ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳೆತದಲೆಯ ಸವಾರಿ...

Last Updated 8 ಜೂನ್ 2018, 19:30 IST
ಅಕ್ಷರ ಗಾತ್ರ

ಸಮುದ್ರದ ದಡದಲ್ಲಿ ಕುಳಿತು, ನಿಸರ್ಗದ ಅಪರಿಮಿತತೆ ಹಾಗೂ ಜಲರಾಶಿಯ ಅಗಾಧತೆಯ ಬಗ್ಗೆ ವಿಸ್ಮಯ ಪಡುತ್ತಾ ಅನಂತವನ್ನು ದಿಟ್ಟಿಸುತ್ತಿರುವಾಗ, ಅಲ್ಲಿ ಎರಡು ದೃಶ್ಯಗಳು ಗೋಚರಿಸಿದವು.

ವ್ಯಕ್ತಿಯೊಬ್ಬ, ಸಮುದ್ರದಲ್ಲಿಳಿದು ಅಲೆಗಳಿಗೆ ವಿರುದ್ಧವಾಗಿ ಈಜಲು ಪ್ರಯತ್ನಿಸುತ್ತಿರುವಾಗ, ಅಲೆಗಳ ರಭಸದಿಂದ ಪದೇ ಪದೇ ಹೊಡೆತ ತಿಂದು ಮುಳುಗೇಳುತ್ತಿದ್ದ. ಇನ್ನೊಂದೆಡೆ, ಯುವಕನೊಬ್ಬ ತನ್ನ ಸರ್ಫ್ ಬೋರ್ಡ್‍ನ ಸಹಾಯದಿಂದ ಎಷ್ಟೇ ಎತ್ತರದ, ರಭಸವಾದ ಅಲೆಗಳೇ ಇರಲಿ, ಅವುಗಳ ಮೇಲೆ ಸರಾಗವಾಗಿ ತೇಲುತ್ತ ಖುಷಿಯಿಂದ ಮುಂದುವರಿಯುತ್ತಿದ್ದ.

ಪ್ರಕೃತಿಯ ಶಕ್ತಿಯನ್ನು ಎದುರಿಸುವ ಈ ಎರಡು ಭಿನ್ನ ರೀತಿಗಳನ್ನು ಗಮನಿಸಿಯೇ, ನಮ್ಮ ಮನಸ್ಸಿನ ಸೆಳೆತ (urge) ಅಥವಾ ಬಲವಾದ ತುಡಿತಗಳನ್ನು ನಿಗ್ರಹಿಸುವ ಇಲ್ಲವೇ ನಿಯಂತ್ರಿಸುವ ಬಗ್ಗೆ ಮನಃಶಾಸ್ತ್ರಜ್ಞರು ತತ್ವಗಳನ್ನು ಪ್ರತಿಪಾದಿಸಿದ್ದಾರೆ.

ದುಶ್ಚಟಗಳ ನಿವಾರಣೆಗೆ ಮನಸ್ಸಿನ ಮೇಲಿನ ಹತೋಟಿ ತುಂಬ ಮುಖ್ಯವಾದದ್ದು. ವ್ಯಕ್ತಿಯು ದುಶ್ಚಟಗಳಿಂದ ದೂರವಾಗಲು ಬಯಸಿದಾಗ, ಆ ಮಾದಕ ವಸ್ತುವಿನ ಬಗೆಗಿನ ಹಾತೊರೆತವು, ಆತನ ಚಟವನ್ನು ಮರುಕಳಿಸುವಂತೆ (relapse) ಮಾಡಿ, ಮತ್ತೆ ಕತ್ತಲೆಯ ಕೂಪಕ್ಕೆ ತಳ್ಳುತ್ತದೆ. ಹಾತೊರೆತವು ಮನಸ್ಸಿನಲ್ಲಿ ಅಲೆಯ (wave) ರೂಪದಲ್ಲಿ ಮೂಡಿ, ವೇಗವಾಗಿ ಉತ್ತುಂಗವನ್ನು (peak) ತಲುಪಿ, ನಿಧಾನವಾಗಿ ಅಸ್ತಗೊಳ್ಳುತ್ತದೆ.

ಈ ಅಲೆಯು ಸಾಮಾನ್ಯವಾಗಿ 20ರಿಂದ 30 ನಿಮಿಷಗಳದ್ದಾಗಿದ್ದು, ಆ 20-30 ನಿಮಿಷಗಳ ಅವಧಿಯ ತುಡಿತದ ಅಲೆಯನ್ನು ವ್ಯಕ್ತಿಯು ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ಆತನ ಸೋಲು-ಗೆಲುವುಗಳು ನಿರ್ಭರವಾಗಿರುತ್ತವೆ.

ಲೋಕಾರೂಢಿಯಲ್ಲಿ, ‘ಅಲೆಯ ವಿರುದ್ಧ ಈಜಿ, ಗೆದ್ದವನೇ ವೀರ’ ಎಂಬ ಪ್ರತೀತಿ ಇದೆ. ಆದರೆ, ವಿಶೇಷವಾಗಿ ದುಶ್ಚಟಗಳ ವಿಷಯದಲ್ಲಿ, ಹಾತೊರೆತದ ಅಲೆಯನ್ನು ಎದುರಿಸಿ ನಿಲ್ಲುವವರಲ್ಲಿ ಸೋಲುಣ್ಣುವವರೇ ಹೆಚ್ಚು!

ಮದ್ಯಪಾನ, ಧೂಮಪಾನ ಇನ್ನಿತರ ದುಶ್ಚಟಗಳು, ಅತಿಯಾದ ಆಹಾರ ಇಲ್ಲವೇ ಹಾಳುಮೂಳು ಸೇವನೆ, ಅಸ್ವಾಭಾವಿಕ ಲೈಂಗಿಕ ಆಸಕ್ತಿಗಳ ನಿಯಂತ್ರಣ ಇಲ್ಲವೇ ನಿವಾರಣೆಗೆ ಸೆಳೆತದಲೆಯ ಸವಾರಿಯನ್ನು (urge surfing) ಚಿಕಿತ್ಸಾ ವಿಧಾನದಂತೆ ಪಾಲಿಸಬಹುದಾಗಿದೆ. ಈ ತತ್ವವನ್ನು ಮೊದಲ ಬಾರಿಗೆ ಮನಃಶಾಸ್ತ್ರಜ್ಞರಾದ ಅಲನ್ ಮಾರ್ಲಟ್ ಎಂಬುವವರು, ದುಶ್ಚಟಗಳ ಮರಳುವಿಕೆಯನ್ನು ತಡೆಗಟ್ಟುವಲ್ಲಿ ಅಳವಡಿಸಿ, ಯಶಸ್ವಿಯಾಗಿದ್ದರು.

ಸವಾರಿ ಹೇಗೆ?

ಅಂಟಿಕೊಂಡಿರುವ ಚಟದ ಅಥವಾ ವಸ್ತುವಿನೆಡೆಗೆ ತೀವ್ರ ಸೆಳೆತ ಉಂಟಾದಾಗ, ಅದರ ವಿರುದ್ಧ ಹೋರಾಡುವುದು, ಒಂದು ದೊಡ್ಡ ಜಲಪಾತವನ್ನು ತಡೆಯುವ ಹಾಗೆ. ಕೊನೆಗೆ ನೀರಿನ ಶಕ್ತಿಗೆ ನಾವು ಬಗ್ಗಲೇಬೇಕಾಗುತ್ತದೆ. ಆದರೆ, ಜಲಪಾತದ ಪಕ್ಕದಲ್ಲಿ ನಿಂತು ಹರಿಯುವ ನೀರನ್ನು (ಸೆಳೆತ, ಹಾತೊರೆತ, ಉದ್ವೇಗ) ನಿರ್ಲಿಪ್ತತೆಯಿಂದ ಗಮನಿಸುತ್ತಿದ್ದರೆ, ಆ ರಭಸವಾದ ಪ್ರವಾಹವು ತಾನಾಗಿಯೇ ಹರಿದುಹೋಗುತ್ತದೆ.

ವಿಧಾನ

* ಬಲವಾದ ಹಾತೊರೆತ (urge) ಯಾವುದೆಂದು ಗುರುತಿಸಿಕೊಳ್ಳಿ - ಮದ್ಯ, ಸಿಗರೇಟ್, ತಂಬಾಕು ಸೇವಿಸುವ. ಜಂಕ್‍–ಆಹಾರ, ಅಸ್ವಾಭಾವಿಕ ಲೈಂಗಿಕ ಆಸಕ್ತಿಗಳು.

* ಸೆಳೆತ ಉಂಟಾದಾಗ, ಒಂದು ಜಾಗದಲ್ಲಿ ಕುಳಿತುಕೊಂಡು, ದೇಹದ ಸಂವೇದನಗಳನ್ನು ಸೂಕ್ಷ್ಮವಾಗಿ ಗಮನಿಸಿ. (ಮದ್ಯದ ಹಾತೊರೆತ ಉಂಟಾದಾಗ, ಬಾಯಲ್ಲಿ ನೀರೂರಲು ಆರಂಭಿಸಬಹುದು, ಹೊಟ್ಟೆಯಲ್ಲಿ ಬಿಸಿ ಅಲೆ ಆದಂತೆ ಆಗಬಹುದು).

* ಸೆಳೆತದಿಂದ ದೇಹದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ಮನಸ್ಸಿನಲ್ಲೇ ಗ್ರಹಿಸಿಟ್ಟುಕೊಳ್ಳಿ.

* ದೇಹದಲ್ಲಿ ಉಂಟಾಗುತ್ತಿರುವ, ಸಂವೇದನಗಳನ್ನು ನಿರ್ಲಿಪ್ತರಾಗಿ ಗಮನಿಸಿ. ಅವುಗಳಿಗೆ ಯಾವುದೇ ವಿರೋಧಿ ಪ್ರತಿಕ್ರಿಯೆಗಳು ಬೇಡ. (ನಾನು ಈ ಸೆಳೆತವನ್ನು ಸೋಲಿಸಿಯೇ ತೀರುತ್ತೇನೆ, ನಾನು ದುರ್ಬಲನಲ್ಲ – ಎಂಬೆಲ್ಲ ಪ್ರತಿಕ್ರಿಯೆಗಳು ಮನದಲ್ಲಿ ಬಾರದಿರಲಿ).

ಆರಂಭದಲ್ಲಿ ಸೆಳೆತವನ್ನು ತಡೆದುಕೊಳ್ಳುವುದು ಕಷ್ಟವೆನಿಸಿದರೂ, ಆ ಸೆಳೆತ ಅಲೆಯ ರೂಪದ್ದೂ ಹಾಗೂ ಶಾಶ್ವತವಲ್ಲದ್ದೆಂದೂ ನೆನಪಿಸಿಕೊಳ್ಳಿ.

ಸುಮಾರು 20-30 ನಿಮಿಷಗಳಲ್ಲಿಯೇ ಆ ಸೆಳೆತದ ಅಲೆಯು ಅವಸಾನಗೊಂಡು, ನೀವು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತೀರಿ.

ದಿನಚರಿಯಲ್ಲಿ ಈ ಕ್ರಮವನ್ನು ಮುಖ್ಯ ಅಂಗವನ್ನಾಗಿಸಿ. ಅಭ್ಯಾಸದೊಂದಿಗೆ, ಸೆಳೆತವನ್ನು ಹತೋಟಿಗೆ ತರುವುದರಲ್ಲಿ ನೀವು ನಿಪುಣರಾಗುತ್ತೀರಿ.

ಈ ತತ್ವವನ್ನು ಕಲಿಯಲು ನುರಿತ ಗುರುವಿನ ಸಹಾಯ ಪಡೆದರೆ ಒಳಿತು. ಸೂಚನೆಗಳಿರುವ ಮುದ್ರಿತ ಧ್ವನಿಯ ಸಹಾಯದಿಂದಲೂ ಅಭ್ಯಾಸ ಮಾಡಬಹುದು.

ಮೈಂಡ್‍ಫುಲ್‍ನೆಸ್ (mindfulness)

ಇತ್ತೀಚಿಗೆ ಅತ್ಯಂತ ಜನಪ್ರಿಯವಾಗುತ್ತಿರುವ ಧ್ಯಾನದ ಒಂದು ಬಗೆ. ಮಾನವ ತನ್ನ ವಾಸ್ತವಕ್ಕಿಂತ, ಭೂತ ಹಾಗೂ ಭವಿಷ್ಯದ ಬಗ್ಗೆ ಚಿಂತಿಸುವುದೇ ಹೆಚ್ಚು. ಮೈಂಡ್‍ಫುಲ್‍ನೆಸ್ ಧ್ಯಾನವೆಂದರೆ, ಮನಸ್ಸನ್ನು ಸಂಪೂರ್ಣವಾಗಿ ಪ್ರಸ್ತುತ ಕ್ಷಣದ ಮೇಲೆ ಕೇಂದ್ರೀಕರಿಸಿ, ದೇಹದಲ್ಲಾಗುವ ಅತಿ ಸೂಕ್ಷ್ಮ ಸಂವೇದನೆಗಳನ್ನು ನಿರ್ಲಿಪ್ತವಾಗಿ ಗಮನಿಸಿ, ಅವುಗಳಿಂದ ವಿಚಲಿತರಾಗದೇ ಸಾವಧಾನವಾಗಿರುವುದು.

ಬೌದ್ಧ ಸಂಪ್ರದಾಯದಲ್ಲಿ, ಈ ರೀತಿಯ ಧ್ಯಾನಕ್ಕೆ ವಿಶೇಷ ಸ್ಥಾನವಿದ್ದು, ಜ್ಞಾನೋದಯಕ್ಕೆ ಇದೊಂದು ರೀತಿಯ ಮಾರ್ಗವೆಂದು ಹೇಳಲಾಗುತ್ತದೆ. ಒತ್ತಡ ನಿರ್ವಹಣೆ ಹಾಗೂ ಸೆಳೆತವನ್ನು ನಿಯಂತ್ರಿಸುವುದಕ್ಕೂ ಮೈಂಡ್‍ಫುಲ್‍ನೆಸ್ ಧ್ಯಾನ ಅತ್ಯಂತ ಸಹಕಾರಿಯಾಗಿದೆ.

ಸೆಳೆತದ ನಿಯಂತ್ರಣ ಹಾಗೂ ಮೈಂಡ್‍ಫುಲ್‍ನೆಸ್ ಬಗ್ಗೆ ಹೆಚ್ಚಿನ ಮಾಹಿತಿಗೆ: www.jrneuropsych.com.

(ಡಾ. ಶಿವಾನಂದ ಬಿ. ಹಿರೇಮಠ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT