ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಮುಗಿಸಿದ ಯಕ್ಷ ಸಿಂಹ!

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ದೃಶ್ಯ–1:

ರಂಗದಲ್ಲಿ ಸಿಂಹ ಹ್ಞೂಂಕರಿಸುತ್ತದೆ. ಮುಖದ ಮೇಲೆ ಇದ್ದ ನೊಣವನ್ನು ಓಡಿಸಲಾಗದೆ ಎದ್ದು ನಿಂತು ಬಾಯಿ ತೆರೆದು ಆಕಳಿಸಿ ಸಿಟ್ಟಿನಿಂದ ಕಣ್ಣರಳಿಸಿ ಬೇಟೆಗೆ ಹೊರಡುವ ಪರಿ ನೋಡುವುದೇ ಚೆಂದ. ರಂಗದ ಮೇಲಿನ ಈ ಸಿಂಹವನ್ನು ನೋಡಿ ಮೈಸೂರು ಮಹಾರಾಜರು ಇದು ಮೈಸೂರು ಮೃಗಾಲಯದಲ್ಲಿ ಇರುವ ಸಿಂಹದಷ್ಟೇ ಸಹಜ ಸಿಂಹ ಎಂದು ಉದ್ಗರಿಸಿದ್ದರಂತೆ.

ದೃಶ್ಯ–2:

ರಂಗದಲ್ಲಿ ಬೇತಾಳವೊಂದು ಕುಣಿಯುತ್ತದೆ. ಈ ಬೇತಾಳ ತಾಳಕ್ಕೆ ತಕ್ಕಂತೆ ಕುಣಿಯುವುದರ ಜೊತೆಗೆ ಅದರ ಕಿವಿಯ ರಿಂಗುಗಳೂ ತಾಳಕ್ಕೆ ತಕ್ಕಂತೆ ನರ್ತಿಸುತ್ತವೆ. ಜುಟ್ಟು ಅಲ್ಲಾಡುತ್ತದೆ. ಹಲ್ಲುಗಳು ಟಪಕ್ಕನೆ ಒಳಕ್ಕೆ ಹೋಗಿ ಹೊರಕ್ಕೆ ಬರುತ್ತವೆ. ಅಲ್ಲಿ ಭಯಾನಕ ಸನ್ನಿವೇಶವೊಂದು ಸೃಷ್ಟಿಯಾಗುತ್ತದೆ.

ದೃಶ್ಯ–3:

ಗದಾಯುದ್ಧ ಪ್ರಸಂಗ. ತನ್ನವರನ್ನೆಲ್ಲಾ ಕಳೆದುಕೊಂಡ ಕೌರವ ಕುರುಕ್ಷೇತ್ರದಲ್ಲಿ ಒಬ್ಬಂಟಿಯಾಗಿ ಸಾಗುತ್ತಿದ್ದಾನೆ. ಆಗ ಏಕಾಏಕಿ ಪ್ರೇತವೊಂದು ಕಾಣಿಸಿಕೊಳ್ಳುತ್ತದೆ. ಅಸ್ಥಿಪಂಜರ ಕುಣಿದಾಡುತ್ತದೆ. ಅದರ ನೃತ್ಯ ಮತ್ತು ಕಿರುಚಾಟಕ್ಕೆ ದುರ್ಬಲ ಹೃದಯಿಗಳು ಓಡಿಹೋಗಬೇಕು ಎನ್ನುವ ಭಯವನ್ನು ಸೃಷ್ಟಿಸುತ್ತದೆ.

**

ಇತ್ತೀಚೆಗೆ ನಮ್ಮನ್ನು ಅಗಲಿದ ಕರ್ಕಿ ಕೃಷ್ಣ ಹಾಸ್ಯಗಾರರು ಯಕ್ಷಗಾನ ರಂಗದಲ್ಲಿ ಹರಿಸುತ್ತಿದ್ದ ಮಿಂಚುಗಳು ಇವು. ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಅವರು 90ನೇ ವಯಸ್ಸಿನವರೆಗೂ ರಂಗದಲ್ಲಿ ಸಿಂಹನಾಗಿ, ಪ್ರೇತನಾಗಿ ರಂಜಿಸಿದ್ದಾರೆ. ವೃತ್ತಿಯಲ್ಲಿ ಪ್ರೌಢಶಾಲೆ ಕಲಾ ಶಿಕ್ಷಕರಾಗಿದ್ದ ಅವರು ಪ್ರವೃತ್ತಿಯಿಂದ ಯಕ್ಷಗಾನ ಕಲಾವಿದರು. ಅತ್ಯುತ್ತಮ ಚಿತ್ರ ಕಲಾವಿದರೂ ಆಗಿದ್ದರು. ಗಣಪತಿ ಮೂರ್ತಿ ಮಾಡುವುದರಲ್ಲಿಯೂ ಎತ್ತಿದ ಕೈ.

ಉತ್ತರ ಕನ್ನಡ ಯಕ್ಷಗಾನ ಕ್ಷೇತ್ರದಲ್ಲಿ ಕರ್ಕಿ ಮೇಳಕ್ಕೆ ವಿಶಿಷ್ಟ ಸ್ಥಾನವಿದೆ. ಕರ್ಕಿ ಶೈಲಿ ಎಂದೇ ಪ್ರಸಿದ್ಧ. ಕರ್ಕಿ ಪರಮಯ್ಯ ಹಾಸ್ಯಗಾರ ಕುಟುಂಬದವರು ಉತ್ತರ ಕನ್ನಡ ಯಕ್ಷಗಾನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಉದ್ಯೋಗದ ನಿಮಿತ್ತ ಯಕ್ಷಗಾನ ಮೇಳದಿಂದ ದೂರವೇ ಉಳಿದಿದ್ದ ಕೃಷ್ಣ ಹಾಸ್ಯಗಾರರು ಆಗಾಗ ಯಕ್ಷಗಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಬಣ್ಣದ ವೇಷಕ್ಕೇ ಅವರು ಹೆಚ್ಚು ಖ್ಯಾತಿ ಗಳಿಸಿದ್ದರು.

ಕರ್ಕಿ ಮೇಳಕ್ಕೆ 9 ತಲೆಮಾರಿನ ಇತಿಹಾಸ ಇದೆ. ಸಾಂಪ್ರದಾಯಿಕ ಯಕ್ಷಗಾನ ಶೈಲಿ ಅವರ ವೈಶಿಷ್ಟ್ಯ. ತಂದೆ ಪರಮಯ್ಯ ಹಾಸ್ಯಗಾರರಿಂದ ಬಳುವಳಿಯಾಗಿ ಬಂದ ಯಕ್ಷಗಾನ ಕಲೆಯನ್ನು ಬೇರೊಂದು ದಿಕ್ಕಿಗೆ ತೆಗೆದುಕೊಂಡು ಹೋಗಿದ್ದು ಕೃಷ್ಣ ಹಾಸ್ಯಗಾರರ ವಿಶೇಷ.

ಕೃಷ್ಣ ಹಾಸ್ಯಗಾರರು ಆರಂಭದಲ್ಲಿ ಸ್ತ್ರೀ ಪಾತ್ರ ಮಾಡುತ್ತಿದ್ದರು. ನಂತರ ಅವರು ಬಣ್ಣದ ವೇಷ (ರಾಕ್ಷಸ ವೇಷ)ದತ್ತ ತಿರುಗಿದರು. ಅವರ ಯೌವನದ ಕಾಲದಲ್ಲಿ ಧಾರೇಶ್ವರ ಸಿದ್ದ ಎನ್ನುವವರು ಸಿಂಹ ನೃತ್ಯ ಮಾಡುತ್ತಿದ್ದರಂತೆ. ಅದನ್ನು ನೋಡಿ ತಾವೂ ಸಿಂಹ ನೃತ್ಯ ಮಾಡಬೇಕು ಎಂದು ಆರಂಭಿಸಿದರು. ನಾಟಕ ರಂಗದ ಸಂಪರ್ಕದಿಂದ ಕೃಷ್ಣ ಹಾಸ್ಯಗಾರ ಅವರು ಸಿಂಹ ನೃತ್ಯದಲ್ಲಿ ಹೊಸ ಶೈಲಿಯನ್ನು ರೂಢಿಸಿಕೊಂಡರು.

ಸಿಂಹ ನೃತ್ಯಕ್ಕಾಗಿ ಅವರು ಮೈಸೂರು ಮೃಗಾಲಯಕ್ಕೆ ಹೋಗಿ ಸಿಂಹದ ಸಹಜ ಶೈಲಿಯನ್ನೂ ಅಭ್ಯಾಸ ಮಾಡಿದರು. ಅದಕ್ಕೇ ಅವರ ಸಿಂಹ ಅತ್ಯಂತ ಸಹಜವಾದುದು, ರಂಗದಲ್ಲಿ ಆ ಸಿಂಹ ಬೇಟೆಯಾಡುವುದು, ಮಾಂಸ ತಿನ್ನುವುದು, ದೈನಂದಿನ ಚಟುವಟಿಕೆ ಎಲ್ಲವೂ ಯಕ್ಷಗಾನದ ತಾಳಕ್ಕೆ ತಕ್ಕಂತೆ ನಡೆಯುತ್ತದೆ. ಸಿಂಹಾವಲೋಕನ ಎನ್ನುವ ಶಬ್ದದ ನಿಜವಾದ ಅರ್ಥವನ್ನು ಅದು ಕೊಡುತ್ತದೆ.

‘ಸಿಂಹ ನೃತ್ಯ’ ಎನ್ನುವ ಪರಿಕಲ್ಪನೆಯೇ ಹೊಸದು. ನೃತ್ಯಕ್ಕೆ ನವಿಲು ರೂಪಕ. ಸಿಂಹ ರೂಪಕ ಅಲ್ಲ. ಆದರೆ ಯಕ್ಷಗಾನದಲ್ಲಿ ಸಿಂಹ ಬರುವುದರಿಂದ ಇದು ಸಿಂಹ ನೃತ್ಯ ಎಂದಾಗಿದೆ.

‘ಭಕ್ತ ಪ್ರಹ್ಲಾದ’ ಪ್ರಸಂಗದಲ್ಲಿ ನರಸಿಂಹನ ಪಾತ್ರ ಮಾಡುತ್ತಿದ್ದ ಕೃಷ್ಣ ಹಾಸ್ಯಗಾರರು ನಂತರ ‘ಶಶಿಕಲಾ ಸ್ವಯಂವರ’ ಪ್ರಸಂಗದಲ್ಲಿ ಸಿಂಹ ಪಾತ್ರವನ್ನು ಮಾಡಲು ಆರಂಭಿಸಿದರು. ‘ಜಾಂಬವತೀ ಕಲ್ಯಾಣ’ದಲ್ಲಿ ಸಿಂಹ ನೃತ್ಯ ಮತ್ತು ಜಾಂಬವಂತನ ಜೊತೆ ಸಿಂಹದ ಯುದ್ಧ ಒಂದು ಕಾಲದಲ್ಲಿ ಮಾಸ್ಟರ್ ಪೀಸ್ ಆಗಿತ್ತು. ನಂತರ ಇವರ ಸಿಂಹ ನೃತ್ಯವೇ ಜನಪ್ರಿಯವಾಗಿ ಕೇವಲ ಸಿಂಹ ನೃತ್ಯವನ್ನೇ ಪ್ರತ್ಯೇಕವಾಗಿ ಪ್ರದರ್ಶಿಸಲು ಆರಂಭಿಸಿದರು.

2500ಕ್ಕೂ ಹೆಚ್ಚು ಸಿಂಹ ನೃತ್ಯಗಳನ್ನು ಅವರು ಪ್ರದರ್ಶಿಸಿದ್ದಾರೆ. ದೇಶದ ಉದ್ದಗಲಕ್ಕೂ ಅವರು ಸಿಂಹ ನೃತ್ಯ ಮಾಡಿದ್ದಾರೆ. ಬಿ.ಬಿ.ಸಿಯಲ್ಲಿಯೂ ಅವರ ಸಿಂಹ ನೃತ್ಯ ಬಿತ್ತರಗೊಂಡಿದೆ.

ನೈಲಾನ್ ದಾರದಿಂದ ಸಿಂಹದ ವೇಷವನ್ನು ಅವರು ಕಟ್ಟಿಕೊಳ್ಳುತ್ತಿದ್ದರು. ಮುಖವಾಡದ ಒಳಗೆ ನೂಲಿನಿಂದಲೇ ತಲೆ ಹಾಗೂ ಕಿವಿಗೆ ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದರು. ಇದರಿಂದಲೇ ಅವರಿಗೆ ಸಿಂಹ ಬಾಯಿ ತೆರೆಯಲು ಹಾಗೂ ಕಿವಿಯನ್ನು ಮಾತ್ರ ಅಲ್ಲಾಡಿಸಲು ಸಾಧ್ಯವಾಗುತ್ತಿತ್ತು. ಆದರೆ ಇದರಿಂದ ಅವರಿಗೆ ಮೂಗಿನಿಂದ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಬಾಯಿಯಿಂದಲೇ ಉಸಿರಾಡಬೇಕಿತ್ತು. ಆರಂಭದ ದಿನಗಳಲ್ಲಿ ಹೀಗೆ ಉಸಿರಾಡುವುದು ಕಷ್ಟವಾಗಿ ಮೂರ್ಛೆ ಹೋದ ಪ್ರಸಂಗಗಳೂ ಇವೆ ಎಂದು ಅವರು ನೆನಪಿಸಿಕೊಳ್ಳುತ್ತಿದ್ದರು.

(ಕೃಷ್ಣ ಹಾಸ್ಯಗಾರ )

ಶಬರಾರ್ಜುನ, ರಾಜಾ ರುದ್ರಕೋಪ, ದೇವಿ ಮಹಾತ್ಮೆ ಮುಂತಾದ ಪ್ರಸಂಗಗಳಲ್ಲಿಯೂ ಸಿಂಹದ ಪಾತ್ರ ಮಾಡುತ್ತಿದ್ದರು. ಕೃಷ್ಣ ಹಾಸ್ಯಗಾರರ ವಿಶೇಷ ಇರುವುದೇ ಇಲ್ಲಿ. ಕೃಷ್ಣ ಹಾಸ್ಯಗಾರರು ಇದ್ದಾರೆ ಎಂದರೆ ಮಾತ್ರ ಆ ಪ್ರಸಂಗದಲ್ಲಿ ಸಿಂಹ ಅಥವಾ ಪ್ರೇತ ಬರುತ್ತಿದ್ದವು. ಇಲ್ಲವಾದರೆ ಈ ವೇಷಗಳು ಇಲ್ಲದೆಯೇ ಪ್ರಸಂಗ ಮುಗಿಯುತ್ತಿತ್ತು. ಇಂತಹ ವೇಷಗಳನ್ನು ಧರಿಸುವವರು ಅವರೊಬ್ಬರೇ ಆಗಿದ್ದರು. ಈಗ ಅವರೂ ಇಲ್ಲ. ಬರೀ ನೆನಪು ಅಷ್ಟೆ.

ರಾವಣ, ವೀರಭದ್ರ, ಬಕಾಸುರ, ಕಮ್ಮೀರ, ನರಸಿಂಹ, ರಾಕ್ಷಸಿ, ಹಿಡಿಂಬೆ, ಶೂರ್ಪನಖಿ, ಪುರುಷಾಮೃಗ ಮುಂತಾದ ಬಣ್ಣದ ವೇಷಕ್ಕೂ ಅವರು ಪ್ರಸಿದ್ಧರಾಗಿದ್ದರು. ನಾಟಕ ರಂಗದ ಬಣ್ಣಗಾರಿಕೆ ಮತ್ತು ತಮ್ಮ ವೃತ್ತಿಯಾದ ಬಣ್ಣದ ಕಲಾಗಾರಿಕೆಯನ್ನು ಯಕ್ಷಗಾನ ಬಣ್ಣಗಾರಿಕೆಯಲ್ಲಿಯೂ ಬಳಸಿದ್ದರಿಂದ ಅವರ ಪಾತ್ರಗಳಿಗೆ ಹೊಸ ರಂಗು ಬಂದಿತ್ತು.

ಒಮ್ಮೆ ಏಣಗಿ ಬಾಳಪ್ಪನವರ ನಾಟಕವನ್ನು ನೋಡಿ ಪ್ರಭಾವಿತರಾಗಿ ಬೈಲಹೊಂಗಲಕ್ಕೆ ಹೋಗಿ ಏಣಗಿ ಅವರನ್ನು ಕಂಡು ಬಣ್ಣದ ರಹಸ್ಯವನ್ನು ತಿಳಿದುಕೊಂಡು ಬಂದಿದ್ದರು. ಯಕ್ಷಗಾನದಲ್ಲಿ ಮೀಸೆಯನ್ನು ಬಿಗಿದುಕೊಳ್ಳುವ ಕ್ರಮ ಇದೆ. ಆದರೆ ಕೃಷ್ಣ ಹಾಸ್ಯಗಾರರು ಮೀಸೆ ಹಚ್ಚುವ ಕ್ರಮವನ್ನು ಅನುಸರಿಸಿದರು.

ಕೃಷ್ಣ ಹಾಸ್ಯಗಾರರ ಪ್ರೇತ ನೃತ್ಯವನ್ನು ನೋಡುವುದು ಒಂದು ರೋಮಾಂಚನಕಾರಿ ಅನುಭವ. ಇಡೀ ಮೈಗೆ ಕಪ್ಪು ಬಣ್ಣವನ್ನು ಹಚ್ಚಿಕೊಂಡು ಎಲುಬುಗಳು ಗುರುತಿಸುವಂತೆ ಬಿಳೀಬಣ್ಣದ ಝಿಂಕ್ ಆಕ್ಸೈಡ್‌ನಿಂದ ಗೆರೆ ಎಳೆದುಕೊಂಡು ಅಸ್ಥಿ ಪಂಜರವನ್ನು ರೂಪಿಸಿಕೊಳ್ಳುತ್ತಿದ್ದರು. ಕರಿ ಪರದೆಯ ಮಂದ ಬೆಳಕಿನಲ್ಲಿ ರಂಗ ಪ್ರವೇಶಿಸಿದರೆ ಅದೊಂದು ಥೇಟ್ ಪ್ರೇತ.

ಇದಕ್ಕೆ ಅವರ ಸಪೂರ ದೇಹ ಮತ್ತು ಕೋಲು ಮುಖ ಕೂಡ ಒಪ್ಪುವಂತೆ ಇದ್ದವು. ಚಂಡೆಯ ತಾಳಕ್ಕೆ ತಕ್ಕಂತೆ ಪ್ರೇತನಾಗಿ ಅವರು ಕುಣಿಯಲು ಆರಂಭಿಸಿದರೆ ಎಂತಹ ಧೈರ್ಯವಂತನ ಹೃದಯದಲ್ಲಿ ಒಂದು ಕ್ಷಣ ನಡುಕ.

ಕೃಷ್ಣ ಹಾಸ್ಯಗಾರರು ಬಣ್ಣದ ವೇಷ ಮತ್ತು ಸಿಂಹ, ಪ್ರೇತ, ಬೇತಾಳ ನೃತ್ಯಕ್ಕೆ ಮಾತ್ರ ಪ್ರಸಿದ್ಧರಲ್ಲ. ಹಾಸ್ಯ ಕಲಾವಿದರಾಗಿಯೂ ಅವರು ಗುರುತಿಸಿಕೊಂಡಿದ್ದರು. ‘ಜಾಂಬವತಿ ಕಲ್ಯಾಣ’ದ ಸುಜ್ಯೋತಿ, ‘ಭೂ ಕೈಲಾಸ’ದ ಬ್ರಾಹ್ಮಣ, ‘ಇಂದ್ರಕೀಲ’ದ ಬ್ರಾಹ್ಮಣ, ‘ಪಟ್ಟಾಭಿಷೇಕ’ದ ಮಂಥರೆ, ‘ದಕ್ಷಯಜ್ಞ’ದ ಬ್ರಾಹ್ಮಣ, ‘ಖಾಂಡವ ದಹನ’ದ ವನಪಾಲಕ, ‘ಮಾಗಧ ವಧೆ’ಯ ದೂತ, ‘ಬಾಣಾಸುರ ಕಾಳಗ’ದ ಮಂತ್ರಿ ಮುಂತಾದ ಪಾತ್ರಗಳಲ್ಲಿಯೂ ಅವರು ರಂಜಿಸಿದ್ದಾರೆ. ಸಭಾಪರ್ವದ ಕೀಲುಗೊಂಬೆ ಕೂಡ ಅವರಿಗೆ ಖ್ಯಾತಿ ತಂದಿತ್ತು.

(ಕೃಷ್ಣ ಹಾಸ್ಯಗಾರ ಅವರ ರಾಕ್ಷಸ ವೇಷ)

‘ಶಿರಸಿಯಲ್ಲಿ ಒಮ್ಮೆ ಬಾಣಾಸುರ ಕಾಳಗದ ಕುಂಬಾಂಡ ಮಂತ್ರಿ ಪಾತ್ರ. ರಂಗಸ್ಥಳದ ಮೇಲೆ ಒಂದು ಗಂಟೆ ಯಾವುದೇ ಚಲನೆ ಇಲ್ಲದೆ ಕುಳಿತ ನನ್ನ ಪರಿಯನ್ನು ನೋಡಿ ಪ್ರೇಕ್ಷಕರು ಇದೊಂದು ಗೊಂಬೆ ಎಂದೇ ಅಂದುಕೊಂಡಿದ್ದರು. ಭಾಗವತರು ಮಂತ್ರಿ ಪಾತ್ರದ ಪದ್ಯ ಹೇಳಿದಾಗ ನಾನು ಮಾತನಾಡಲು ಆರಂಭಿಸಿದೆ. ಆಗಲೇ ಪ್ರೇಕ್ಷಕರಿಗೆ ಗೊತ್ತಾಗಿದ್ದು ಇದು ಬೊಂಬೆಯಲ್ಲ. ಇದೂ ಒಂದು ಪಾತ್ರ ಎನ್ನುವುದು’ ಎಂದು ಅವರು ನೆನಪಿಸಿಕೊಳ್ಳುತ್ತಿದ್ದರು.

ರಾಯಚೂರಿನಲ್ಲಿ ಒಮ್ಮೆ ಇವರ ಸಿಂಹ ನೃತ್ಯ ಮತ್ತು ಪ್ರೇತ ನೃತ್ಯವನ್ನು ಒಂದೇ ದಿನ ಏರ್ಪಡಿಸಿದ್ದರು. ಮೊದಲು ಸಿಂಹ ನೃತ್ಯವಾಯಿತು. ಜನ ತುಂಬಾ ಖುಷಿಗೊಂಡರು. ಆಮೇಲೆ ಪ್ರೇತ ನೃತ್ಯ. ಪ್ರೇತ ನೃತ್ಯಕ್ಕೆ ಬಣ್ಣ ಬಳಿದುಕೊಳ್ಳಲು ಕನಿಷ್ಠ 3 ಗಂಟೆ ಬೇಕು. ಅದಕ್ಕೆ ಆಯೋಜಕರು ಆರ್ಕೆಸ್ಟ್ರಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಜನಕ್ಕೆ ಇದು ಸಹ್ಯವಾಗಲಿಲ್ಲ. ‘ಪ್ರೇತ ಬರಲಿ, ಪ್ರೇತ’ ಎಂದು ಕೂಗಿದರು.

ಆಯೋಜಕರು ಎಷ್ಟೇ ಪರಿಪರಿಯಾಗಿ ವಿನಂತಿಸಿಕೊಂಡರೂ ಪ್ರೇಕ್ಷಕರ ಗಲಾಟೆ ನಿಲ್ಲಲಿಲ್ಲ. ಬಣ್ಣ ಬಳಿದುಕೊಂಡ ಪ್ರೇತ ರಂಗಕ್ಕೆ ಬಂದಾಗಲೇ ಪ್ರೇಕ್ಷಕರು ಸುಮ್ಮನಾದರು. ನಂತರ ವೇದಿಕೆಯಲ್ಲಿ ಮೇಜಿನ ಮೇಲೆ ಮೇಜು ಇಟ್ಟು, ಕುರ್ಚಿಯ ಮೇಲೆ ಕುರ್ಚಿ ಇಟ್ಟು ಎತ್ತರದ ಆಸನವನ್ನು ಮಾಡಿ ಅದರಲ್ಲಿ ಕೃಷ್ಣ ಹಾಸ್ಯಗಾರರನ್ನು ಕುಳ್ಳಿರಿಸಿ ಎಲ್ಲ ಪ್ರೇಕ್ಷಕರೂ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದನ್ನು ಅವರು ಸದಾ ನೆನೆಯುತ್ತಿದ್ದರು.

ಈಗ ಕೃಷ್ಣ ಹಾಸ್ಯಗಾರರು ಮರೆಯಾಗಿದ್ದಾರೆ. ಪ್ರೇಕ್ಷಕರು ಪ್ರೇತ ಬರಲಿ ಪ್ರೇತ, ಸಿಂಹ ಬರಲಿ ಸಿಂಹ ಎಂದು ಕೂಗಿಕೊಂಡರೆ ಧುತ್ತೆಂದು ಎದ್ದು ಬರಲು ಅವರು ಇಲ್ಲ. ಸದ್ಯಕ್ಕೆ ಹಾಗೆ ಬರುವ ಇನ್ನೊಬ್ಬ ಕಲಾವಿದನೂ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT