ಇದು ಅಗತ್ಯ. ದತ್ತಾಂಶ ವಿಕೇಂದ್ರೀಕರಣ ಮತ್ತು ಡಿಜಿಟಲ್‌ ವ್ಯಾಪಾರದ ನಿಯಂತ್ರಣಕ್ಕೆ ಅಮೆರಿಕದ ವಿರೋಧ ಇದೆ’ ಎಂದು ಅವರು ಹೇಳಿದರು. 

ಎಲ್ಲ ಜನರೂ ಸಶಕ್ತರಾಗುವ ಡಿಜಿಟಲ್‌ ವ್ಯಾಪಾರದ ಭವಿಷ್ಯವನ್ನು ನಾವು ಎದುರು ನೋಡುತ್ತಿದ್ದೇವೆ. ಮುಕ್ತ, ನ್ಯಾಯಸಮ್ಮತ ಮತ್ತು ಮಾರುಕಟ್ಟೆ ಆಧಾರಿತ ಡಿಜಿಟಲ್‌ ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಜಿ20 ರಾಷ್ಟ್ರಗಳ ಭಾಗೀದಾರಿಕೆಯನ್ನು ಅಮೆರಿಕ ಬಯಸುತ್ತಿದೆ. ದತ್ತಾಂಶದ ಮುಕ್ತ ಹರಿವು ಎಲ್ಲ ದೇಶಗಳ ಸಮೃದ್ಧಿಗೆ ಅಗತ್ಯ ಎಂದು ಟ್ರಂಪ್‌ ಪ್ರತಿಪಾದಿಸಿದರು. 

ಬಿಸಿ ಮುಟ್ಟಿಸಿದ್ದ ಆರ್‌ಬಿಐ ನಿರ್ದೇಶನ

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದತ್ತಾಂಶವನ್ನು ದೇಶದೊಳಗೇ ಸಂಗ್ರಹಿಸಿ ಇರಿಸಬೇಕು. ಪರಿಣಾಮಕಾರಿ ಮೇಲುಸ್ತುವಾರಿಗೆ ಇದು ಅಗತ್ಯ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಳೆದ ಏಪ್ರಿಲ್‌ನಲ್ಲಿ ನಿರ್ದೇಶನ ನೀಡಿತ್ತು. ಆರು ತಿಂಗಳೊಳಗೆ ಇದು ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿತ್ತು. 

ಈ ನಿರ್ದೇಶನದ ಬಗ್ಗೆ ಅಮೆರಿಕದ ಹಲವು ಕಂಪನಿಗಳು ಕಳವಳ ವ್ಯಕ್ತಪಡಿಸಿದ್ದವು. ದತ್ತಾಂಶ ವಿಕೇಂದ್ರೀಕರಣವು ತಮ್ಮ ಕಾರ್ಯನಿರ್ವಹಣಾ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದವು.

ಚುನಾವಣೆಯಲ್ಲಿ ಮೂಗು ತೂರಿಸಬೇಡಿ: ಪುಟಿನ್‌ ಕಾಲೆಳೆದ ಟ್ರಂಪ್‌

‘ನಮ್ಮ ಚುನಾವಣೆಯಲ್ಲಿ ಮೂಗು ತೂರಿಸಬೇಡಿ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಲಘುವಾಗಿಯೇ ರಷ್ಯಾದ 
ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಕಾಲೆಳೆದ ಘಟನೆ ನಡೆಯಿತು.

ಕಳೆದ ಎರಡು ವರ್ಷಗಳಲ್ಲಿ ಒಮ್ಮೆ ಮಿತ್ರರಂತೆ, ಮತ್ತೊಮ್ಮೆ ಶತ್ರುಗಳಂತೆ ಸ್ನೇಹ– ದ್ವೇಷದ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಟ್ರಂಪ್‌ ಹಾಗೂ ಪುಟಿನ್‌, ಶುಕ್ರವಾರ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮಾತುಕತೆಯ ಬಳಿಕ ಇಬ್ಬರು ನಾಯಕರು ಮಾಧ್ಯಮ ಪ್ರತಿನಿಧಿಗಳ ಮುಂದೆ ಬಂದು ಅಭಿಪ್ರಾಯಗಳನ್ನು ಹಂಚಿಕೊಂಡರು. ಸಾಕಷ್ಟು ಸಮಯ ಮಾತನಾಡಿದರೂ, ಇಬ್ಬರ ಮಧ್ಯೆ ನಡೆದ ಮಾತುಕತೆಯ ವಿವರಗಳು ಲಭ್ಯವಾಗದಿದ್ದಾಗ, ಮಾಧ್ಯಮ ಪ್ರತಿನಿಧಿಯೊಬ್ಬರು ಟ್ರಂಪ್‌ ಅವರ ಮಾತನ್ನು ಮಧ್ಯದಲ್ಲೇ ತಡೆದು, ‘ಅಮೆರಿಕದ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡಬೇಡಿ ಎಂದು ನೀವೇನಾದರೂ ಪುಟಿನ್‌ಗೆ ಸೂಚಿಸುವಿರಾ, ಅದಕ್ಕೆ ಅವರೇನಾದರೂ ಪ್ರತಿಕ್ರಿಯೆ ನೀಡುವರೇ’ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಲಘು ಧಾಟಿಯಲ್ಲಿ ಉತ್ತರಿಸಿದ ಟ್ರಂಪ್‌, ‘ಹೌದು, ಖಂಡಿತ’ ಎಂದು ಪುಟಿನ್‌ ಕಡೆಗೆ ತಿರುಗಿ, ‘ನಮ್ಮ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡಬೇಡಿ’ ಎಂದರು. ಅಷ್ಟಕ್ಕೇ ನಿಲ್ಲದೆ, ಪುಟಿನ್‌ ಪಕ್ಕದಲ್ಲಿ ನಿಂತಿದ್ದ ರಷ್ಯಾದ ಅಧಿಕಾರಿಯೊಬ್ಬರ ಕಡೆ ತಿರುಗಿ, ‘ನಮ್ಮ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡಬೇಡಿ’ ಎಂದು ಕಾಲೆಳೆದರು. ಇದಕ್ಕೆ ಪುಟಿನ್‌ ಮುಗುಳ್ನಗೆಯ ಪ್ರತಿಕ್ರಿಯೆ ನೀಡಿದರು.

ಇದಾದ ಬಳಿಕ ಮಾಧ್ಯಮದವರತ್ತ ತಿರುಗಿದ ಟ್ರಂಪ್‌, ‘ಚುನಾವಣೆಯ ವಿವಾದವನ್ನು ಅಮೆರಿಕದ ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್‌ ಪಕ್ಷದವರು ಗಂಭೀರವಾಗಿ ಪರಿಗಣಿಸಿದ್ದರೂ ನಾನು ಹಾಗೆ ಪರಿಗಣಿಸಿರಲಿಲ್ಲ’ ಎಂದರು. ಅವರ ಈ ಹೇಳಿಕೆಯು ಅಮೆರಿಕದಲ್ಲಿ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮೂಗು ತೂರಿಸಿತ್ತು’ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿತ್ತು. ಅದನ್ನು ಪುಟಿನ್‌ ನಿರಾಕರಿಸಿದ್ದರು. ಕಳೆದ ಬಾರಿ ಪುಟಿನ್‌ ಅವರನ್ನು ಭೇಟಿಮಾಡಿದ್ದ ಟ್ರಂಪ್‌ ಅವರು ಪುಟಿನ್‌ ಪಕ್ಕದಲ್ಲೇ ನಿಂತು ತಮ್ಮದೇ ದೇಶದ ಗುಪ್ತಚರ ಇಲಾಖೆ ನೀಡಿದ್ದ ವರದಿಯನ್ನು ತಳ್ಳಿಹಾಕಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಈಗ ಅವರು ಪುನಃ ಅಂಥದ್ದೇ ಹೇಳಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು