ಅಟಲ್‌ಜೀ ಕನಸು ನನಸಾಗದ ಗಂಗಾ–ಕಾವೇರಿ ಜೋಡಣೆ

7
ವಾಜಪೇಯಿ ಅವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಬಾಬಾಗೌಡ ಪಾಟೀಲ ನೆನಪು

ಅಟಲ್‌ಜೀ ಕನಸು ನನಸಾಗದ ಗಂಗಾ–ಕಾವೇರಿ ಜೋಡಣೆ

Published:
Updated:
Deccan Herald

ಧಾರವಾಡ: ‘ತಮ್ಮ ಅಧಿಕಾರ ಅವಧಿಯಲ್ಲಿ ಗಂಗಾ–ಕಾವೇರಿ ನದಿ ಜೋಡಣೆ ಮೂಲಕ ದೇಶದಲ್ಲಿ ಆಗಾಗ ತಲೆದೋರುವ ಜಲಕ್ಷಾಮವನ್ನು ಶಾಶ್ವತವಾಗಿ ಪರಿಹರಿಸುವ ಅಟಲ್‌ಜೀ ಅವರ ಪ್ರಯತ್ನ ಕಡೆಗೂ ಕನಸಾಗಿಯೇ ಉಳಿದಂತಾಯಿತು’ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

ವಾಜಪೇಯಿ ಅವರು ಅಗಲಿದ ಸುದ್ದಿ ತಿಳಿದು ಅತೀವ ಸಂತಾಪ ವ್ಯಕ್ತಪಡಿಸಿದ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಉತ್ತರ ಭಾರತೀಯರು ತೀವ್ರ ವಿರೋಧವಿದ್ದರೂ ಯೋಜನೆ ಅನುಷ್ಠಾನಕ್ಕೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಆ ಭಾಗದವರ ನಿರಂತರ ಒತ್ತಡದಿಂದಾಗಿ ಆ ಯೋಜನೆ ಆಗ ಕೈಗೂಡಲಿಲ್ಲ. ನಂತರ ಬಂದವರಿಗೂ ಅದು ಬೇಕಾಗಿರಲಿಲ್ಲ’ ಎಂದರು.

‘ರೈತಸಂಘದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾನು ಬಿಜೆಪಿ ಸೇರಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೂ ವಾಜಪೇಯಿ ಅವರ ಭೇಟಿ ಆಗಿರಲಿಲ್ಲ. ಆದರೆ ಅವರ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿಂದಿನ ದಿನ ರಾತ್ರಿ 1ಕ್ಕೆ ಅವರೇ ಕರೆ ಮಾಡಿ, ‘ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿ ಬನ್ನಿ’ ಎಂದಾಗ ನಿಜಕ್ಕೂ ಅಚ್ಚರಿ ಎನಿಸಿತು. ಆದರೆ ನಂತರ ಅವರೊಂದಿಗಿನ 13 ತಿಂಗಳ ಕೆಲಸ ನನ್ನ ಬದುಕಿನ ಸಾರ್ಥಕ ದಿನಗಳಾದವು’ ಎಂದು ಬಾಬಾಗೌಡ ಅವರು ನೆನೆದರು.

‘ಗ್ರಾಮೀಣ ಭಾಗದಿಂದ ಬಂದಿರುವ ನೀವು ರೈತ ಪರ ಚಳವಳಿ ನಡೆಸಿದ್ದೀರಿ. ಹೀಗಾಗಿ ಜನರ ಮತ್ತು ಗ್ರಾಮೀಣ ಭಾಗದ ಪರಿಸ್ಥಿತಿಯ ಅರಿವಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯನ್ನು ನೀವೇ ನಿಭಾಯಿಸಬೇಕು ಎಂದರು. ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಾಗಿ ಮಹಿಳೆಯರು ಆರ್ಥಿಕ ಸಬಲೀಕರಣಕ್ಕೆ ಸ್ವಸಹಾಯ ಸಂಘಗಳ ಸ್ಥಾಪನೆ, ಗ್ರಾಮ ಸಡಕ್ ಯೋಜನೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಗಳಿಗೆ ನೇರ ಹಣ ವರ್ಗಾವಣೆ, ಭೂಸ್ವಾಧೀನ ಕಾನೂನು ತಿದ್ದುಪಡಿ ಇತ್ಯಾದಿಗಳನ್ನು ಕ್ಯಾಬಿನೇಟ್‌ನಲ್ಲಿ ಮಂಜೂರು ಮಾಡಿದ್ದರು. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಯಿತು’ ಎಂದರು.

‘ನನ್ನನ್ನೇ ಸದಾ ಕರೆದುಕೊಂಡು ಹೋಗುತ್ತಿದ್ದ ಅವರು, ಅತ್ಯಂತ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ಮಾತು ಎಷ್ಟು ಮೃದುವಾಗಿತ್ತೋ ಅವರ ನಿಲುವು ಅಷ್ಟೇ ಕಠಿಣವಾಗಿತ್ತು. ಸಂಕಲ್ಪ ಮಾಡುತ್ತಿದ್ದರು ಆದರೆ ಅದನ್ನು ಅನುಷ್ಠಾಣಕ್ಕೆ ತರುತ್ತಿದ್ದರು. ಆದರೆ ಯಾವುದೇ ಕಾರಣಕ್ಕೂ ಪ್ರಚಾರಕ್ಕಾಗಿ ಯೋಜನೆಗಳನ್ನು ಘೋಷಿಸುತ್ತಿರಲಿಲ್ಲ. ಪೋಕ್ರಾನ್ ಅಣು ಪರೀಕ್ಷೆ ಮಾಡಿ ಪ್ರಪಂಚದ ಬಲಾಢ್ಯ ರಾಷ್ಟ್ರಗಳಲ್ಲಿ ಭಾರತವನ್ನು ನಿಲ್ಲಿಸಿದ ಅಟಲಜೀಯ ಸಾಧನೆಯನ್ನು ನಾವು ಮರೆಯಬಾರದು’ ಎಂದರು.

‘ಸುವರ್ಣ ಚತುಷ್ಪಥ ರಸ್ತೆ ನಿರ್ಮಿಸಿ ಭಾರತದ ಚಿತ್ರಣವನ್ನೇ ಬದಲಾಯಿಸಿದ ನಂತರ, ಅರ್ಥಿಕ ಬೆಳವಣಿಗೆಗೆ ಒಂದು ರೀತಿಯ ಶಕ್ತಿ ಬಂದಿತು. ಇಂದು ಈ ದೇಶದಲ್ಲಿ ನಡೆಯುತ್ತಿರುವ ಎಲ್ಲ ಪ್ರಗತಿಗಳು ವಾಜಪೇಯಿ ಅವರು ಕೈಕೊಂಡ ನಿರ್ಣಯಗಳ ಫಲಶೃತಿ. ಅಂಥ ವ್ಯಕ್ತಿತ್ವ, ದಿಟ್ಟತನ ಮತ್ತು ರಾಜಧರ್ಮ ಇವತ್ತಿನ ರಾಜಕಾರಣಿಗಳಿಗೆ ಮಾರ್ಗದಶಿಯಾಗಬೇಕಿದೆ’ ಎಂದು ಬಾಬಾಗೌಡ ಹೇಳಿದರು.

‘13 ತಿಂಗಳ ಅವಧಿ ಕೊನೆಗೊಳ್ಳು ಸಂದರ್ಭದಲ್ಲಿ ಕೇವಲ ಒಂದು ಮತಗಳಿಂದ ಸರ್ಕಾರ ಪಥನಗೊಂಡಿತು. ಆ ಒಂದು ಮತವನ್ನು ಹೇಗಾದರೂ ಪಡೆಯಬಹುದು ಎಂಬ ಮಾತನ್ನು ಕೆಲ ಸಂಸದರು ಹೇಳಿದರು. ಆದರೆ ಅವರು ‘ಅದನ್ನು ರಾಜಧರ್ಮ ಒಪ್ಪದು’ ಎಂಬ ಒಂದೇ ಮಾತು ನಮ್ಮೆಲ್ಲರ ಅಂತರಾತ್ಮವನ್ನು ಎಚ್ಚರಿಸಿತು’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !