ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌ ನೆನೆದು ಗಣ್ಯರ ಕಂಬನಿ

Last Updated 29 ಜನವರಿ 2019, 7:08 IST
ಅಕ್ಷರ ಗಾತ್ರ

ಬೆಂಗಳೂರು: ಮೆದುಳು‌ ನಿಷ್ಕ್ರಿಯದ ಪರಿಣಾಮ ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದ ಜಾರ್ಜ್‌ ಫರ್ನಾಂಡಿಸ್‌(88) ಮಂಗಳವಾರ ನವದೆಹಲಿಯಲ್ಲಿ ನಿಧನರಾದರು. ಸಮಾಜವಾದಿ ನಾಯಕನನ್ನು ನೆನೆದು ಗಣ್ಯರು ಕಂಬನಿ ಮಿಡಿದಿದ್ದಾರೆ.

* ಮಾಜಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ನಿಧನವು ತೀವ್ರ ದುಃಖವುಂಟುಮಾಡಿದೆ. ಸರಳತೆಯಿಂದಲೇ ದೇಶದ ಜನರ ಮನಸ್ಸು ಗೆದ್ದಿದ್ದ ಅವರು ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು. ಅವರು ಕನ್ನಡಿಗರು ಎನ್ನುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿತ್ತು.

ರಾಜ್ಯದಲ್ಲಿ ಹುಟ್ಟಿದರೂ ದೂರದ ಮುಂಬೈನಲ್ಲಿ ರಾಜಕೀಯ ಜೀವನ ರೂಪಿಸಿಕೊಂಡು ಕಾರ್ಮಿಕರು ಮತ್ತು ಶೋಷಿತರ ನಿಜವಾದ ಧ್ವನಿಯಾಗಿದ್ದರು.

ರಕ್ಷಣಾ ಸಚಿವರಾಗಿದ್ದಾಗ ಸಿಯಾಚಿನ್ ಅಂತಹ ಅತ್ಯಂತ ದುರ್ಗಮ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸೇನಾ ಸಿಬ್ಬಂದಿಯ ಸಮಸ್ಯೆಗಳನ್ನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದರು. ಸೈನಿಕರ ಮನೋಸ್ಥೈರ್ಯ ಹೆಚ್ಚಿಸಿದ್ದ ಅವರ ಆದರ್ಶ ನಡವಳಿಕೆ ಇತರರಿಗೂ ಮಾದರಿಯಾಗಿದೆ.

ಸೇನಾ ಸಾಮರ್ಥ್ಯ ಹೆಚ್ಚಿಸಿ ದೇಶವನ್ನು ಬಾಹ್ಯ ಶತ್ರುಗಳ ಉಪಟಳದಿಂದ ರಕ್ಷಿಸಿದ ಜಾರ್ಜ್ ಅವರ ನಿಧನದಿಂದ ದೇಶವು ಓರ್ವ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ.

–ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ

* ಅತ್ಯಂತ ದುಃಖದ ಸಂಗತಿ. ಭಾರತದ ರಾಜಕಾರಣದಲ್ಲಿ ಹೋರಾಟ ಮತ್ತು ಸರಳತೆಯೊಂದಿಗೆ ವಿಶೇಷ ಛಾಪು ಮೂಡಿಸಿದ್ದ ದಿವಂಗತ ಜಾರ್ಜ್ ಅವರು ಮೂಲತಃ ಕನ್ನಡಿಗರು ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ. ಕರ್ನಾಟಕದ ಮತ್ತು ದೇಶದ ಅಭಿವೃದ್ಧಿಯಲ್ಲಿ ದಿವಂಗತರ ಕೊಡುಗೆಯು ಸ್ಮರಣಾರ್ಹ.

–ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲ ಸಂತಾಪ

* ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾಪು ಹೊಂದಿದ್ದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ನಿಧನದಿಂದ ಸಂಭಾವಿತ ರಾಜಕಾರಣಿಯೊಬ್ಬರನ್ನು ಕಳೆದುಕೊಂಡ ನೋವು ನನಗಾಗಿದೆ. 88ವರ್ಷದ ಜಾರ್ಜ್ ಮಂಗಳೂರಿನಲ್ಲಿ ಜನಿಸಿ ಮುಂಬೈನಲ್ಲಿ ಗೆದ್ದು ದೆಹಲಿ ರಾಜಕಾರಣವನ್ನು ಆಳಿದವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಆಡಳಿತದ ವಿರುದ್ಧ ತೀರ್ವ ತರ ಹೋರಾಡಿದ್ದ ಜಾರ್ಜ್ ಒಬ್ಬ ಸರಳ ಜೀವಿಯಾಗಿ ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಕೇಂದ್ರದಲ್ಲಿ ರೈಲ್ವೆ ಮತ್ತು ರಕ್ಷಣಾ ಸಚಿವರಾಗಿ ಅಮೋಘ ಕೆಲಸಗಳನ್ನು ಮಾಡಿದ್ದ ಜಾರ್ಜ್, ನಮ್ಮ ಕರ್ನಾಟಕಕ್ಕೆ ಕೊಂಕಣ ರೈಲ್ವೆ ಆರಂಭಿಸುವಲ್ಲಿ ತೀವ್ರ ಶ್ರದ್ಧೆ ವಹಿಸಿದ್ದರು. 1987ರಲ್ಲಿ ನಾನು ಮೈಸೂರಿನ ಇಲ್ವಾಲ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾಗ ಸ್ವತ: ಜಾರ್ಜ್ ನನ್ನ ಪರವಾಗಿ ಕ್ಷೇತ್ರದಲ್ಲೆಲ್ಲ ಪ್ರಚಾರ ಮಾಡಿ, ನನ್ನ ಗೆಲುವಿಗೆ ಕಾರಣಕರ್ತರಾಗಿದ್ದರು. ಇವರ ನಿಧನ ವೈಯುಕ್ತಿಕವಾಗಿ ನನಗೆ ತುಂಬಲಾರದ ನಷ್ಟ.

– ಉನ್ನತ ಶಿಕ್ಷಣ ಸಚಿವಜಿ.ಟಿ.ದೇವೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT