ಗಂಗಾನದಿ: ಅಕ್ರಮ ಟೆಂಟ್‌ ತೆರವುಗೊಳಿಸಿ

ಭಾನುವಾರ, ಜೂನ್ 16, 2019
32 °C
ತಪ್ಪಿತಸ್ಥರಿಗೆ ದಂಡ ವಿಧಿಸಿ ಆ ಮೊತ್ತ ನದಿ ಪುನರುಜ್ಜೀವನಕ್ಕೆ ಬಳಸಲು ಎನ್ ಡಿಟಿ ಸಲಹೆ

ಗಂಗಾನದಿ: ಅಕ್ರಮ ಟೆಂಟ್‌ ತೆರವುಗೊಳಿಸಿ

Published:
Updated:
Prajavani

ನವದೆಹಲಿ: ಗಂಗಾ ಮತ್ತು ಅದರ ಉಪನದಿಗಳ ದಡದಲ್ಲಿ ಯಾವುದೇ ಅಕ್ರಮ ಟೆಂಟ್‌ಗಳು ಹಾಕದಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಉತ್ತರಾಖಂಡ ಸರ್ಕಾರಕ್ಕೆ ನಿರ್ದೇಶಿಸಿದೆ. 

ಎನ್‌ಜಿಟಿ ಅಧ್ಯಕ್ಷ ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಪೀಠವು, ಗಂಗಾ ಮತ್ತು ಅದರ ಉಪನದಿಗಳಿಗೆ ಕಾರ್ಖಾನೆ ತ್ಯಾಜ್ಯ ಮತ್ತು ಕಲುಷಿತ ನೀರು ಹರಿಸಿ ಮಲಿನಗೊಳಿಸುವುದನ್ನು ತಡೆಯಬೇಕು ಎಂದೂ ಉತ್ತರಾಖಂಡದ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಯುಪಿಪಿಸಿಬಿ) ಸೂಚನೆ ನೀಡಿದೆ. 

ವಿಶೇಷವಾಗಿ ಪೌಡಿ ಗಟವಾಲ ಜಿಲ್ಲೆಯ ಪಿಯಾನಿ ಗ್ರಾಮದಿಂದ ನೀಲಕಂಠ ರಸ್ತೆಯವರೆಗೆ ನದಿ ದಡದಲ್ಲಿ ಅಕ್ರಮವಾಗಿ ಟೆಂಟ್ ಹಾಕಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ನದಿ ಕಲುಷಿತಗೊಳ್ಳಲು ಕಾರಣವಾಗುತ್ತವೆ ಎಂದು ಎನ್‌ಜಿಟಿ ಅಸಮಾಧಾನ ವ್ಯಕ್ತಪಡಿಸಿತು. 

ಮಾಲಿನ್ಯ ತಡೆಯುವಲ್ಲಿ ವಿಫಲವಾದರೆ, ಸಂಬಂಧಪಟ್ಟ ವ್ಯಕ್ತಿ ಅಥವಾ ಅಧಿಕಾರಿಗೆ ದಂಡ ವಿಧಿಸಬೇಕು ಮತ್ತು ಈ ಮೊತ್ತವನ್ನು ಮಲಿನಗೊಂಡ ನದಿಯ ಸ್ವಚ್ಛತೆಗೆ ಬಳಸಬೇಕು ಎಂದು ಹೇಳಿದೆ. ‘ನದಿಯ ಮಲೀನಕ್ಕೆ ಕಾರಣವಾಗುವ ಯಾವುದೇ ಲಾಭದಾಯಕ ಚಟುವಟಿಕೆಯನ್ನು ದಡದಲ್ಲಿ ನಡೆಸಬಾರದು. ಈ ಕುರಿತು ಸುಪ್ರೀಂ ಕೋರ್ಟ್‌ ಮತ್ತು ನ್ಯಾಯಮಂಡಳಿಗಳು ಕಳೆದ 34 ವರ್ಷಗಳಿಂದ ನೀಡುತ್ತಿರುವ ಆದೇಶಗಳು ಕಾಗದದಲ್ಲಿಯೇ ಉಳಿಯುವಂತಾಗಬಾರದು’ ಎಂದು ಎನ್‌ಜಿಟಿ ಖಾರವಾಗಿ ಪ್ರತಿಕ್ರಿಯಿಸಿದೆ. 

ಗಂಗಾನದಿ ಒತ್ತುವರಿ ತೆರವು, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ನಿರ್ವಹಣೆ, ದಡದಲ್ಲಿ ಜೀವವೈವಿಧ್ಯ ಪಾರ್ಕ್‌ಗಳ ನಿರ್ಮಾಣ, ಮರಳುಗಣಿಗಾರಿಕೆ ನಿಯಂತ್ರಣದಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ (ಎನ್‌ಎಂಸಿಜಿ)ಗೆ ಎನ್‌ಜಿಟಿ ಹೇಳಿತು. 

‘ಗಂಗೆ ಮಲಿನ ಕಳವಳಕಾರಿ’

‘ಗಂಗಾ ನದಿಯ ಒಂದು ಹನಿ ಮಲಿನವಾದರೂ ಅದು ಗಂಭೀರ ವಿಚಾರ. ನದಿಯ ಸುರಕ್ಷತೆ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳು, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು‘ ಎಂದು ಎನ್‌ಜಿಟಿ ಹೇಳಿದೆ. 

ಈ ಕುರಿತು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಕ್ಕೆ ಸಂಬಂಧಿಸಿದಂತೆ ಸಮರ್ಥ ಕ್ರಿಯಾಯೋಜನೆ ರೂಪಿಸಬೇಕು ಮತ್ತು ನಿಗದಿತ ಸಮಯದೊಳಗೆ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ನದಿ ಮಲಿನಗೊಳ್ಳುವುದನ್ನು ತಡೆಯಬೇಕು ಎಂದು ಎನ್‌ಎಂಸಿಜಿಗೆ ಸೂಚನೆ ನೀಡಿತು. 

***

ಯುಪಿಪಿಸಿಬಿ ಮತ್ತು ಎನ್‌ಎಂಸಿಜಿಯ ನಡವಳಿಕೆ ಕಂಡು ನಮಗೆ ಅಚ್ಚರಿಯಾಗುತ್ತಿದೆ. ಈ ಸಂಬಂಧ ಕೋರ್ಟ್‌ ನೀಡಿರುವ ಆದೇಶಗಳನ್ನು ಉಲ್ಲಂಘಿಸಲಾಗುತ್ತಿದೆ.

ನ್ಯಾಯಮೂರ್ತಿ ಆದರ್ಶಕುಮಾರ್‌, ಗೋಯಲ್‌ ಎನ್‌ಜಿಟಿ ಅಧ್ಯಕ್ಷ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !