ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಬೆಲ್ಲದಗೆ ಮತ್ತೆ ಧಾರವಾಡ ಪೇಢಾ

Last Updated 15 ಮೇ 2018, 7:38 IST
ಅಕ್ಷರ ಗಾತ್ರ

ಧಾರವಾಡ: ಆಡಳಿತಾರೂಢ ಕಾಂಗ್ರೆಸ್‌ನ ಅಭ್ಯರ್ಥಿ ಇಸ್ಮಾಯಿಲ್‌ ತಮಟಗಾರ ಅವರ ಪ್ರಬಲ ಸ್ಪರ್ಧೆಯ ಮಧ್ಯೆಯೂ ಬಿಜೆಪಿಯ ಅರವಿಂದ ಬೆಲ್ಲದ ಸತತ ಎರಡನೇ ಬಾರಿ ಧಾರವಾಡ ಪೇಢಾದ ಸಿಹಿಯುಂಡಿದ್ದಾರೆ.

ಶತಾಯಗತಾಯ ಅರವಿಂದ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್‌ ಈ ಬಾರಿ ರಣತಂತ್ರ ರೂಪಿಸಿತ್ತು. ಅದರ ಮೊದಲ ಹಂತವಾಗಿ ಜೆಡಿಎಸ್‌ ಅಭ್ಯರ್ಥಿ ಅಲ್ತಾಫ್‌ ಕಿತ್ತೂರ ಅವರ ನಾಮಪತ್ರವನ್ನು ವಾಪಸ್‌ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯೂ ಆಯಿತು. ಎರಡು ಬಾರಿ ಸೋತ ಅನುಕಂಪವೂ ಇಸ್ಮಾಯಿಲ್‌ ಅವರ ಕೈಹಿಡಿಯಲಿಲ್ಲ.

ಇತ್ತ ಅರವಿಂದ ಬೆಲ್ಲದ ಆರು ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಪ್ರಚಾರವನ್ನು ಶುರು ಮಾಡಿಕೊಂಡಿದ್ದರು. ಆಕರ್ಷಕ ಬ್ಯಾನರ್‌ಗಳಲ್ಲಿ ತಮ್ಮ ಆಳೆತ್ತರದ ಫೋಟೊಗಳನ್ನು ಹಾಕಿಸಿ ಸಾಧನೆಗಳ ಪಟ್ಟಿಯನ್ನು ಹೇಳಿಕೊಂಡಿದ್ದರು. ಜೊತೆಗೆ, ತಿಂಗಳ ಹಿಂದೆಯೇ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಪ್ರತಿಯೊಂದು ಬಡಾವಣೆಗಳಿಗೂ ಖುದ್ದಾಗಿ ಭೇಟಿ ನೀಡಿ ಮತ ಯಾಚನೆ ಮಾಡಿದರು. 

ಐಐಟಿ, ಸ್ಮಾರ್ಟ್ ಸಿಟಿ, ಸಿಮೆಂಟ್‌ ರಸ್ತೆಗಳು, ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿದ್ದಾಗಿ ಹೇಳಿಕೊಂಡಿದ್ದರು.

ಇದಕ್ಕಿಂತಲೂ ಮುಖ್ಯವಾಗಿ, ಇಸ್ಮಾಯಿಲ್‌ ವಿರುದ್ಧ ದಾಖಲಾದ ಪ್ರಕರಣಗಳನ್ನು ಮುಂದಿಟ್ಟುಕೊಂಡು, ಇಸ್ಮಾಯಿಲ್‌ ಗೆದ್ದರೆ ನಗರದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. 

‘ನಾನು ಶಾಸಕನಾದ ದಿನದಿಂದ ಯಾವತ್ತೂ ಪೊಲೀಸರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಶಾಂತಿ ಬೇಕು, ಸಂಘರ್ಷ ಬೇಕೋ’ ಎಂದು ಮತದಾರರ ಮುಂದೆ ಆಯ್ಕೆ ಇಡುತ್ತಿದ್ದರು.

ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲಗಳೇ ಇರಲಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿ ಜೆಡಿಎಸ್‌ನಿಂದ ವಲಸೆ ಬಂದ ಇಸ್ಮಾಯಿಲ್‌ಗೆ ಟಿಕೆಟ್ ಕೊಟ್ಟಿದ್ದಕ್ಕೆ ಸಾಕಷ್ಟು ಅಸಮಾಧಾನಗಳಿದ್ದವು. ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಸ್‌.ಆರ್‌. ಮೋರೆ ಅವರು ಬಹಿರಂಗವಾಗಿಯೇ ಇಸ್ಮಾಯಿಲ್‌ ವಿರುದ್ಧ ಬಂಡಾಯ ಸಾರಿದ್ದರು. ಪ್ರಬಲ ಮರಾಠಾ ಸಮುದಾಯದ ಮೋರೆ ಅವರ ಮುನಿಸಿನಿಂದ ಸಹಜವಾಗಿ ಮೋರೆ ಬೆಂಬಲಿಗರ ಮತಗಳು ಪಕ್ಷದ ಅಭ್ಯರ್ಥಿಗೆ ಬರಲಿಲ್ಲ. ಇದು ಅರವಿಂದ ಬೆಲ್ಲದ ಅವರ ಗೆಲುವಿನ ಅಂತರವನ್ನು ಹೆಚ್ಚಿಸಿತು ಎನ್ನಲಾಗುತ್ತಿದೆ. 

ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಕಾರ್ಯಕರ್ತರ ಕೊರತೆಯನ್ನು ಬಹಳಷ್ಟು ಎದುರಿಸಿತು. ಚುನಾವಣೆಯ ದಿನ ಪ್ರತಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ಹಿಂಡೇ ನೆರೆದಿರುತ್ತಿತ್ತು. ಆದರೆ, ಸಾಕಷ್ಟು ಮತಗಟ್ಟೆಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಇರಲಿಲ್ಲ. ಬಿಜೆಪಿ ಪಾಲಿಕೆ ಸದಸ್ಯರು, ವಿವಿಧ ಮೋರ್ಚಾಗಳ ಮುಖಂಡರು ಚುನಾವಣೆ ತಮ್ಮದೇ ಎಂಬಷ್ಟು ಹುಮ್ಮಸ್ಸಿನಿಂದ ದುಡಿದರು. ಆದರೆ, ಇಸ್ಮಾಯಿಲ್‌ ಪರವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಅಂತಹ ಶ್ರಮ ಹಾಕಲಿಲ್ಲ.

ಕಾಂಗ್ರೆಸ್‌ ಪಕ್ಷದಲ್ಲಿನ ಅವರದೇ ಸಮುದಾಯವೂ ಗುಪ್ತವಾಗಿ ಬೆಲ್ಲದ ಪರವಾಗಿ ಕೆಲಸ ಮಾಡಿದ್ದು ಇಸ್ಮಾಯಿಲ್‌ಗೆ ದುಬಾರಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT